ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟವು 9ನೆಯ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಸಾರ್ವಜನಿಕ ವಲಯ ಹಾಗೂ ವಿವಿಧ ಸಮುದಾಯಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಶನಿವಾರ ಮರಾಠ ಸಮಾಜ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತು. ಈ ನಡುವೆ ಐವರು ಹೋರಾಟಗಾರರಿಂದ ಉಪವಾಸ ಸತ್ಯಾಗ್ರಹ ನಡೆಯಿತು.

ನಗರದ ಶಿವಾಜಿ ವೃತ್ತದಿಂದ ಮರಾಠಾ ಸಮಾಜದ ಪ್ರಮುಖರು ಹಾಗೂ ಕಾರ್ಯಕರ್ತರು ಮೆರವಣಿಗೆ ಪ್ರಾರಂಭಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೋರಾಟ ವೇದಿಕೆಗೆ ಆಗಮಿಸಿ ಬೆಂಬಲಿಸಿದರು.

ಮರಾಠ ಸಮಾಜದ ಹಿರಿಯ ಮುಖಂಡ ಮೋಹನ ಮೋರೆ ಮಾತನಾಡಿ, ಧಾರವಾಡದ ಪ್ರತ್ಯೇಕ ಪಾಲಿಕೆ ರಚನೆಯ ಪ್ರಸ್ತಾವನೆಗೆ ರಾಜ್ಯಪಾಲರು ತಕ್ಷಣವೇ ಅಂಕಿತ ಹಾಕಬೇಕು. ಧಾರವಾಡದ ಹಿತದೃಷ್ಟಿಯಿಂದ ಈ ನಿರ್ಧಾರ ಅತ್ಯಂತ ಅನಿವಾರ್ಯ. ಯಾರೆಲ್ಲ ಈ ಪ್ರತ್ಯೇಕ ಪಾಲಿಕೆ ರಚನೆಗೆ ಅಡ್ಡಗಾಲು ಹಾಕುತ್ತಿದ್ದಾರೋ, ಅವರು ಧಾರವಾಡದ ಒಟ್ಟಾರೆ ಅಭಿವೃದ್ಧಿಗೆ ಕಲ್ಲು ಹಾಕುತ್ತಿದ್ದಾರೆ ಎಂದೇ ಅರ್ಥ. ಅಂತಹ ನಾಯಕರು ಅಥವಾ ಶಕ್ತಿಗಳು ದಯವಿಟ್ಟು ಧಾರವಾಡದ ಜನತೆಗೆ ದ್ರೋಹ ಬಗೆಯುವುದನ್ನು ನಿಲ್ಲಿಸಬೇಕು ಎಂದರು.

ಐವರಿಂದ ಉಪವಾಸ:

ಹೋರಾಟದ ಒಂಬತ್ತನೇ ದಿನವಾದ ಶನಿವಾರ ಪ್ರತ್ಯೇಕ ಪಾಲಿಕೆಗಾಗಿ ಆಗ್ರಹಿಸಿ ಐದು ಜನ ಪ್ರಮುಖ ಹೋರಾಟಗಾರರು ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಶಿವಶಂಕರ್ ಹಂಪಣ್ಣವರ, ಶಂಕರ ನೀರಾವರಿ, ಕಿಶೋರ್ ಬಡಿಗೇರ್, ಆಸ್ಮಾ ಸೈಯದ್, ಭಾಷಾಸಾಬ್ ಮುದಗಲ್ ಉಪವಾಸ ಸತ್ಯಾಗ್ರಹ ನಡೆಸಿದರು.


ಸ್ಥಳೀಯ ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪವಾಸ ನಿರತರಿಗೆ ಹಣ್ಣಿನ ರಸ ನೀಡುವ ಮೂಲಕ ಬೆಂಬಲ ಸೂಚಿಸಿದರು. ಧಾರವಾಡದ ಪ್ರತ್ಯೇಕ ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ಆರಂಭವಾಗಿರುವ ಈ ಹೋರಾಟವು ತಾರ್ಕಿಕ ಅಂತ್ಯ ಕಾಣುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೋರಾಟ ಸಮಿತಿಯ ಪ್ರಮುಖರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಮರಾಠ ಸಮಾಜ ಹಾಗೂ ಹೋರಾಟ ಸಮಿತಿಯ ಪ್ರಮುಖರಾದ ಪ್ರಕಾಶ್ ಗಾಟ್ಗೆ, ರಾಜು ಬಿರ್ಜನೂರ್, ಮಹೇಶ್ ಶಿಂಧೆ, ವಿನಯ ಬಾಬರ, ನವೀನ್ ಕದಂ, ವಿಜಯ ಬೋಸ್ಲೆ, ಮೋಹನ್ ಕೆಮ್ಕೆರ್, ಈರಣ್ಣ ಕದಂ, ಶಿವಾಜಿ ಗೇಟಿಗೆ, ಸುನಿಲ ಮೋರೆ, ಶಿವಾಜಿ ಮದನಿ, ದೀಪಕ್ ಶಿಂಧೆ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು