ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರದ ಕಡೆಗೆ ಒಲವು ಜಾಸ್ತಿಯಾಗಿರುವ ಸಂದರ್ಭದಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯೂ ಬಲಗೊಂಡಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಚಿತ್ರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
650ಕ್ಕೂ ಹೆಚ್ಚು ಮಕ್ಕಳು ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ಪೋಷಕರಿಗೂ ಮಕ್ಕಳು ಶಿಕ್ಷಣವಂತರಾಗಲಿ ಎನ್ನುವ ಆಸೆ ಇರುತ್ತದೆ. 3 ಕೋಟಿ ರು. ಕಾಲೇಜು ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದೇನೆ. ಒಂದು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. 10.5 ಕೋಟಿ ರು.ಗಳನ್ನು ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕೆ ಮಂಜೂರು ಮಾಡಿದ್ದೇನೆ.ಪ್ರತ್ಯೇಕ ಕೊಠಡಿಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುವುದು. ಕಂಪ್ಯೂಟರ್ ಲ್ಯಾಬ್‍ಗೆ 10 ಲಕ್ಷ ರು. ಕೊಟ್ಟಿದ್ದೇನೆ. ತಾಳ್ಯದಲ್ಲಿ ರೈತರ ಕಷ್ಟಗಳನ್ನು ನೋಡಿ ಮತ್ತೊಂದು ಲಿಫ್ಟ್ ಕೊಡಲಾಗುತ್ತೆ. ಭದ್ರಾ ಪ್ರಾಜೆಕ್ಟ್‍ನಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶನಿವಾರ ಪೂಜೆ ಮಾಡುತ್ತೇನೆಂದು ತಿಳಿಸಿದರು.
ಬಡವರ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಿಗೆ ಹದಿನೈದು ಬಸ್‍ಗಳನ್ನು ಕೊಟ್ಟಿದ್ದೇನೆ. ಭಾರತದಲ್ಲಿ ಯಾವ ಶಾಸಕನು ಉಚಿತವಾಗಿ ಬಸ್‍ಗಳ ವ್ಯವಸ್ಥೆ ಕಲ್ಪಿಸಿಲ್ಲ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣದಿಂದ ಮಾತ್ರ ಬದುಕು ಹಸನಾಗಲು ಸಾಧ್ಯವೆಂದು ಹೇಳಿದ್ದಾರೆ. ಹಾಗಾಗಿ ನನ್ನ ಕ್ಷೇತ್ರದಲ್ಲಿ ಶಿಕ್ಷಣ, ಕರೆಂಟ್ ಹಾಗೂ ನೀರಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೋಹನ್, ದೇವರಾಜ್, ಮಂಜುನಾಥ ನಾಯ್ಕ, ಲಾವಣ್ಯ ಎಸ್. ಶ್ರೀನಿವಾಸ್ ಜೆ. ರಮ್ಯ ಪಿ. ಭೋದಕ ಭೋದಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.