ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಶಿಕ್ಷಕ ಅಕ್ಷರ ಕಲಿಸುವ ಮೂಲಕ ದೇಶಕ್ಕೆ ಭದ್ರ ಬೂನಾದಿ ಹಾಕಿ ಉತ್ತಮ ಪ್ರಜೆಗಳನ್ನು ರೂಪಿಸಿದರೆ, ವೈದ್ಯರು ಆರೋಗ್ಯವನ್ನು ರಕ್ಷಿಸುವರು ಎಂದು ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರಸ್ತೆಯಲ್ಲಿ ದಾನಿಗಳಾದ ಎಚ್.ಸಿ.ಬಸವರಾಜು ಮತ್ತು ಎಚ್.ಸಿ.ವೀರಭದ್ರಪ್ಪ ಇವರ ಸ್ಮರಣಾರ್ಥ ಉಚಿತವಾಗಿ ಸ್ಥಾಪಿಸಿರುವ ಕಟ್ಟಡದಲ್ಲಿ ಶ್ರೀಶಾರದಾ ಕಣ್ಣಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪಾವಗಡ, ಸಿದ್ದಗಂಗಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತುಮಕೂರು ಇವರ ಸಹಯೋಗದೊಂದಿಗೆ ಇತ್ತಿಚೆಗೆ ಏರ್ಪಡಿಸಿದ್ದ ಡಯಾಲಿಸಿಸ್ ಮತ್ತು ಉಚಿತ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ ಮಾಡಿ ಮಾತನಾಡಿದರು.
ಉಳ್ಳವರು ಉದಾರವಾಗಿ ಸಮಾಜಕ್ಕೆ ನೀಡಿ ಹಿತ ಕಾಪಾಡಬೇಕು. ಜಗತ್ತಿನಲ್ಲಿ ಹೆಣ್ಣು , ಮಣ್ಣನ್ನು ದಾನ ಮಾಡಬಹುದು. ಆದರೆ ಕಣ್ಣು ನೀಡುವ ಸ್ವಾಮೀಜಿ ಏಂದರೆ ಅದು ಪಾವಗಡದ ಜಪಾನಂದಸ್ವಾಮಿಜಿ, ಇವರು ಶ್ರೀಶಾರದಾ ಕಣ್ಣಿನ ಆಸ್ಪತ್ರೆಯ ಮೂಲಕ ಈಗಾಗಲೇ 50 ಸಾವಿರಕ್ಕೂ ಅಧಿಕ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ ಜೀವನದ ಸಾರ್ಥಕತೆ ಪಡೆದಿದ್ದು, ಇವರ ಜತೆಗೆ ನಮ್ಮ ಸಿದ್ಧಗಂಗಾ ಆಸ್ಪತ್ರೆ ಕೂಡ ಜೊತೆಯಾಗಿದ್ದು, ಡಯಾಲಿಸಿಸ್ ಸೆಂಟರನ್ ಜವಾಬ್ದಾರಿ ಹೊತ್ತಿದ್ದೇವೆ. ರೋಗಿಗಳು ಹೆಚ್ಚಾದರೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದ ಅವರು, ವಿಶೇಷ ಸೌಲಭ್ಯಗಳುಳ್ಳ ಈ ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳನ್ನು ಶ್ರೀಸಾಮಾನ್ಯರಿಗೆ ನೀಡುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ದಾನಿಗಳ ಉದಾರತೆಯನ್ನು ಕೊಂಡಾಡಿದರು.ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಜಪಾನಂದ ಮಹಾರಾಜ್ ಮಾತನಾಡಿ, ಸರ್ಕಾರಗಳು ಬಡತನದ ರೇಖೆಯ ಕೆಳಗಿರುವ ಬಡವರ ಕಲ್ಯಾಣಕ್ಕಾಗಿ ರೂಪಿಸಿರುವ ಸೌಲಭ್ಯಗಳು ಸಕಾಲದಲ್ಲಿ ದೊರಕದೇ ಉಳ್ಳವರ ಪಾಲಾಗುತ್ತಿವೆ. ವಿಜ್ಞಾನದಿಂದ ನಾವುಗಳು ಆಕಾಶದ ಅಂಗಳಕ್ಕೆ ಅಡಿ ಇರಿಸಿದ್ದು, ನೆರಹೊರೆಯವರ ಮತ್ತು ಸಮಾಜದ ಅಂತಃಕರಣದ ಅಂಗಳಕ್ಕೆ ಪ್ರವೇಶಿಸಲು ಮೀನ ಮೇಶ ಏಣಿಸುತ್ತಿದ್ದೇವೆ. ಕಣ್ಣು ವ್ಯಕ್ತಿಗೆ ಬೆಳಕು ನೀಡಿದರೆ, ಡಯಾಲಿಸಿಸ್ ಬದುಕು ಕಟ್ಟಿಕೊಡುತ್ತದೆ. ಈ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರಕಿಸಲು ಸಿದ್ಧಗಗಂಗಾ ಶ್ರೀಗಳ ಜೊತೆಗೂಡಿ ಮಧುಗಿರಿಯಲ್ಲಿ ಪ್ರಾರಂಭಿಸಿದ್ದೇವೆ. ಇದನ್ನು 15 ವರ್ಷದ ಒಳಗಿನ ದೃಷ್ಠಿ ದೋಷವಿರುವ ಮಕ್ಕಳಿಗೆ ವರದಾನ ಎಂದರು.
ಸಿದ್ಧಗಂಗಾ ಆಸ್ಪತ್ರೆಯ ಕಾರ್ಯದರ್ಶಿ ಡಾ.ಸ್ವಾಮಿ ಮಾತನಾಡಿ, ಎಚ್.ಸಿ.ಬಸವರಾಜು ಮತ್ತು ಎಚ್.ಸಿ.ವೀರಭದ್ರಪ್ಪ ಕುಟುಂಬಸ್ಥರು ಅವರ ಸ್ಮರಣಾರ್ಥವಾಗಿ ಕಟ್ಟಡವನ್ನು ದಾನವಾಗಿ ನೀಡಿದ್ದು, ಎಲ್ಲ ನಿರ್ವಹಣೆಗೆ ತಿಂಗಳಿಗೆ 4.5ಲಕ್ಷ ವೆಚ್ಚವಾಗಲಿದ್ದು, 3 ತಿಂಗಳಿಗೆ ಆಗುವ ವೆಚ್ಚವನ್ನು ಇಂದೇ ನಮಗೆ ನೀಡಿದ್ದಾರೆ. ಇಂತಹ ಆರೋಗ್ಯ ರಕ್ಷಣೆಗೆ ದಾನ ನೀಡಲು ಮುಂದಾಗುವ ಹೃದಯ ಶ್ರೀಮಂತಿಕೆಯ ಕುಟುಂಬಗಳು ಸಾವಿರದಷ್ಟಾಗಲಿ ಎಂದರು.ಸಮಾರಂಭದಲ್ಲಿ ಕಲ್ಮಠದ ಪೀಠಾಧಿಪತಿ, ಸಿರಿಗೆದ್ದೆಯ ಶ್ರೀಗಳು, ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್, ಸಿಇಒ ಡಾ.ಸಂಜೀವ್ ಕುಮಾರ್, ಲಯನ್ಸ್ ಕ್ಲಬ್ ನ ಜಿ.ಎಸ್.ಮಲ್ಲೇಶಯ್ಯ, ಸುರೇಶ್, ರಾಮು, ದಾನಿಗಳ ಕುಟುಂಬದ ಎಚ್.ಬಿ.ಶಿವಕುಮಾರ್, ಎಚ್.ಎಂ.ಶಿವಕುಮಾರ್, ಎಚ್.ವಿ.ರುದ್ದೇರಶ್, ಅನುರಾಧ, ಉಮಾಶಂಕರ್, ಅಕ್ಷಯ್, ವೈದ್ಯರಾದ ಡಾ.ಅಭಿಷೇಕ್, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಎಂಜಿಎಂ ಬಾಲಿಕಾ ಪ್ರೌಢಶಾಲೆಯ ಎಂ.ಎಸ್.ಶಂಕರನಾರಾಯಣ್, ಆಶ್ರಮದ ಮಧುಗಿರಿ ಶಾಖೆಯ ಸಂಯೋಜಕ ಶಶಿಕುಮಾರ್ ಸೇರಿದಂತೆ ಅನೇಕರು ಇದ್ದರು.