ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಧಿದೇವತೆ, ಪುರಾಣ ಪ್ರಸಿದ್ಧ ಮಾಂಡವ್ಯ ಕ್ಷೇತ್ರಾಧಿಪತಿಯಾದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಸಹಸ್ರಾರು ಮಂದಿ ಭಕ್ತರ ಜಯಘೋಷದ ನಡುವೆ ಗುತ್ತಲು ಬಡಾವಣೆಯಲ್ಲಿ ವಿಜೃಂಭಣೆಯಿಂದ ನಡೆಯಿತು.ಉತ್ತರಾಯಣ, ಶಿಶಿರಋತು, ಬೆಳಗ್ಗೆ ೧೧.೧೨ ಗಂಟೆಗೆ ಸಲ್ಲುವ ಶುಭ ವೃಷಭ ಲಗ್ನ ಮುಹೂರ್ತದಲ್ಲಿ ಅಲಂಕರಿಸಿದ ಶ್ರೀ ಉಮಾ ಮಹೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡಿದ್ದ ಬ್ರಹ್ಮ ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಭಕ್ತರ ಜಯಘೋಷದ ನಡುವೆ ರಥ ಬೀದಿಯಲ್ಲಿ ರಥವನ್ನು ಎಳೆಯಲಾಯಿತು.
ಇದಕ್ಕೂ ಮುನ್ನ ದೇವಳದಲ್ಲಿ ಪಂಚಾಮೃತ ಅಭಿಷೇಕ, ಅನುಜ್ಞೆಪೂಜೆ, ರುದ್ರಾಭಿಷೇಕ, ಪಂಚಮೂರ್ತಿ ಹವನ- ಹೋಮ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಬೆಳಗಿನ ಜಾವ ೫ ಗಂಟೆಗೆ ರಥಕ್ಕೆ ತಾಲೂಕಿನ ಚನ್ನಪ್ಪನದೊಡ್ಡಿ ಗ್ರಾಮಸ್ಥರು ಕುರಿ ಬಲಿ ನೀಡುತ್ತಾರೆ. ಬಳಿಕ ದೇವಾಲಯದ ವತಿಯಿಂದ ರಥಶುದ್ಧಿ, ಬಲಿಪೂಜೆ, ರಥ ಹಾದುಹೋಗುವ ಪ್ರಮುಖ ಬೀದಿಯಲ್ಲಿ ವಾಸ್ತುಬಲಿ ಪ್ರದಾನ ನಡೆಸಲಾಯಿತು. ಬಳಿಕ ರಥೋತ್ಸವ ಸಾಂಗೋಪಸಾಂಗವಾಗಿ ನೆರವೇರಿತು.ಚಂದ್ರಗ್ರಹಣ: ಸಂಜೆಗೆ ರಥೋತ್ಸವ ಅಂತ್ಯ:
ರಥವನ್ನು ಎಳೆದು ತಂದು ಪೂಜಾ ಮಂಟಪದ ಬಳಿ ನಿಲ್ಲಿಸಲಾಯಿತು. ಸಾಮಾನ್ಯವಾಗಿ ರಾತ್ರಿ ಸುಮಾರು ೮ ಗಂಟೆಯವರೆಗೂ ರಥೋತ್ಸವ ನಡೆಯುತ್ತಿತ್ತು. ಆದರೆ, ಚಂದ್ರಗ್ರಹಣವಿರುವ ಕಾರಣ ಸಂಜೆ ರಥದಿಂದ ಸ್ವಾಮಿಯನ್ನು ಕೆಳಗಿಳಿಸಿ ಮತ್ತೊಮ್ಮೆ ರಥಬೀದಿಯಲ್ಲಿ ಉತ್ಸವ ಮಾಡಿದ ಬಳಿಕ ದೇವಾಲಯದ ಸ್ವಸ್ಥಾನಕ್ಕೆ ಹಿಂದಿರುಗಿಸಲಾಗುತ್ತದೆ.
ರಥೋತ್ಸವ ನಡೆಯುವ ವೇಳೆ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಗುವುದು. ಉತ್ಸವ ಮುಗಿದು ಸ್ವಾಮಿಯು ಸ್ವಸ್ಥಾನಕ್ಕೆ ತೆರಳುವವರೆಗೂ ಬಾಗಿಲನ್ನು ತೆರೆಯುವುದಿಲ್ಲ. ಚಂದ್ರಗಹಣದ ಕಾರಣ ಸಂಜೆ ೫.೪೫ರ ಹೊತ್ತಿಗೆ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಕೊಂಡೊಯ್ದು ಪೂಜಾ ಕಾರ್ಯ ಕೈಗೊಂಡ ನಂತರ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಯಿತು. ರಾತ್ರಿ ಸುಮಾರು ೮ ಗಂಟೆಯ ಹೊತ್ತಿಗೆ ದೇವಾಲಯದ ಬಾಗಿಲು ತೆರೆದು ಹೋಮ, ಪುಣ್ಯ, ಅಭಿಷೇಕ ಪೂಜಾ ಕಾರ್ಯದ ನಂತರ ರಾತ್ರಿ ೯ ಗಂಟೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ದೇವಾಲಯದ ಅರ್ಚಕ ಗಿರೀಶ್ ಅವರು ತಿಳಿಸಿದರು.
ಶ್ರೀ ಅರ್ಕೇಶ್ವರ ಸ್ವಾಮಿಯ ರಥೋತ್ಸವದ ನಿಮಿತ್ತ ಪ್ರತಿ ಮನೆ ಮನೆಯ ಮುಂದೆಯೂ ಭಕ್ತರಿಗೆ ಬೆಲ್ಲದ ಪಾನಕ ಮತ್ತು ನೀರು ಮಜ್ಜಿಗೆಯನ್ನು ವಿತರಿಸುವ ಮೂಲಕ ಬಿಸಿಲ ಬೇಗೆಯ ದಣಿವನ್ನು ನೀಗಿಸಲಾಯಿತು. ಸಹಸ್ರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.