ಸಾರಾಂಶ
ಮಂಗಳೂರು: ಫ್ರಾನ್ಸ್ ದೇಶದಲ್ಲಿ ಸೆಪ್ಟೆಂಬರ್ 13ರಿಂದ ನಡೆಯಲಿರುವ ಜಗತ್ತಿನ ಅತಿ ದೊಡ್ಡ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಭಾರತದ ಪ್ರತಿನಿಧಿ ತಂಡವಾಗಿ ಮಂಗಳೂರಿನ ಸರ್ವೇಶ್ ರಾವ್ ನೇತೃತ್ವದ ‘ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡವು ಭಾಗವಹಿಸಲಿದೆ.ಟೀಮ್ ಮಂಗಳೂರು ತಂಡವು ಈಗಾಗಲೇ ಜಾಗತಿಕ ಮಟ್ಟದಲ್ಲಿ 12 ದೇಶಗಳ ಗಾಳಿಪಟ ಉತ್ಸವಗಳಲ್ಲಿ ಭಾರತದ ಸಾಂಸ್ಕೃತಿಕ ವಿಷಯಗಳನ್ನು ಗಾಳಿಪಟ ವಿನ್ಯಾಸವನ್ನಾಗಿ ಬೃಹತ್ ಗಾಳಿಪಟಗಳನ್ನು ರಚಿಸಿ ಫ್ರಾನ್ಸ್, ಇಂಗ್ಲೆಂಡ್, ಕೆನಡಾ, ಇಟೆಲಿ, ಕೊರಿಯಾ, ಹಾಂಗ್ ಕಾಂಗ್, ಇಂಡೋನೆಷ್ಯಾ, ಕತಾರ್, ದುಬೈ, ಶ್ರೀಲಂಕಾ ದೇಶಗಳಲ್ಲಿ ಭಾಗವಹಿಸಿವೆ.
ಈ ಸಲದ ಗಾಳಿಪಟ ಉತ್ಸವಕ್ಕೆ ರಥದ ವಿನ್ಯಾಸದ ಗಾಳಿಪಟ ಈಗ ತಯಾರಿಯಾಗುತ್ತಿದೆ. 18 ಅಡಿ ಎತ್ತರ 10 ಅಡಿ ಅಗಲದ ಈ ಗಾಳಿಪಟದ ಕಲಾ ವಿನ್ಯಾಸವನ್ನು ದಿನೇಶ್ ಹೊಳ್ಳ ಮಾಡಿದ್ದು, ಗಾಳಿಪಟ ರಚನೆಯಲ್ಲಿ ಪ್ರಾಣೇಶ್ ಕುದ್ರೋಳಿ, ಸತೀಶ್ ರಾವ್, ಅರುಣ್ ಸಹಕರಿಸುತ್ತಿದ್ದಾರೆ. ಗಾಳಿಪಟದ ಹೊಲಿಗೆಯನ್ನು ಸರ್ವೇಶ್ ರಾವ್ ಮಾಡುತ್ತಿದ್ದಾರೆ.ಇಡೀ ಜಗತ್ತೇ ಇಂದು ನೀರಿನ ಬಗ್ಗೆ ಬರಗಾಲವನ್ನು ಅನುಭವಿಸುತ್ತಿದೆ. ನೀರು ಈ ಭುವಿಯ ಸಕಲ ಜೀವ ಸಂಕುಲಗಳ ಚೇತನಾ ಶಕ್ತಿ, ಪ್ರತಿ ನೀರಿನ ಹನಿಯೂ ತುಂಬಾ ಮಹತ್ವದ್ದು, ನೀರಿನ ಸಂರಕ್ಷಣೆಯ ಬಗ್ಗೆ ಪಲ್ಲಕ್ಕಿಯಲ್ಲಿ ನೀರಿನ ತಂಬಿಗೆಯನ್ನು ಇಟ್ಟು ನೀರು ಈ ಭುವಿಯ ಪ್ರತ್ಯಕ್ಷ ದೇವರು ಎಂಬಂತೆ ಇನ್ನೊಂದು ಗಾಳಿಪಟವನ್ನು ಮಾಡಲಾಗುತ್ತಿದೆ. ಇದರಲ್ಲಿ ಮೇಲೆ ಆಕಾಶ, ಕೆಳಗೆ ಬೆಟ್ಟ, ನಡುವೆ ನೀರಿನ ತಂಬಿಗೆ, ಬಾಲಂಗೋಚಿಯಲ್ಲಿ ಮರ, ಗಿಡಗಳ ಹಸಿರು ಹಂದರವನ್ನು ಕೆಳಗಡೆ ನೀರಿನ ಶೇಖರಣೆಯನ್ನು, ಅಂದರೆ ಹಸಿರು ಪರಿಸರ ಇದ್ದರೆ ನೀರು ಸಹಜವಾಗಿಯೇ ಸಂಗ್ರಹವಾಗುತ್ತದೆ ಎಂಬ ಸಂದೇಶವನ್ನು ಸಾರಲಾಗಿದೆ. ರಿಪ್ ಸ್ಟಾಪ್ ನೈಲಾನ್ ಬಟ್ಟೆ ಯಿಂದ ಅಪ್ಲಿಕ್ ಮಾದರಿಯಲ್ಲಿ ಈ ಗಾಳಿಪಟವನ್ನು ತಯಾರಿಸಲಾಗುತ್ತಿದೆ. ಮಂಗಳೂರಿನ ಸರ್ವೇಶ್ ರಾವ್ ಅವರ ನಿವಾಸದಲ್ಲಿ ಈ ಗಾಳಿಪಟದ ತಯಾರಿ ಆಗುತ್ತಿದೆ.