ಸಾರಾಂಶ
ದ.ಕ ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆಯಲ್ಲಿ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಕಂಬಳ ಸಮಿತಿಗಳ ವ್ಯವಸ್ಥಾಪಕರ ಸಭೆಯಲ್ಲಿ ಸರ್ಕಾರದ ಅನುದಾನದ ಕುರಿತು ಚರ್ಚೆ ನಡೆಯಿತು.
ಮೂಡುಬಿದಿರೆ: ಕಳೆದ ವರ್ಷ ಬೆಂಗಳೂರು ಕಂಬಳಕ್ಕೆ 1 ಕೋಟಿ ರು., ಪುತ್ತೂರು ಹಾಗೂ ಉಪ್ಪಿನಂಗಡಿ ಕಂಬಳಗಳಿಗೆ ಅನುದಾನ ಬಿಡುಗಡೆಯಾಗಿದೆ. ಆದರೆ ಅವಿಭಜಿತ ದ.ಕ ಜಿಲ್ಲೆಯಲ್ಲಿ ನಡೆಯುವ ಉಳಿದ ಎಲ್ಲ ಕಂಬಳಗಳನ್ನು ಕಡೆಗಣಿಸಲಾಗಿದೆ ಎಂದು ವಿವಿಧ ಕಂಬಳ ಸಮಿತಿಯ ವ್ಯವಸ್ಥಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ.ಕ ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆಯಲ್ಲಿ ಇಲ್ಲಿನ ಸಮಾಜಮಂದಿರದಲ್ಲಿ ನಡೆದ ಕಂಬಳ ಸಮಿತಿಗಳ ವ್ಯವಸ್ಥಾಪಕರ ಸಭೆಯಲ್ಲಿ ಸರ್ಕಾರದ ಅನುದಾನದ ಕುರಿತು ಚರ್ಚೆ ನಡೆಯಿತು.ಸರ್ಕಾರದ ಕ್ರೀಡಾ ಇಲಾಖೆ ಬಿಡುಗಡೆ ಮಾಡಿರುವ 40 ಲಕ್ಷ ರು. ಅನುದಾನವನ್ನು ದ.ಕ ಹಾಗೂ ಉಡುಪಿ ಜಿಲ್ಲೆಗಳ ಹಿರಿತನದ ಆಧಾರದಲ್ಲಿ ಕಂಬಳ ಸಮಿತಿಗಳಿಗೆ ಸಮಾನ ಹಂಚಿಕೆ ಮಾಡುವುದು, ಜಿಲ್ಲಾ ಕಂಬಳ ಸಮಿತಿಯ ಖಾತೆಯ ಮುಖಾಂತರ ಕಂಬಳ ಸಮಿತಿಗಳಿಗೆ ವ್ಯವಸ್ಥಾಪಕರಿಗೆ ವರ್ಗಾಯಿಸುವುದ ಕುರಿತು ಸಂಬಂಧಪಟ್ಟ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಯಿತು. ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಎಲ್ಲ 23 ಕಂಬಳ ಸಮಿತಿಗೆ ತಲಾ 5 ಲಕ್ಷ ರು. ಅನುದಾನ ಒದಗಿಸುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ಆದರೆ ಈ ಬಾರಿ 40 ಲಕ್ಷ ರು. ಅನುದಾನ ಮಾತ್ರ ಬಿಡುಗಡೆಯಾಗಿದೆ. ಅದರಲ್ಲಿ ದ.ಕ ಜಿಲ್ಲೆಯ ಹತ್ತು ಕಂಬಳಗಳಿಗೆ ಉಡುಪಿ ಜಿಲ್ಲೆಯ ಹತ್ತು ಕಂಬಳಗಳಿಗೆ ಬಿಡುಗಡೆಯಾಗಿರುತ್ತದೆ ಎಂದರು.ಹಿರಿತನದ ಆಧಾರದಲ್ಲಿ ಕಂಬಳಗಳನ್ನು ಪಟ್ಟಿ ಮಾಡಲಾಗಿದೆ. ಒಂದು ವೇಳೆ ಅನುದಾನದ ಮೊತ್ತ ಜಿಲ್ಲಾ ಕಂಬಳ ಸಮಿತಿಗೆ ವರ್ಗಾಯಿಸಲಾಗದಿದಲ್ಲಿ ಜಿಲ್ಲಾ ಕಂಬಳ ಸಮಿತಿಯ ಸಮ್ಮುಖದಲ್ಲಿ ಚೆಕ್ ವಿತರಣೆ ಮಾಡುವಂತೆ ಮನವಿ ಸಲ್ಲಿಸುವ ಕುರಿತು ಚಿಂತನೆ ನಡೆಸಿದ್ದೇವೆ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅವಿಭಜಿತ ಜಿಲ್ಲೆಯಲ್ಲಿ ನಡೆಯುವ ಎಲ್ಲ ಕಂಬಳಗಳಿಗೆ ತಲಾ ಐದು ಲಕ್ಷ ರು. ಅನುದಾನ ಬಿಡುಗಡೆಗೊಳಿಸುವ ಪ್ರಯತ್ನ ನಿರಂತವಾಗಿರುತ್ತದೆ ಎಂದರು.ಗೌರವಾಧ್ಯಕ್ಷ ಏರ್ಮಾಳ್ ರೋಹಿತ್ ಹೆಗ್ಡೆ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಳ್ಳೂರು, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್, ಕೋಶಾಧಿಕಾರಿ ಚಂದ್ರಹಾಸ್ ಸನಿಲ್ ಹಾಗೂ ವಿವಿಧ ಕಂಬಳ ಸಮಿತಿಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು. 12ರಂದು ನಡೆಯುವ ನಮ್ಮ ಕಂಬಳ ಪ್ರಶಸ್ತಿ 2024-25 ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. ನಮ್ಮ ಕುಡ್ಲ ವಾಹಿನಿಯ ಮುಖ್ಯಸ್ಥ ನೀಲಾಕ್ಷ ಕರ್ಕೇರ, ನಿರೂಪಕ ನವನಿತ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.