ಸಾರಾಂಶ
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಮಾಧ್ಯಮ ಕೇಂದ್ರ ಮತ್ತು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಾನುವಾರ ಹಲಸು ಮೌಲ್ಯವರ್ಧನೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಗ್ರಾಮ ಸಂಪರ್ಕ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶದ ಜನರನ್ನು ಅದರಲ್ಲೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ತರಬೇತಿ ಕಾರ್ಯಾಗಾರಗಳು ಪೂರಕ ಎಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಕೃಷ್ಣಪ್ಪ ಸಾಲ್ಯಾನ್ ಅಭಿಪ್ರಾಯಪಟ್ಟಿದ್ದಾರೆ.ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಮಾಧ್ಯಮ ಕೇಂದ್ರ ಮತ್ತು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕೋಟೆಕಾರು ಬೀರಿ ಜಂಕ್ಷನ್ ಕೆ. ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧದಲ್ಲಿ ಭಾನುವಾರ ನಡೆದ ಹಲಸು ಮೌಲ್ಯವರ್ಧನೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಲಸು ಮೌಲ್ಯವರ್ಧನೆಯ ಕುರಿತು ಪ್ರಕೃತಿ ಫುಡ್ಸ್‌ನ ಪ್ರಕಾಶ್ ಪ್ರಭು ಮಾಹಿತಿ ನೀಡಿ, ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಹಲಸು ಕೃಷಿ ಇದ್ದರೂ ಅದರ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದನ್ನು ಮನೆಯಿಂದಲೇ ಸ್ವುದ್ಯೋಗವಾಗಿ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆಯನ್ನು ಪಡೆದುಕೊಳ್ಳುವಂತಾಗಬೇಕು ಎಂದರು.ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹಾಗೂ ವಿಆರ್‌ಡಿಎಫ್ ಕಾರ್ಯದರ್ಶಿ ಅಚ್ಯುತ ಗಟ್ಟಿ, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ. ರಹಿಮಾನ್ ಕೋಡಿಜಾಲ್, ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ, ನಿರ್ದೇಶಕರಾದ ಗಂಗಾಧರ ಉಳ್ಳಾಲ್, ಅರುಣ್ ಉಳ್ಳಾಲ್, ರಾಘವ ಆರ್. ಉಚ್ಚಿಲ್ ಉಪಸ್ಥಿತರಿದ್ದರು.ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ತೋಟಗಾರಿಕಾ ಇಲಾಖೆ ಮಂಗಳೂರು, ಕೃಷಿ ಇಲಾಖೆ ಮಂಗಳೂರು, ದ.ಕ.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಹಯೋಗದೊಂದಿಗೆ ಕಾರ್ಯಕ್ರಮ ನೆರವೇರಿತು.