ದೊಡ್ಡಬಳ್ಳಾಪುರ: ತಾಲೂಕಿನ ರಾಜಘಟ್ಟ ಪುರಾತನ ಬೌದ್ಧ ನೆಲೆಯಾಗಿದ್ದು, ಇಲ್ಲಿನ ಬೌದ್ಧ ಕುರುಹುಗಳ ಅಧ್ಯಯನ ಮತ್ತು ರಕ್ಷಣೆಗೆ ಅಧ್ಯಯನ ಸಮಿತಿ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಭವನದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಇಲ್ಲಿನ ಬುದ್ಧನ ಇತಿಹಾಸದ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಮನವಿ ಕೊಟ್ಟಿದ್ದಾರೆ. ರಾಜಘಟ್ಟದಲ್ಲಿ ಬೌದ್ಧ ಸಂಸ್ಕೃತಿಯ ಅಮೂಲ್ಯವಾದಂತಹ ಸಾವಿರಾರು ವರ್ಷಗಳ ಪುರಾತನ ಅವಶೇಷಗಳು ಬೆಳಕಿಗೆ ಬಂದಿವೆ. ಇದರ ಅಧ್ಯಯನಕ್ಕೆ ಸೂಚಿಸುತ್ತೇನೆ. ಅಧಿಕಾರಿಗಳ ತಂಡಗಳನ್ನು ರಚಿಸಿ ಈ ಭಾಗದಲ್ಲಿನ ಬೌದ್ದ ಸಂಸ್ಕೃತಿ, ಆ ಪರಂಪರೆಯನ್ನು ಉಳಿಸುವಂತಹ ಕೆಲಸ ಮಾಡುತ್ತೇವೆ ಎಂದರು.ಪ್ರಜಾ ಸೇವಾ ಇಲಾಖೆ ಸ್ಥಾಪನೆ:
ನಾನು ಮುಖ್ಯಮಂತ್ರಿ ಆದ ತಕ್ಷಣ ಒಂದು ಹೊಸ ಇಲಾಖೆ ಮಾಡಲು ಹೊರಟಿದ್ದೇನೆ. ಹೋರಾಟ ಮಾಡುವವರಿಗೆ, ನೊಂದ ಜನರಿಗೆ ಧ್ವನಿಯನ್ನು ತುಂಬಲು, ಅವರ ವಿಚಾರ ತಿಳಿಯಲು ಪ್ರಜಾ ಸೇವಾ ಇಲಾಖೆ ಸ್ಥಾಪನೆಗೆ ಮುಂದಾಗಿದ್ದೇವೆ ಎಂದರು.ಗ್ಯಾರೆಂಟಿ ಯೋಜನೆಗಳು ನಿಲ್ಲೋದಿಲ್ಲ:
ನಾವೆಲ್ಲರೂ ನಾಯಕರಾಗಿ ಅಧಿಕಾರ ನಡೆಸುತ್ತಿದ್ದೇವೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಸಾಧ್ಯವಾಗಿದೆ. ರಾಜ್ಯದಲ್ಲಿ ಪ್ರತಿ ಸಂದರ್ಭದಲ್ಲಿ ಸಂವಿಧಾನ ರಕ್ಷಣೆ ಮಾಡುವವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. 3 ವರ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲದು, ಮತ್ತೆ 2028-29ರಲ್ಲಿ ರಾಜ್ಯ, ರಾಷ್ಟ್ರದಲ್ಲಿ ಸರಕಾರ ರಚನೆ ಆಗುವ ಆತ್ಮವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
