30ರಂದು ಟಿಇಟಿ ಪರೀಕ್ಷೆ, ಪಾವಿತ್ರ‍್ಯತೆ ಕಾಪಾಡಿ

| Published : Jun 26 2024, 12:34 AM IST

ಸಾರಾಂಶ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂ.30ರಂದು ರಾಜ್ಯಾದ್ಯಂತ ನಡೆಯಲಿದೆ. ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದ್ದಾರೆ.

ದಾವಣಗೆರೆ: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂ.30ರಂದು ರಾಜ್ಯಾದ್ಯಂತ ನಡೆಯಲಿದೆ. ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ಮಂಗಳವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಟಿಇಟಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಇಟಿ ಪರೀಕ್ಷೆಯಲ್ಲಿ ಲೋಪದೋಷಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷಾ ಪಾವಿತ್ರ‍್ಯತೆ ಗೆ ಯಾವುದೇ ಧಕ್ಕೆ ಆಗಬಾರದು. ಕೇಂದ್ರಗಳ ಅಧೀಕ್ಷಕರು ಸೂಚನೆ ನೀಡಿ, ಎಲ್ಲ ಮೂಲಸೌಕರ್ಯ ಕಲ್ಪಿಸಲು ತಿಳಿಸಿದರು.

ಜೂನ್ 30ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ 11 ಕೇಂದ್ರಗಳಲ್ಲಿ 3805 ಮತ್ತು ಮಧ್ಯಾಹ್ನ 2ರಿಂದ ಸಂಜೆ 4.30 ರವರೆಗೆ 19 ಕೇಂದ್ರಗಳಲ್ಲಿ 6150 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು. ಪರೀಕ್ಷಾ ಅವ್ಯವಹಾರ ತಡೆಯಲು ಹಾಗೂ ಸುಗಮ ಪರೀಕ್ಷೆಗೆ ನಡೆಸಲು ಪೂರಕವಾಗಿ ಕೇಂದ್ರದ ಸುತ್ತಮುತ್ತ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಇರುತ್ತದೆ. ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಅಂಗಡಿ, ಇಂಟರ್ ನೆಟ್ ಸೆಂಟರ್ ಮುಚ್ಚಲು ಆದೇಶಿಸಲಾಗುತ್ತದೆ. ಮತ್ತು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವಂತಿಲ್ಲ. ಕೇಂದ್ರದ ಪ್ರವೇಶಕ್ಕೂ ಮೊದಲು ತಪಾಸಣೆ ಮಾಡಿ ಪ್ರವೇಶ ನೀಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- - - -25ಕೆಡಿವಿಜಿ45,46ಃ: