ಬಾಲ ಗರ್ಭಿಣಿಯರು ಬೆಂಗಳೂರಿನಲ್ಲಿ ಹೆಚ್ಚು

| Published : Jun 26 2024, 12:34 AM IST / Updated: Jun 27 2024, 11:25 AM IST

pregnancy at 40,

ಸಾರಾಂಶ

2023-2024ನೇ ಸಾಲಿನ ಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಪೈಕಿ ಬೆಂಗಳೂರು ನಗರ ಹಾಗೂ ಬೆಳಗಾವಿಯಲ್ಲಿ ಅತೀ ಹೆಚ್ಚು ಬಾಲ ಗರ್ಭಿಣಿಯರ ಪ್ರಕರಣಗಳು ದಾಖಲಾಗಿವೆ.

ಮಂಡ್ಯ ಮಂಜುನಾಥ

 ಮಂಡ್ಯ : ಬಾಲ್ಯವಿವಾಹ ತಡೆಗೆ ಏನೆಲ್ಲಾ ಜಾಗೃತಿ ಮೂಡಿಸಲಾಗುತ್ತಿದ್ದರೂ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. 14 ನೇ ವಯಸ್ಸಿನಿಂದ 19 ನೇ ವಯಸ್ಸಿನವರೆಗೆ 39ಸಾವಿರಕ್ಕೂ ಹೆಚ್ಚು ಬಾಲಗರ್ಭಿಣಿಯರಿದ್ದಾರೆ. ಬಾಲ್ಯ ವಿವಾಹ ಮತ್ತು ಪ್ರೇಮವಿವಾಹ ಪ್ರಕರಣಗಳು ಹೆಚ್ಚುತ್ತಿರುವುದು ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ. ರಾಜ್ಯದಲ್ಲೇ ಅತಿ ಹೆಚ್ಚು ಬಾಲಗರ್ಭಿಣಿಯರು ಇದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೂಲಗಳು ತಿಳಿಸಿವೆ.

ಆಯೋಗದ ಅಂಕಿ ಅಂಶಗಳ ಪ್ರಕಾರ 2021 -22 ನೇ ಸಾಲಿನಲ್ಲಿ 14 -15 ವರ್ಷದವರೆಗೆ 147 , 15 -16  ವರ್ಷದವರೆಗೆ ೫೦೯, ೧೬-೧೭ ವರ್ಷದವರೆಗೆ 1,413 17-18 ವರ್ಷದವರೆಗೆ 9723 , 18 -19  ವರ್ಷದವರೆಗೆ 33 ,487  ಸೇರಿ 45 ,279 ಬಾಲಗರ್ಭಿಣಿ ಯರಿದ್ದರು. 22-23 ನೇ ಸಾಲಿನಲ್ಲಿ 14 -15  ವರ್ಷದವರೆಗೆ 217 , 15-16  ವರ್ಷದವರೆಗೆ 686 16-17  ವರ್ಷದವರೆಗೆ1881  17-18  ವರ್ಷದವರೆಗೆ 10,414 , 18-19  ವರ್ಷದವರೆಗೆ 36 ,093  ಸೇರಿ 49 ,291 ಬಾಲಗರ್ಭಿಣಿಯರಿದ್ದರೆ, 23  -24 ನೇ ಸಾಲಿನಲ್ಲಿ 14-15  ವರ್ಷದವರೆಗೆ 156 , 15-16 ವರ್ಷದವರೆಗೆ 419 , 16-17  ವರ್ಷದವರೆಗೆ 1397  17-18 ವರ್ಷದವರೆಗೆ 6659  18-10  ವರ್ಷದವರೆಗೆ 30761  ಸೇರಿ36392  ಬಾಲಗರ್ಭಿಣಿಯರಿದ್ದಾರೆ.

ಬೆಂಗಳೂರು ಪ್ರಥಮ

ಬಾಲ ಗರ್ಭಿಣಿಯರಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 21-22 ನೇ ಸಾಲಿನಲ್ಲಿ 6455 , 22-23 ನೇ ಸಾಲಿನಲ್ಲಿ 6702 , 23-24 ನೇ ಸಾಲಿನಲ್ಲಿ4516  ಬಾಲ ಗರ್ಭಿಣಿಯರನ್ನು ಹೊಂದಿದ್ದರೆ, ಬೆಳಗಾವಿ21-22 ಲ್ಲಿ 4006 /, 22-23 ರಲ್ಲಿ 4258  23-24  ರಲ್ಲಿ3974  ಬಾಲ ಗರ್ಭಿಣಿಯರನ್ನು ಹೊಂದಿದೆ. ಮಂಡ್ಯ ಜಿಲ್ಲೆಯಲ್ಲಿ21-22 ರಲ್ಲಿ1521 ,22-23 ರಲ್ಲಿ 1390  ,23-24 ರಲ್ಲಿ 1010 ಬಾಲ ಗರ್ಭಿಣಿಯರನ್ನು ಹೊಂದಿದೆ.

ಪ್ರೇಮ ಪ್ರಕರಣಗಳೂ ಕಾರಣ:

ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಬಾಲ್ಯವಿವಾಹ ಒಂದು ಕಾರಣವಾದರೆ, ಹದಿಹರೆಯದರಲ್ಲೇ ಪ್ರೇಮಪಾಶಕ್ಕೆ ಸಿಲುಕುತ್ತಿರುವ ಹೆಣ್ಣು ಮಕ್ಕಳು ವಿವಾಹ ಬಂ ಧನಕ್ಕೊಳಗಾಗುತ್ತಿರುವುದು ಪ್ರಾಪ್ತ ವಯಸ್ಸಿಗೆ ಮುನ್ನವೇ ಗರ್ಭ ಧರಿಸುವುದಕ್ಕೆ ಮತ್ತೊಂದು ಕಾರಣ ಎನ್ನುವುದು ಸಮೀಕ್ಷೆಗಳಿಂದ ತಿಳಿದು ಬಂದಿರುವ ಸಂಗತಿಯಾಗಿದೆ.

ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಹೆಣ್ಣು ಮಕ್ಕಳು ಪ್ರೇಮ ಬಂಧನಕ್ಕೆ ಸಿಲುಕಿರುವ ವಿಷಯ ತಿಳಿದು ಪೋಷಕರು ಮರ್ಯಾದೆಗೆ ಹೆದರಿ ರಹಸ್ಯವಾಗಿ ಮದುವೆ ಮಾಡಿರುತ್ತಾರೆ. ಕೆಲವೊಮ್ಮೆ ಪ್ರಾಪ್ತ ವಯಸ್ಸಾಗದಿದ್ದರೂ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿ ಮದುವೆ ಮಾಡಿರುವ ನಿದರ್ಶನಗಳೂ ಇವೆ. ಕೆಲವರು ಮದುವೆಯಾಗಿದ್ದರೂ ಮದುವೆಯಾಗದವರಂತೆ ಹೊರಜಗತ್ತಿಗೆ ತೋರಿಸಿಕೊಳ್ಳುತ್ತಿರುತ್ತಾರೆ. ತಾಯಿ ಕಾರ್ಡ್ ಪಡೆಯಲು ಬಂದಾಗ ಆಕೆ ಗರ್ಭಿಣಿ ಎಂದು ತಿಳಿಯುತ್ತದೆ. ಕೆಲವೊಮ್ಮೆ ಮಾನವೀಯ ದೃಷ್ಠಿಯಿಂದ ಪ್ರಕರಣಗಳನ್ನು ಕೈ ಬಿಟ್ಟಿರುವ ನಿದರ್ಶನಗಳೂ ಇವೆ.

ಶಿಕ್ಷೆ ಯಾಗಿರುವುದು ಬೆರಳೆಣಿಕೆ:

ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ರೂಪಿಸಲಾಗಿದ್ದರೂ ಅವೆಲ್ಲವೂ ಹಲ್ಲಿಲ್ಲದ ಹಾವಿನಂತಾಗಿವೆ. ಕಾನೂನಿನ ಭಯವಿಲ್ಲದಿರುವುದೇ ಬಾಲ್ಯವಿವಾಹ ಹೆಚ್ಚಳಕ್ಕೆ ಕಾರಣವಾಗಿದೆ. ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾದ ಬಳಿಕ ಅವೆಲ್ಲವೂ ಎಫ್‌ಐಆರ್ ಹಂತದಲ್ಲೇ ಬಿದ್ದುಹೋಗುತ್ತಿವೆ. ಇದುವರೆಗೆ ಬಾಲ್ಯವಿವಾಹ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಿರುವುದು ಬೆರಳೆಣಿಕೆಯಷ್ಟಿವೆ. ಹೀಗಾಗಿ ಅವು ನಿರಂತರತೆಯನ್ನು ಕಾಯ್ದುಕೊಂಡಿವೆ.

ಬಾಲ್ಯವಿವಾಹದ ಬಗ್ಗೆ ಜಾಗೃತಿ, ಅರಿವು, ತಿಳಿವಳಿಕೆ, ಜಾಥಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದನ್ನು ಹೊರತುಪಡಿಸಿದಂತೆ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗೆ ಉಳಿಯದಂತೆ ತಡೆಯುವಲ್ಲಿ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಬಾಲ್ಯವಿವಾಹ ಹೆಚ್ಚಾಗಿ ನಡೆಯುವು ಸ್ಥಳಗಳು, ಗ್ರಾಮಗಳ ಮೇಲೆ ನಿಗಾ ವಹಿಸುವ, ಗ್ರಾಮದಲ್ಲಿರುವ ಹದಿಹರೆಯದ ಹೆಣ್ಣು ಮಕ್ಕಳ ಸಂಖ್ಯೆಯನ್ನು ಗುರುತಿಸಿಟ್ಟುಕೊಂಡು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅವರ ಬಗ್ಗೆ ಆಗಾಗ ಮಾಹಿತಿ ಸಂಗ್ರಹಿಸುವ ಕೆಲಸಗಳು ನಡೆಯದಿರುವುದು ಬಾಲ್ಯವಿವಾಹ ಹೆಚ್ಚಲು ಮತ್ತೊಂದು ಕಾರಣವಾಗಿದೆ.

ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆ:

ಬಾಲ್ಯವಿವಾಹ ಪ್ರಕರಣ ಪತ್ತೆಯಾದ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಮದುವೆ ಮಾಡದಂತೆ ಎರಡೂ ಕುಟುಂಬಗಳಿಂದ ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದರ ನಡುವೆಯೂ ಎಷ್ಟೋ ಮಂದಿ ಅದಾದ 6 ತಿಂಗಳು ಒಂದು ವರ್ಷಕ್ಕೆ ಯಾರಿಗೂ ಗೊತ್ತಾಗದಂತೆ ಮದುವೆ ಮಾಡಿರುತ್ತಾರೆ. ಅಂತಹ ಪ್ರಕರಣಗಳೂ ಸಾಕಷ್ಟಿವೆ. ಗ್ರಾಮಮಟ್ಟದಿಂದ ಹಿಡಿದು ಮೇಲಿನಹಂತದವರೆಗೆ ಬಾಲ್ಯವಿವಾಹವನ್ನು ತಡೆಯುವಲ್ಲಿ ಅಧಿಕಾರಿಗಳ ನಡುವೆ ಸಂಪರ್ಕ ಕೊರತೆ, ಹೊಂದಾಣಿಕೆ ಕೊರತೆ ಕಾಡುತ್ತಿದೆ. ಇದರಿಂದಾಗಿ ಎಷ್ಟೋ ಪ್ರಕರಣಗಳು ದಾಖಲಾದರೂ ಪ್ರಾಥಮಿಕ ಹಂತದಲ್ಲೇ ಅವುಗಳನ್ನು ನೆಲಕಚ್ಚಿಸಲಾಗುತ್ತಿದೆ. ಬಡತನದ ಕಾರಣದಿಂದಲೋ ಅಥವಾ ಹೆಣ್ಣು ಮಕ್ಕಳು ಪ್ರೇಮ ವಿವಾಹವಾಗಬಹುದೆಂಬ ಆತಂಕದಿಂದಲೋ ಅಥವಾ ಪ್ರೇಮ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಲೋ ಏನೋ ಬಾಲ ಗರ್ಭಿಣಿಯರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿರುವುದು ಆತಂಕಕಕಾರಿ ಬೆಳವಣಿಗೆಯಾಗಿದೆ.

ಬಾಲ ಗರ್ಭಿಣಿಯರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ವಿಶೇಷ ಮಕ್ಕಳ ಪೊಲೀಸ್ ಘಟಕ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪರಸ್ಪರ ಕುಳಿತು ಚರ್ಚಿಸಿ ಬಾಲಗರ್ಭಿಣಿಯರ ತಡೆಗೆ ಮುನ್ನೆಚ್ಚರಿಕೆ ವಹಿಸಬೇಕು. ಬಾಲ್ಯವಿವಾಹ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಪ್ರಕರಣಗಳು ಪತ್ತೆಯಾದಾಗ ಹೆಣ್ಣು ಆಪ್ತ ಸಮಾಲೋಚನೆ ನಡೆಸಿ ಧೈರ್ಯ. ಆತ್ಮವಿಶ್ವಾಸ, ಕಾನೂನಾತ್ಮಕ ಅರಿವು ಮೂಡಿಸಬೇಕಿದೆ.

- ಮಿಕ್ಕೆರೆ.ವೆಂಕಟೇಶ್, ಸದಸ್ಯರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಜಿಲ್ಲೆ ಗರ್ಭಿಣಿಯರ ಸಂಖ್ಯೆ

ಬಾಗಲಕೋಟೆ 1841

ಬಳ್ಳಾರಿ 2349

ಬೆಳಗಾವಿ 3974

 

ಬೆಂಗಳೂರು ಗ್ರಾಂ 649

ಬೆಂಗಳೂರು ನಗರ 4506

ಬೀದರ್‌ 1442

ಚಾಮರಾಜನಗರ 534

ಚಿಕ್ಕಬಳ್ಳಾಪುರ 830

ಚಿಕ್ಕಮಗಳೂರು 552

ಚಿತ್ರದುರ್ಗ 1701

ದಕ್ಷಿಣ ಕನ್ನಡ 217

ದಾವಣಗೆರೆ 1011

ಧಾರವಾಡ 780

ಗದಗ 444

ಹಾಸನ 1126

ಹಾವೇರಿ 889

ಕಲಬುರಗಿ 1956

ಕೊಡಗು 356

ಕೋಲಾರ 1184

ಕೊಪ್ಪಳ 911

ಮಂಡ್ಯ 1010

ಮೈಸೂರು 1789

ರಾಯಚೂರು 1308

ರಾಮನಗರ 598

ಶಿವಮೊಗ್ಗ 861

ತುಮಕೂರು 1750

ಉಡುಪಿ 67

ಉತ್ತರ ಕನ್ನಡ 291

ವಿಜಯಪುರ 3242

ಯಾದಗಿರಿ 1224

ಒಟ್ಟು 39,392