ಸಾರಾಂಶ
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕ ಸಂಚಿಕೆ ದೃಷ್ಟಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಗಂಗೊಳ್ಳಿ
ಯಾವುದೇ ವಿದ್ಯಾ ಸಂಸ್ಥೆಯ ವಾರ್ಷಿಕ ಸಂಚಿಕೆಯು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಕಾರಣವಾಗುತ್ತದೆ. ಸುಪ್ತ ಮನಸ್ಸಿನ ಭಾವನೆಗಳಿಗೆ ವೇದಿಕೆಯಾಗುತ್ತದೆ. ಶಿಕ್ಷಣವು ಉದ್ಯಮವಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಶೂನ್ಯವಾಗುತ್ತಿದೆ. ಇಂತಹ ಸಮಯದಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪಿಯು ಕಾಲೇಜಿನ ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ಹೊರಹೊಮ್ಮಿಸಿರುವುದು ಗಮನಾರ್ಹವಾಗಿದೆ ಎಂದು ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಹೇಳಿದರು.ಅವರು ಇತ್ತೀಚಿಗೆ ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕ ಸಂಚಿಕೆ ದೃಷ್ಟಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ. ಕಾಶಿನಾಥ್ ಪೈ, ಕಾಲೇಜಿನ ಕಾರ್ಯದರ್ಶಿ ಎನ್. ಸದಾಶಿವ ನಾಯಕ್, ಹಿರಿಯ ಆಂಗ್ಲಭಾಷೆ ಉಪನ್ಯಾಸಕ ಥಾಮಸ್ ಪಿ.ಎ. ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಸೃಷ್ಟಿ ಸ್ವಾಗತಿಸಿದರು. ಭಾರತಿ ಪರಿಚಯಿಸಿದರು. ದೃಷ್ಟಿ ವಾರ್ಷಿಕ ಸಂಚಿಕೆ ನಿರ್ವಾಹಕ ಸಂಪಾದಕ ಸುಜಯೀಂದ್ರ ಹಂದೆ ಎಚ್. ಪ್ರಾಸ್ತಾವಿಕ ಮಾತುಗಳನಾಡಿದರು.ಶ್ರೇಯಲ್ ವಂದಿಸಿದರು. ಗುರು ಚರಣ್ ವೈದ್ಯ ಕಾರ್ಯಕ್ರಮ ನಿರೂಪಿಸಿದರು.