ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆಯಲ್ಲಿದ್ದ ಯದುಶೈಲ ಪ್ರೌಢಶಾಲೆಯ ಯುಗಾಂತ್ಯಗೊಂಡಿದೆ. ಇದೀಗ ಸರ್ಕಾರಿ ಹಿರಿಯರ ಬಾಲಕರ ಶಾಲೆಗೆ ಪ್ರೌಢಶಾಲೆ ಮಂಜೂರಾಗಿರುವುದರಿಂದ ೧೫೦ ವರ್ಷ ಪೂರೈಸಿರುವ ಶಾಲೆಗೆ ಹೊಸ ಗರಿ ಮೂಡಿದಂತಾಗಿದೆ.ಮೇಲುಕೋಟೆಯ ಶತಮಾನದ ಸರ್ಕಾರಿ ಹಿರಿಯ ಬಾಲಕರ ಶಾಲೆಗೆ ಶಾಲಾ ಶಿಕ್ಷಣ ಇಲಾಖೆ ಪ್ರೌಢಶಾಲೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿನಲ್ಲಿ ಎಂಟನೇ ತರಗತಿಗೆ ೨೫ ಮಕ್ಕಳು ದಾಖಲಾಗಿದ್ದಾರೆ. ಪ್ರೌಢಶಾಲೆಯ ೯ ಮತ್ತು ೧೦ನೇ ತರಗತಿಗಳು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗಲಿದೆ.
ಕೆ.ಆರ್.ಪೇಟೆ ತಾಲೂಕಿನ ಬಿಲ್ಲೇನಹಳ್ಳಿಯಲ್ಲಿ ಶೂನ್ಯ ದಾಖಲಾತಿಯಿಂದ ಕಳೆದ ೬ ವರ್ಷಗಳ ಹಿಂದೆಯೇ ಮುಚ್ಚಿಹೋಗಿದ್ದ ಬಿಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆಯಂತೆ ಮೇಲುಕೋಟೆಯ ಬಾಲಕರ ಶಾಲೆಗೆ ಸ್ಥಳಾಂತರ ಮಾಡಿ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಆದೇಶ ಹೊರಡಿಸಿದ್ದರೆ.ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ರಮದಿಂದಾಗಿ ಮುಚ್ಚಿಹೋಗಿದ್ದ ಸರ್ಕಾರಿ ಪ್ರೌಢಶಾಲೆಗೆ ಮೇಲುಕೋಟೆಯಲ್ಲಿ ಮರುಜೀವ ನೀಡುವ ಜೊತೆಗೆ ಈ ಭಾಗದ ಹಳ್ಳಿಗಳ ಮಕ್ಕಳಿಗೆ ಅದರಲ್ಲೂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪೂರಕ ವಾತಾವರಣ ಒದಗಿಸಿಕೊಟ್ಟಂತಾಗಿದೆ.
ಎಲ್‌ಕೆಜಿ, ಯುಕೆಜಿ ಮತ್ತು ೧ರಿಂದ ೭ನೇ ತರಗತಿಯವರೆಗಿನ ದ್ವಿಭಾಷಾ ಮಾಧ್ಯಮಗಳನ್ನೊಳಗೊಂಡು ೧೫೦ ವರ್ಷ ಪೂರೈಸಿರುವ ಶತಮಾನದ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ಆರಂಭವಾಗುತ್ತಿರುವುದು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಒಮ್ಮೆ ದಾಖಲಾದ ಮಕ್ಕಳು ಉಚಿತವಾಗಿ ಒಂದೇ ಕಡೇ ಪೂರ್ವ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯಲು ಅನುಕೂಲವಾಗಲಿದ್ದು ಈ ಭಾಗದ ಪೋಷಕರ ಬಹುದಿನಗಳ ಆಶಯ ಈಡೇರಿದೆ.
ಶಾಸಕರು, ಮೇಲುಕೋಟೆಯ ಗ್ರಾಪಂ ಮನವಿಗಳಿಗೆ ಸ್ಪಂದಿಸಿದ ಶಿಕ್ಷಣ ಸಚಿವರಾಗಿದ್ದ ಮಧುಬಂಗಾರಪ್ಪ ಮತ್ತು ಆಪ್ತಕಾರ್ಯದರ್ಶಿ ಕಿಶೋರ್‌ಕುಮಾರ್ ಇಲಾಖಾಧಿಕಾರಿಗಳಿಗೆ ತ್ವರಿತವಾಗಿ ಸ್ಪಂದಿಸಲು ಸೂಚಿಸಿದ್ದರು. ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ಧರ್ಮಶೆಟ್ಟಿ ಮಂಡ್ಯ ಡಿಡಿಪಿಐ ಲೋಕೇಶ್ ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿಯವರು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ ಪರಿಣಾಮ ಆಯಕ್ತ ವಿಕಾಸ್‌ಕಿಶೋರ್‌ಸುರಲೇಕರ್, ಪ್ರೌಢಶಿಕ್ಷಣ ನಿರ್ದೇಶಕ ಕೃಷ್ಣಾಜಿ, ಉಪನಿರ್ದೇಶಕಿ ಶಾಂತಲಾ ಅವರಿಂದ ಪರಿಶೀಲನಾ ವರದಿ ಪಡೆದ ಆಯುಕ್ತರು ಪೌಢಶಾಲೆ ಸ್ಥಳಾಂತರ ಮಾಡಲು ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಿಗೆ ಶಿಪಾರಸ್ಸು ಮಾಡಿದ್ದರು. ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಶ್ಮಿ ಮಹೇಶ್ ಇಡೀ ಹುದ್ದೆಗಳ ಜೊತೆಗೆ ಪ್ರೌಢಶಾಲೆಯನ್ನು ಮೇಲುಕೋಟೆಗೆ ಸ್ಥಳಾಂತರಿಸಿದ್ದಾರೆ. ಪ್ರೌಢಶಾಲೆ ಮಂಜೂರು: ಪೋಷಕರ ಹರ್ಷ
ಪ್ರೌಢಶಾಲೆಯ ಆರಂಭಕ್ಕೆ ಕಾರಣರಾದ ಶಾಸಕ ದರ್ಶನ್‌ಪುಟ್ಟಣ್ಣಯ್ಯ, ಪ್ರತಿ ಹಂತದಲ್ಲೂ ಕಾಳಜಿ ವಹಿಸಿದ ಮುಖ್ಯಶಿಕ್ಷಕ ಸಂತಾನರಾಮನ್ ಸಮಗ್ರ ಶಿಕ್ಷಣಯೋಜನೆಯ ಉಪ ನಿರ್ದೇಶಕ ಚಂದ್ರಶೇಖರ್ ಮತ್ತು ಎಪಿಸಿ ಗೋಪಾಲಗೌಡರಿಗೆ ಅಂತಿಮ ಹಂತದಲ್ಲಿ ಸಹಕಾರ ನೀಡಿದ ಮೇಲುಕೋಟೆ ಬೆಟ್ಟಸ್ವಾಮಿಗೌಡರು ಮತ್ತು ಎಸ್‌ಡಿಎಂಸಿ ಸಂಘದ ರಾಜ್ಯ ಪದಾಧಿಕಾರಿ ಅಮೃತಿ ಶಂಕರ್‌ಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಕೃತಜ್ಞತೆ ಅರ್ಪಿಸಿದ್ದಾರೆ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆ ಬಲವರ್ಧನೆ ಮಾಡಿಮೇಲುಕೋಟೆ ವ್ಯಾಪ್ತಿಯ ಹಳ್ಳಿಗಳ ಪೋಷಕರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಮಕ್ಕಳನ್ನು ದಾಖಲಿಸಿ ಶಾಲೆಯನ್ನು ಬಲವರ್ಧನೆ ಮಾಡಬೇಕು. ಇದರಿಂದ ಮೇಲುಕೋಟೆಯ ಸರ್ಕಾರಿಶಾಲೆ ಭವಿಷ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಾಗಿಯೂ ಉನ್ನತೀಕರಣವಾಗುವ ಅವಕಾಶವಿದೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮಹೇಶ್ ತಿಳಿಸಿದ್ದಾರೆ.
ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಮೇಲುಕೋಟೆಯ ಶತಮಾನದ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ ಯಾವುದೇ ಆರ್ಥಿಕ ಹೊರೆಯಿಲ್ಲದೆ ಗುಣಾತ್ಮಕ ಶಿಕ್ಷಣಕೊಡಿಸಲು ಮುಂದಾಗಬೇಕು ಮೇಲುಕೋಟೆಯಲ್ಲಿ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ಸೌಲಭ್ಯವೂ ಲಭ್ಯವಿದ್ದು ಇದನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ. ಉಚಿತ ಹಾಸ್ಟೆಲ್ ಸೌಕರ್ಯ ಇಂಗ್ಲಿಷ್ ಕಲಿಕೆಗೆ ಒತ್ತುಮೇಲುಕೋಟೆಯ ಶತಮಾನದ ಸರ್ಕಾರಿ ಶಾಲೆಯ ೫-೭ನೇ ತರಗತಿಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ೮ನೇತರಗತಿಗೆ ದಾಖಲಾಗುವ ಮಕ್ಕಳಿಗೆ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಜೊತೆಗೆ ಶಿಕ್ಷಣ ಇಲಾಖೆಯ ಆಶಯಕ್ಕೆ ತಕ್ಕಂತೆ ಸ್ಪೋಕನ್ ಇಂಗ್ಲಿಷ್ ಕಲಿಕೆಗೆ ಒತ್ತು ನೀಡಲಾಗಿದೆ. ಮೂರು ಮಂದಿ ಇಂಗ್ಲಿಷ್ ವಿಷಯಕ್ಕೇ ಶಿಕ್ಷಕರಿದ್ದಾರೆ ಪೋಷಕರು ಜೂನ್ ೩೦ರೊಳಗೆ ಮಕ್ಕಳನ್ನು ದಾಖಲಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಶಾಲಾಭಿವೃದ್ಧಿ ಸಮಿತಿ ಮನವಿಮಾಡಿದೆ.