ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಿ ವಾರ ಕಳೆದರೂ ತಾಲೂಕಿನ ಕುಕ್ಕವಾಡದ ಬಳಿ ಶಾಖಾ ನಾಲೆ 2ನೇ ವಲಯಲ್ಲಿ ನೀರು ಬರದಿರುವುದನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಒಕ್ಕೂಟದ ನೇತೃತ್ವದಲ್ಲಿ ಭದ್ರಾ ಖಾಲಿ ನಾಲೆಗಿಳಿದು, ರಾಜ್ಯ ಹೆದ್ದಾರಿ ಬಂದ್ ಮಾಡಿ, ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಸಮಸ್ಯೆ ಪರಿಹರಿಸುವಂತೆ ಅಚ್ಚುಕಟ್ಟು ರೈತರು ಪಟ್ಟು ಹಿಡಿದ ಘಟನೆ ತಾಲೂಕಿನ ಕಾರಿಗನೂರು ಕ್ರಾಸ್ ಬಳಿ ಶುಕ್ರವಾರ ನಡೆಯಿತು.ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯ ಕಾರಿಗನೂರು ಕ್ರಾಸ್ ಬಳಿ ಸಂಘದ ರಾಜ್ಯಾಧ್ಯಕ್ಷ ತೇಜಸ್ವಿ ವಿ.ಪಟೇಲ್, ಒಕ್ಕೂಟದ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ನಿನ್ನೆಯಷ್ಟೇ ರಾಜ್ಯ ಹೆದ್ದಾರಿ ತಡೆ ಮಾಡಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಆಲಿಸುವ ಜೊತೆಗೆ ನಾಲೆಗೆ ಸಮರ್ಪಕ ನೀರು ಹರಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದ ರೈತರು ಉಪ ವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ತಹಸೀಲ್ದಾರ್ ಅಶ್ವತ್ಥ್ ಇತರೆ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಸೂಚನೆಯ ಮೇರೆಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತರ ಮನವೊಲಿಸುವಲ್ಲಿ ಸಫಲರಾದರು. ನಂತರ ರೈತ ಮುಖಂಡರು, ರೈತರು ಸಂಜೆ ದಾವಣಗೆರೆ ಡಿಸಿ ಕಚೇರಿ ಸಭೆಯಲ್ಲಿ ಭಾಗವಹಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ಭದ್ರಾ ಅಣೆಕಟ್ಟೆಯಿಂದ ಇನ್ನೂ 20 ದಿನಗಳ ಕಾಲ ನೀರು ಬಿಡುವ ಕಾಲಾವಧಿ ವಿಸ್ತರಿಸುವಂತೆ ಭದ್ರಾ ಕಾಡಾ ಸಮಿತಿಗೆ ಒತ್ತಡ ಹೇರಲಾಗುವುದು. ನಾಲೆಯುದ್ದಕ್ಕೂ ಅಕ್ರಮ ಪಂಪ್ ಸೆಟ್ ತೆರವುಗೊಳಿಸುತ್ತೇವೆ. ಕಂದಾಯ, ನೀರಾವರಿ, ಪೊಲೀಸ್, ಬೆಸ್ಕಾಂ ಸೇರಿ ಅಧಿಕಾರಿ, ಸಿಬ್ಬಂದಿಗಳ ಒಳಗೊಂಡ ತಂಡಗಳು ಅಕ್ರಮ ಪಂಪ್ ಸೆಟ್ ತೆರವು ಕಾರ್ಯ ಕೈಗೊಂಡಿವೆ. ನಾಲೆಯಲ್ಲಿ ವ್ಯಾಪಿಸಿರುವ ಅಕ್ರಮ ಪಂಪ್ ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು, ಅಗತ್ಯ ಬಿದ್ದರೆ ನಾಲೆಯುದ್ದಕ್ಕೂ 144ನೇ ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೊಳಿಸಿ, ಪಂಪ್ ಸೆಟ್ ತೆರವು ಮಾಡಿಸಲಿದ್ದೇವೆ ಎಂದು ಭರವಸೆ ನೀಡಿದರು. ಕಡೆಗೂ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಅಚ್ಚುಕಟ್ಟು ರೈತರು, ರೈತ ಮುಖಂಡರು ತಾತ್ಕಾಲಿಕವಾಗಿ ಹೋರಾಟ ಕೈಬಿಟ್ಟು, ನಾಲೆಗೆ ಮೊದಲು ಸಮರ್ಪಕವಾಗಿ ನೀರು ಹರಿಸಲು ಮನವಿ ಮಾಡಿದರು.ಸಂಘದ ಉಪಾಧ್ಯಕ್ಷ ಕೆ.ಎನ್.ಮಂಜುನಾಥ, ಷಣ್ಮುಖ ಸ್ವಾಮಿ, ವಕೀಲರಾದ ಮತ್ತಿ ಹನುಮಂತಪ್ಪ, ದಿಳ್ಯಪ್ಪ ಮುದಹದಡಿ, ಡಿ.ಮಲ್ಲೇಶಪ್ಪ, ಮಹೇಶ್ವರಪ್ಪ, ಗೋಪಾಲ, ಚಂದ್ರಪ್ಪ ಮೇಷ್ಟ್ರು, ಕಲ್ಲೇಶಪ್ಪ, ಡಿ.ಬಿ.ಅರವಿಂದ, ದಿನೇಶ, ನಿರಂಜನಮೂರ್ತಿ, ಸಿರಿಗೆರೆ ಪ್ರಭು, ಕಿರಣ, ಹರೀಶ, ಎಸ್.ಎಂ.ಕುಮಾರಸ್ವಾಮಿ, ಜಿ.ಸಿ.ಮಂಜುನಾಥ, ಗಂಗಾಧರ ಹೂವಿನಮಡು, ಕಾರಿಗನೂರು ಮಂಜುನಾಥ ಪಟೇಲ್, ಬಿ.ಎಲ್.ಸತೀಶ, ಶಿವಣ್ಣ, ಗೋಣಿವಾಡ ಪಿ.ಎ.ನಾಗರಾಜಪ್ಪ ಇತರರಿದ್ದರು.