ವಕ್ಫ್‌ಗೆ ನೀಡಿರುವ ಪರಮಾಧಿಕಾರ ರದ್ದಾಗಬೇಕು: ಛಲವಾದಿ ನಾರಾಯಣಸ್ವಾಮಿ

| Published : Dec 05 2024, 12:30 AM IST

ವಕ್ಫ್‌ಗೆ ನೀಡಿರುವ ಪರಮಾಧಿಕಾರ ರದ್ದಾಗಬೇಕು: ಛಲವಾದಿ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

10, 12ನೇ ಶತಮಾನದಲ್ಲಿದ್ದ ಮಠಗಳೂ ವಕ್ಫ್‌ ಆಸ್ತಿ ಎಂದು ಹೇಳುತ್ತಿದ್ದಾರೆ. ಈ‌ ಗೊಂದಲಕ್ಕೆ ತೆರೆ ಎಳೆಯಬೇಕು ಎಂಬ ಕಾರಣಕ್ಕೆ ಬಿಜೆಪಿ ಹೋರಾಟ ಪ್ರಾರಂಭವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಹಾವೇರಿ: ವಕ್ಫ್‌ ವಿಚಾರದಲ್ಲಿ ಗೊಂದಲವುಂಟಾಗಿದ್ದು, ರೈತರು, ಮಠ-ಮಾನ್ಯಗಳ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ. ಅದಕ್ಕಾಗಿ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳಲಾಗಿದ್ದು, ವಕ್ಫ್‌ ಪರಮಾಧಿಕಾರ ರದ್ದಾಗಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಕ್ಫ್‌ ಗೊಂದಲಕ್ಕೆ ತೆರೆ ಎಳೆಯಬೇಕು. ಯಾವ ರೈತನನ್ನೂ ಒಕ್ಕಲೆಬ್ಬಿಸಬಾರದು ಎಂಬ ಕಾರಣಕ್ಕೆ ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದೆ. ಮೂರು ತಂಡಗಳಾಗಿ ರಾಜ್ಯದಲ್ಲಿ ಪ್ರವಾಸ ಮಾಡಿ ಜನರ ಅಹವಾಲು ಸ್ವೀಕಾರ ಮಾಡುತ್ತೇವೆ. ಪರಿಸ್ಥಿತಿ ಅವಲೋಕಿಸುತ್ತೇವೆ. ಈ ವಿಷಯದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಜಂಟಿ ಸದನ ಸಮಿತಿ ರಚಿಸಿದ್ದು, ನಾವು ರಾಜ್ಯದಲ್ಲಿ ವಕ್ಫ್‌ನಿಂದ ಆಗಿರುವ ಸಮಸ್ಯೆಗಳ ವರದಿಯನ್ನು ಜೆಪಿಸಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಹೇಳಿದರು.

10, 12ನೇ ಶತಮಾನದಲ್ಲಿದ್ದ ಮಠಗಳೂ ವಕ್ಫ್‌ ಆಸ್ತಿ ಎಂದು ಹೇಳುತ್ತಿದ್ದಾರೆ. ಈ‌ ಗೊಂದಲಕ್ಕೆ ತೆರೆ ಎಳೆಯಬೇಕು ಎಂಬ ಕಾರಣಕ್ಕೆ ಬಿಜೆಪಿ ಹೋರಾಟ ಪ್ರಾರಂಭವಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ, ಆರ್‌. ಅಶೋಕ್ ಹಾಗೂ ನನ್ನ ನೇತೃತ್ವದಲ್ಲಿ 3 ತಂಡಗಳು ಪ್ರವಾಸ ಮಾಡುತ್ತಿದ್ದೇವೆ. ಹಾವೇರಿ ಜಿಲ್ಲೆಯಲ್ಲೂ ವಕ್ಫ್‌ ಆಸ್ತಿ ಸಮಸ್ಯೆ ಇದೆ. ಅಖಂಡ ಭಾರತ ಈಗ ಮೂರು ತುಂಡಾಗಿದೆ. ವಕ್ಫ್‌ ಬೋರ್ಡ್ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಇಲ್ಲ. 1954ರಲ್ಲಿ ನೆಹರು ಅವರು ವಕ್ಫ್‌ಗೆ ಹೆಚ್ಚು ಶಕ್ತಿ ಕೊಟ್ಟರು. ನಮ್ಮ ತಲೆ ಮೇಲೆ ಕಲ್ಲು ಹಾಕಿದರು. 1969-70ರಲ್ಲಿ ವಕ್ಪ್ ಸಂಬಂಧಿಸಿದ ಜಮೀನು ಸರ್ವೆ ಮಾಡಲು ಇಂದಿರಾ ಗಾಂಧಿ ಹೇಳಿದ್ದರು. ಆನಂತರ ಅದು ಹಾಗೇ ಗೆಜೆಟ್ ಆಯಿತು. ಅಂದು‌ ನಮೂದಿಸಿದ ಜಮೀನುಗಳ ನಂಬರ್‌ಗಳು ಈಗ ವಕ್ಫ್‌ ಎನ್ನುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಏನಾಗಬಹುದು? ಯಾವ ಆಧಾರ ಇಲ್ಲದಿದ್ದರೂ ವಕ್ಫ್‌ ಹೇಳಿದ್ದು ಅವರ ಆಸ್ತಿಯಾಗುತ್ತದೆ. ವಕ್ಫ್‌ಗೆ ಪರಮಾಧಿಕಾರ ಕೊಟ್ಟವರು ಕಾಂಗ್ರೆಸಿಗರು. ಕಾನೂನುಬಾಹಿರ ವಕ್ಫ್‌ ಅಧಿಕಾರ ಕಡಿತಗೊಳಿಸಲು ಕೇಂದ್ರ ಸರ್ಕಾರ ಜೆಪಿಸಿ ರಚಿಸಿದೆ. ಉತಾರ್‌ನಲ್ಲಿರುವ ಕಾಲಂ ೧೧ರಲ್ಲಿ ನಮೂದಾಗಿದ್ದ ವಕ್ಫ್‌ ಹೆಸರು ತೆಗೆಯುವಂತೆ ಸಿಎಂ ಹೇಳಿದ್ದಾರೆ. ಇದು ಕಣ್ಣೊರೆಸುವ ತಂತ್ರವಾಗಿದೆ. ಕಾಲಂ ೧೧ರಲ್ಲಿ ತೆಗೆದರೆ ಸಾಲದು, ತಾತ್ಕಾಲಿಕ ಶಮನ ನಮಗೆ ಬೇಕಿಲ್ಲ ಎಂದು ಅವರು ಹೇಳಿದರು.

1974ರ ಗೆಜೆಟ್ ರದ್ದುಪಡಿಸಬೇಕು. ರೈತರನ್ನು ಒಕ್ಕಲೆಬ್ಬಿಸುವ ತಂತ್ರ ಬಿಟ್ಟು ಈ ನಿಟ್ಟಿನಲ್ಲಿ ಸಿಎಂ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಲವ್‌ ಜಿಹಾದ್‌ ರೀತಿಯಲ್ಲೇ ಈಗ ಲ್ಯಾಂಡ್‌ ಜಿಹಾದ್ ಶುರುವಾಗಿದೆ. ಮತದ ಆಸೆಗೆ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ. ವಕ್ಪ್ ಬೋರ್ಡ್ ಆಸ್ತಿ ವಿವಾದದಲ್ಲಿ ಸಿವಿಲ್ ಕೋರ್ಟ್ ಕೂಡ ಮಧ್ಯ ಪ್ರವೇಶ ಮಾಡುವ ಅವಕಾಶವಿಲ್ಲ. ಕುರಿ ಹೊಡೆದುಕೊಂಡು ತೋಳನ ಕೈಯಲ್ಲಿ ಅಧಿಕಾರ ನೀಡಿದಂತಾಗಿದೆ. ವಕ್ಫ್‌ ಬೋರ್ಡ್‌ಗೆ ಯಾವುದೇ ದಾಖಲೆ ನೀಡದೆ ಘೋಷಣೆ ಮಾಡಲು ಕಾಂಗ್ರೆಸ್‌ ಅವಕಾಶ ನೀಡಿದೆ. ಸಿದ್ದರಾಮಯ್ಯ ಅವರೇ ಈ ಬಗ್ಗೆ ನಿಮ್ಮ ಹಾಗೂ ನಿಮ್ಮ ಪಕ್ಷದ ನಿಲುವು ಯಾವುದು ತಿಳಿಸಬೇಕು. ವಕ್ಫ್‌ಗೆ ಅಧಿಕಾರ ನೀಡಿದ ಗೆಜೆಟ್ ರದ್ದು ಮಾಡಿ, ನ್ಯಾಯಯುತವಾಗಿ ದಾನ ಮಾಡಿದ ಆಸ್ತಿ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನವರು ಜಿನ್ನಾ ನೀತಿಯನ್ನು ಇಲ್ಲಿ ಜಾರಿಗೆ ತರಲು ಹೊರಟಿದ್ದಾರೆ. ಕರ್ನಾಟಕದ ಜನರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸವನ್ನು ಜಮೀರ್ ಅಹಮದ್‌ ಕಡೆಯಿಂದ ಮಾಡಿಸಲಾಗುತ್ತಿದೆ. ವಕ್ಪ್ ಬೋರ್ಡ್ ರದ್ದು ಆಗುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಸಚಿವ ಜಮೀರ್ ಅಹಮದ್‌ ನಂಬಿದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ಅಧೋಗತಿಗೆ ಹೋಗುತ್ತಾರೆ. ಅವರಿಗೆ ಆ ರೀತಿಯ ಇತಿಹಾಸವಿದೆ. ಸ್ವಲ್ಪ ಮೆಜಾರಿಟಿ ಬಂದರೆ ಸಿದ್ದರಾಮಯ್ಯ ಅವರೂ ಅವರಿಗೆ ಕಾಫೀರನೇ. ಬಾಂಗ್ಲಾದೇಶದಲ್ಲಿ ನಡೆದ ಘಟನೆ ನಮಗೆ ಪಾಠವಾಗಬೇಕು. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕು. ವಿಧಾನಸೌಧ ಒಳಗೆ ಹಾಗೂ ಹೊರಗೆ ನಾವು ಹೋರಾಟ ಮಾಡುತ್ತೇವೆ. ಬರೆ ಹಾಕಿ, ಮುಲಾಮು ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಸಚಿವ ಬಿ.ಸಿ. ಪಾಟೀಲ, ನಾರಾಯಣಸ್ವಾಮಿ, ಮುನಿಸ್ವಾಮಿ, ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಸಿದ್ದರಾಜ ಕಲಕೋಟಿ, ಪರಮೇಶ್ವರಪ್ಪ ಮೇಗಳಮನಿ ಇತರರು ಇದ್ದರು.

ಯತ್ನಾಳ ಹೋರಾಟ ತಪ್ಪಲ್ಲ:

ಶಾಸಕ ಬಸನಗೌಡಪಾಟೀಲ ಯತ್ನಾಳ ಅವರು ನಮಗಿಂತಲೂ ಮೊದಲು ಹೋರಾಟ ಪ್ರಾರಂಭ ಮಾಡಿದ್ದಾರೆ. ಅವರು ಸಹ ಜನರ ಪರವಾಗಿ ಹೋರಾಟ ಪ್ರಾರಂಭ ಮಾಡಿದ್ದಾರೆ. ಜೆಪಿಸಿಗೆ ಸಹ ಅವರು ಮನವಿ ಮಾಡಲಿದ್ದಾರೆ. ವಕ್ಫ್ ಕರಾಳತೆ ಅಧ್ಯಯನ ನಡೆಸಿ ಜೆಪಿಸಿ, ರಾಜ್ಯಕ್ಕೆ ವರದಿ ಸಲ್ಲಿಸ್ತೇವೆ. ಶ್ವೇತಪತ್ರ ಹೊರಡಿಸುವುದಕ್ಕೂ ನಾವು ಆಗ್ರಹಿಸುತ್ತೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ಇದರ ಗಂಭೀರತೆ ನಮಗಿರಲಿಲ್ಲ ಎಂದು ಸಿ.ಟಿ.ರ ವಿ ಹೇಳಿದರು.