ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರತಿಯೊಬ್ಬ ಅಂಧ ವ್ಯಕ್ತಿಯಲ್ಲೂ ವಿಶೇಷ ಜ್ಞಾನ ಮತ್ತು ಕೌಶಲ್ಯವಿದೆ. ಸಮಾಜದಲ್ಲಿ ಸಾಕಷ್ಟು ಅಂಧರು ತಮ್ಮ ವಿಶೇಷ ಕೌಶಲ್ಯ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ. ಸುಧೀರ್ ಬಿ ತಿಳಿಸಿದ್ದಾರೆ.ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಮುದಾಯದ ಸಹಭಾಗಿತ್ವದಲ್ಲಿ ಹಾಸನ ನಗರದ ರೋಟರಿ ಸುವರ್ಣ ಭವನದಲ್ಲಿ ಅಂಧ ವಿಶೇಷ ಚೇತನರಿಗೆ ಏರ್ಪಡಿಸಿದ್ದ ೫ ದಿನದ ಸ್ಥಳ ಪರಿಜ್ಞಾನ ಮತ್ತು ಚಲನವಲನ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮತನಾಡಿದರು. ನನಗೆ ಕಣ್ಣು ಕಾಣುವುದಿಲ್ಲ ನನ್ನ ಕೈಯಲ್ಲಿ ಏನು ಕೆಲಸ ಮಾಡಲು ಆಗುವುದಿಲ್ಲ ಎಂದು ಭಯದಿಂದ ಮನೆಯಲ್ಲಿ ಕುಳಿತುಕೊಳ್ಳುವ ಬದಲು, ತರಬೇತಿ ಪಡೆದುಕೊಂಡು ಧೈರ್ಯದಿಂದ ಅಂಧರು ತಮಗೆ ಇಷ್ಟವಾಗುವ ಕೆಲಸವನ್ನು ಮಾಡಬೇಕು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಅಂಧರಲ್ಲಿರುವ ವಿಶೇಷತೆಗಳನ್ನು ಗುರುತಿಸಿ ಅನುಕಂಪ ನೀಡುವುದರ ಜೊತೆಗೆ ಹೆಚ್ಚಿನದಾಗಿ ಅವಕಾಶ, ಪ್ರೋತ್ಸಾಹ ಮತ್ತು ಆತ್ಮಸ್ಥೈರ್ಯ ನೀಡುವ ಕೆಲಸ ಆಗಬೇಕಿದೆ ಎಂದರು.
ಅಂಧ ವಿಶೇಷ ಚೇತನರಿಗಾಗಿ ಏರ್ಪಡಿಸಿದ್ದ ಸ್ಥಳ ಪರಿಜ್ಞಾನ ಮತ್ತು ಚಲನ ವಲನ ೫ ದಿನದ ತರಬೇತಿ ಕಾರ್ಯಕ್ರಮದಲ್ಲಿ ೨೭ ಅಂಧ ವಿಶೇಷ ಚೇತನರು ಬಾಗವಹಿಸಿ ತರಬೇತಿ ಪಡೆದರು.ಕಾರ್ಯಕ್ರಮದಲ್ಲಿ ರೋಟರಿ ಮಿಡ್ ಟೌನ್ ಮಾಜಿ ಅಧ್ಯಕ್ಷರಾದ ರೊ ಮಮತ ಪಾಟೀಲ್, ರಾಜೀವ್ ಎಂಬಿಎ ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಭವಾನಿ ಬಿ ಎಸ್‌ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ನಗರ ಪುನರ್ವಸತಿ ಕಾರ್ಯಕರ್ತರಾದ ಸುಷ್ಮಾ ಮತ್ತು ಇಮ್ರಾನ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಸನ ಶಾಖೆಯ ಜಿಲ್ಲಾ ಸಂಯೋಜಕರಾದ ಯೋಗನಾಥ್ ಉಪಸ್ಥಿತರಿದ್ದರು.