ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ನಾಮಕರಣವಾಗಿ 50 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾಡಳಿತಗಳು, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ, ಕೊಡವ, ಯಕ್ಷಗಾನ ಅಕಾಡೆಮಿಗಳ ಸಹಭಾಗಿತ್ವದಲ್ಲಿ ‘ಬಹುಸಂಸ್ಕೃತಿ ಉತ್ಸವ’ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ಡಿಸೆಂಬರ್ 3, 4ರಂದು ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಡಿ.3ರಂದು ಬೆಳಗ್ಗೆ 9ಕ್ಕೆ ಅಂಬೇಡ್ಕರ್ ವೃತ್ತದಿಂದ ಪುರಭವನವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆಯನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಚಿತ್ರಕಲಾ ಪ್ರದರ್ಶನ ಮತ್ತು ಶಿಲ್ಪಕಲಾ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಆಶಯ ಭಾಷಣ ಮಾಡುವರು. ಮೂರೂ ಜಿಲ್ಲೆಗಳ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಶಾಸಕ ಡಿ. ವೇದವ್ಯಾಸ್ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ವೈವಿಧ್ಯಮಯ ಕಾರ್ಯಕ್ರಮ: ಡಿ.3ರ ಮಧ್ಯಾಹ್ನ 2 ಗಂಟೆಯಿಂದ ವಿವಿಧ ಅಕಾಡೆಮಿಗಳ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6ಕ್ಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ವೇಳೆ ಮೂರು ಜಿಲ್ಲೆಗಳ ಸಾಂಪ್ರದಾಯಿಕ ಆಹಾರೋತ್ಸವ ನಡೆಯಲಿದ್ದು, ಡಿ.3, 4ರಂದು ರಾತ್ರಿ 9ರವರೆಗೆ ಮಳಿಗೆಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ಜಿಲ್ಲಾಧಿಕಾರಿ ಹೇಳಿದರು.ಡಿ.4ರಂದು ಬೆಳಗ್ಗೆ 9.30ರಿಂದ ವಿದ್ಯಾರ್ಥಿ ಸಮಾವೇಶದಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದ್ದು, ‘ಕರ್ನಾಟಕದ ಬಹುಸಂಸ್ಕೃತಿಯ ಪರಂಪರೆ’ ಎಂಬ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ನಿಕಟಪೂರ್ವ ಎನ್‌ಎಸ್‌ಎಸ್ ಅಧಿಕಾರಿ ಮತ್ತು ಸರ್ಕಾರದ ಪದನಿಮಿತ್ತ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಇದ್ದರು.ಪಿಲಿಕುಳದಲ್ಲಿ ಕಂಬಳೋತ್ಸವ ನಡೆಸುವ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ತಜ್ಞರ ಕಮಿಟಿ ರಚನೆ ಮಾಡಲಾಗಿದ್ದು, ವರದಿ ನೀಡಲು ತಿಳಿಸಲಾಗಿದೆ. ಈ ವರದಿಯನ್ನು ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ಈ ಕುರಿತಂತೆ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
- ಮುಲ್ಲೈ ಮುಗಿಲನ್ ಎಂ.ಪಿ., ದ.ಕ. ಜಿಲ್ಲಾಧಿಕಾರಿ