ಪ್ರಾಣ ಲೆಕ್ಕಿಸಿದೇ ಅಜ್ಜನ ಜೀವ ಉಳಿಸಿದ ಬಾಲಕ

| Published : Aug 06 2024, 12:34 AM IST

ಪ್ರಾಣ ಲೆಕ್ಕಿಸಿದೇ ಅಜ್ಜನ ಜೀವ ಉಳಿಸಿದ ಬಾಲಕ
Share this Article
  • FB
  • TW
  • Linkdin
  • Email

ಸಾರಾಂಶ

ಜಮೀನುವೊಂದರಲ್ಲಿ ಕೊಳವೆಬಾವಿ ಸಂಪರ್ಕಿಸುವ ವಿದ್ಯುತ್ ವಯರ್ ಭೂಮಿಗೆ ತಾಗಿ ಬಿದ್ದಿತ್ತು. ಇದನ್ನು ಗಮನಿಸದೇ ಮುಂದೆ ಸಾಗಿದಾಗ ಮಹ್ಮದ ಅಲಿ ಮೇಲೆ ವಿದ್ಯುತ್ ಪ್ರವಹಿಸಿ ಪ್ರಾಣಾಪಾಯದಲ್ಲಿ ಸಿಲುಕಿದ್ದ.

ಕಲಘಟಗಿ:

ವಿದ್ಯುತ್ ಆಘಾತದಿಂದ ಪ್ರಾಣಾಪಾಯದಲ್ಲಿ ಸಿಲುಕಿದ್ದ ಹಿರಿಯ ಜೀವವೊಂದನ್ನು ತನ್ನ ಪ್ರಾಣದ ಹಂಗು ಲೆಕ್ಕಿಸದೇ ಬದುಕುಳಿಸಿದ ತಾಲೂಕಿನ ಹನಮಾಪುರ ಗ್ರಾಮದ ಹನ್ನೊಂದು ವರ್ಷದ ಬಾಲಕನ ಧೈರ್ಯ, ಸಾಹಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.ಪಟ್ಟಣದ ಜನತಾ ಇಂಗ್ಲಿಷ್ ಪ್ರೌಢಶಾಲೆಯ ಐದನೇ ತರಗತಿ ವಿದ್ಯಾರ್ಥಿ ಮಹ್ಮದಶಮಿ ಮೌಲಾಸಾಬ್ ಬುಕಿಟಗಾರ ಎಂಬಾತನೇ ಸಾಹಸ ಮೆರೆದ ಬಾಲಕ. ಮಹ್ಮದಶಮಿ ತನ್ನ ಸಮಯಪ್ರಜ್ಞೆಯಿಂದ ಜೀವವೊಂದಕ್ಕೆ ಮರುಜೀವ ನೀಡಿದ ಶ್ರೇಯಸ್ಸಿಗೆ ಪಾತ್ರನಾಗಿದ್ದಾನೆ. ವಿವೇಚನೆ ಹಾಗೂ ಸಮಯಪ್ರಜ್ಞೆಯಿಂದ ನಡೆದುಕೊಂಡರೆ ಎಂತಹ ಅಪಾಯವನ್ನೂ ತಪ್ಪಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಆಗಿದ್ದಾನೆ.ಮೂರು ದಿನಗಳ ಹಿಂದೆ ಹನಮಾಪುರ ಸಮೀಪದ ಹರಿಯುವ ಬೇಡ್ತಿ ಹಳ್ಳದ ಸಮೀಪ ತನ್ನ ತಾತ ಮಹ್ಮದಅಲಿ ಜೊತೆ ಬಾಲಕ ಮಹ್ಮದಶಮಿ ಮೀನು ಹಿಡಿಯಲು ತೆರಳಿದ್ದ. ಇದೇ ವೇಳೆ ಜಮೀನುವೊಂದರಲ್ಲಿ ಕೊಳವೆಬಾವಿ ಸಂಪರ್ಕಿಸುವ ವಿದ್ಯುತ್ ವಯರ್ ಭೂಮಿಗೆ ತಾಗಿ ಬಿದ್ದಿತ್ತು. ಇದನ್ನು ಗಮನಿಸದೇ ಮುಂದೆ ಸಾಗಿದಾಗ ಮಹ್ಮದ ಅಲಿ ಮೇಲೆ ವಿದ್ಯುತ್ ಪ್ರವಹಿಸಿ ಪ್ರಾಣಾಪಾಯದಲ್ಲಿ ಸಿಲುಕಿದ್ದ.ತಾತ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದನ್ನು ಗಮನಿಸಿದ ಮಹ್ಮದ ಶಮಿ ತಕ್ಷಣ ತನ್ನ ಕೈಯಲ್ಲಿದ್ದ ಕೊಡೆಯ ಪ್ಲಾಸ್ಟಿಕ್ ಇರುವ ಹಿಡಿಕಿಯನ್ನು ಮುಂದೆ ಮಾಡಿ ವಾಯರ್ ಎಳೆದಿದ್ದಾನೆ. ಸತತ ಮಳೆಯಿಂದ ಭೂಮಿ ತೇವಾಂಶ ಇದ್ದಿದ್ದರಿಂದ ನೆಲ-ಬಳ್ಳಿಗಳಿಗೂ ವಿದ್ಯುತ್ ಹರಿದಾಡುತ್ತಿತ್ತು. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಸೂಕ್ಷ್ಮತೆ ಮೆರೆದು ತಾತನ ಜೀವ ಉಳಿಸುವಲ್ಲಿ ಬಾಲಕ ಶಮಿ ಯಶಸ್ವಿಯಾಗಿದ್ದಾನೆ.ವಿದ್ಯುತ್ ಸ್ವರ್ಶದಿಂದ ಮಹ್ಮದಅಲಿ ಅವರ ಅಂಗೈವೊಂದಕ್ಕೆ ಕಬ್ಬಿಣ ಕಾಯಿಸಿ ಬರೆ ಹಾಕಿದಂತಹ ಭಾರೀ ಗಾಯವಾಗಿತ್ತು. ಅರ್ಧಗಂಟೆಗೂ ಹೆಚ್ಚು ಕಾಲ ಪ್ರಜ್ಞಾಹೀನರಾಗಿದ್ದ ಮಹ್ಮದಅಲಿಗೆ ಮೊಮ್ಮಗನೇ ನೀರು ಕುಡಿಸಿ ಆರೈಕೆ ಮಾಡಿದ ಮೇಲಿಯೇ ತಾನು ಬದುಕಿರುವ ಬಗ್ಗೆ ಅರಿವಾಗಿತ್ತು.ಮಹ್ಮದಶಮಿ ಸಣ್ಣ ವಯಸ್ಸಿನಲ್ಲೇ ಜನ ಮೆಚ್ಚುವ ಕೆಲಸ ಮಾಡಿದ್ದಾನೆ. ನಮ್ಮ ಶಾಲೆ ವಿದ್ಯಾರ್ಥಿ ಇಂತಹ ಧೈರ್ಯ-ಸಾಹಸದ ಕಾರ್ಯ ಮೆರೆದಿರುವುದು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದಕ್ಕೆ ಹೆಮ್ಮೆ ತಂದಿದೆ.