ವೀರಯೋಧರಿಗೆ ನೃತ್ಯ ರೂಪಕದ ವಂದನೆ

| Published : Aug 06 2024, 12:34 AM IST

ಸಾರಾಂಶ

ಮಕ್ಕಳ ನೃತ್ಯ ಪ್ರದರ್ಶನ ಕೊನೆಗೊಳ್ಳುತ್ತಿದ್ದಂತೆ, ಮಾರ್ಧನಿಸಿದ ಪ್ರೇಕ್ಷಕರ ಚಪ್ಪಾಳೆ,

ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಗರದ ಪೂರ್ಣ ಚೇತನ ಶಾಲೆಯ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗಿನ ಸುಮಾರು 550 ವಿದ್ಯಾರ್ಥಿಗಳು ನೃತ್ಯಗಳ ಮೂಲಕ ಮಾಯಾ ಲೋಕ ಸೃಷ್ಟಿಸಿದ್ದರು.ಯಾವುದೇ ವಿರಾಮವಿಲ್ಲದೆ, ಎರಡು ಗಂಟೆಗಳ ಕಾಲ ಸತತವಾಗಿ ವಿದ್ಯಾರ್ಥಿಗಳು ಈ ನೆಲದ ಹೆಮ್ಮೆಯ ನೃತ್ಯಗಳನ್ನು, ಪ್ರತಿ ಭಾರತೀಯರು ಎದೆ ಉಬ್ಬಿಸಿ ಹೆಮ್ಮೆ ಪಡುವಂತೆ ಪ್ರದರ್ಶಿಸಿದರು.ಮಕ್ಕಳ ನೃತ್ಯ ಪ್ರದರ್ಶನ ಕೊನೆಗೊಳ್ಳುತ್ತಿದ್ದಂತೆ, ಮಾರ್ಧನಿಸಿದ ಪ್ರೇಕ್ಷಕರ ಚಪ್ಪಾಳೆ, ಭಾರತ್ ಮಾತಾಕಿ ಜೈ ಅನ್ನುವ ಘೋಷಣೆಗಳು ಪ್ರತಿಯೊಬ್ಬರಲ್ಲೂ ವಿದ್ಯುತ್ ಸಂಚಾರವಾದಂತಹ ಅನುಭವ ನೀಡಿತು.ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಕಾಶ್ಮೀರದಲ್ಲಿ ಈ ನಾಡಿನ ಮಣ್ಣಿನ ರಕ್ಷಣೆಗೆ ಜೀವ ತ್ಯಾಗಗೈಯುವ ವೀರ ಯೋಧರ ಬಲಿದಾನದ ಸಾಹಸ ಗಾಥೆ ಎಲ್ಲೆಡೆ ವಂದೇ ಮಾತರಂ ಘೋಷಣೆ ಪ್ರತಿಧ್ವನಿಸುವಂತೆ ಮಾಡಿತು. ಅಮರನಾಥಯಾತ್ರೆಯ ಸಂದರ್ಭದಲ್ಲಿ ಭಯೋತ್ಪಾದಕರ ದಾಳಿಯ ಕತೆಯ ಎಳೆಯ ಈ ನೃತ್ಯ ರೂಪಕ ನಮ್ಮ ವೀರ ಸೈನಿಕರ ಸಾಹಸ, ತ್ಯಾಗ, ಅಪ್ರತಿಮ ವೀರ ಸಂಕಲ್ಪಕ್ಕೆ ನಮ್ಮೆಲ್ಲರ ಕೃತಜ್ಞತೆಯಾಗಿತ್ತು. ಪಾಕ್ ಪ್ರೇರಿತ ಭಯೋತ್ಪಾದಕರ ಹುಟ್ಟಡಗಿಸುತ್ತಾ, ಅಪ್ರತಿಮ ಸಾಹಸ ತೋರುವ ಸೈನಿಕರಿಗೆ ಮಕ್ಕಳೆಲ್ಲಾ ವೀರ ವಂದನೆ ಸಲ್ಲಿಸಿದ ಕ್ಷಣ ಅಲ್ಲೊಂದು ದೇಶಾಭಿಮಾನದ ವಾತಾವರಣ ಸೃಷ್ಟಿಸಿತು. ಈ ನೃತ್ಯ ರೂಪಕ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಲ್ಲಿಯೂ ಕಣ್ಣೀರು ಜಿನುಗುವಂತೆ ಮಾಡಿತ್ತು.ಈಶಾನ್ಯ ಭಾರತದ ಪ್ರಸಿದ್ಧ ಬಿದಿರು ನೃತ್ಯ, ಕರ್ನಾಟಕದ ಪಿಳಿ ನಲಿಕೆ, ವೀರಗಾಸೆ, ಕೋಲಾಟ, ಡೊಳ್ಳು ಕುಣಿತ, ಜಾರ್ಖಂಡ್ ನ ಪೈಕಾ, ಲಡಾಕ್ ನ ಕಥೋಕ್ ಚೆನ್ಮೋ, ಮಧ್ಯಪ್ರದೇಶದ ಮಟ್ಕಿ, ನಾಗಾಲ್ಯಾಂಡ್ ರಾಜ್ಯದ ಚಾಂಗ್ ಲೂ, ಹಿಮಾಚಲ ಪ್ರದೇಶದ ನಾತಿ, ತ್ರಿಪುರಾದ ಹೊಜಗಿರಿ ಹೀಗೆ ಮೈಸೂರಿನ ನೃತ್ಯಪ್ರಿಯರಿಗೆ ಅಪರಿಚಿತವಾದ ಸುಮಾರು 36 ಬಗೆಯ ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಎಳೆಯ ಮಕ್ಕಳು ತಮ್ಮ ಮುಖ ಭಾವ, ವಾದ್ಯ-ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುತ್ತಾ, ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರಿದರು. ಪೂರ್ಣ ಚೇತನ ಶಾಲೆಯ ಅಧ್ಯಕ್ಷ ವಿದ್ಯಾಸಾಗರ್, ಸಿಇಒ ಬಿ. ದರ್ಶನ್ ರಾಜ್, ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಎಲೈಟ್ ವರ್ಲ್ಡ್ ರೆಕಾರ್ಡ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲುಥಿನ್ ಪೋಹ್ ಟಾಯ್ ವನ್ ಚಿಂಗ್ ಮಾತನಾಡಿದರು.ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಸಿಂಗಾಪುರದ ತೀರ್ಪುಗಾರ್ತಿ ಟಾಯ್ ವಾನ್ ಚಿಂಗ್, ಎಲೈಟ್ ವರ್ಲ್ಡ್ ರೆಕಾರ್ಡ್ಸ್ ರಾಯಭಾರಿ ಮತ್ತು ಹಿರಿಯ ತೀರ್ಪುಗಾರ್ತಿ ಅಮೀತ್ ಕೆ. ಹಿಂಗೋರಾಣಿ, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿಯ ರಾಯಭಾರಿ ಮತ್ತು ಹಿರಿಯ ತೀರ್ಪುಗಾರ ಡಾ.ಎ.ಕೆ. ಸೆಂಥಿಲ್ ಕುಮಾರ್, ಇಂಡಿಯಾ ರೆಕಾರ್ಡ್ಸ್ ಅಕಾಡೆಮಿ ರೆಕಾರ್ಡ್ಸ್ ವ್ಯವಸ್ಥಾಪಕ ಕೆ.ಆರ್. ವೆಂಕಟೇಶ್ವರನ್ ಇದ್ದು, ಶಾಲೆಗೆ ವಿಶ್ವದಾಖಲೆಯ ಪ್ರಮಾಣ ಪತ್ರ ವಿತರಿಸಿ, ಅಭಿನಂದಿಸಿದರು.