ಮತದಾರರ ಕೈಯ್ಯಲ್ಲಿದೆ ಸುರಪುರ ಉಜ್ವಲ ಭವಿಷ್ಯ: ಸಚಿವ ಶರಣಬಸಪ್ಪಗೌಡ ದರ್ಶನಾಪುರ

| Published : Mar 30 2024, 12:51 AM IST

ಮತದಾರರ ಕೈಯ್ಯಲ್ಲಿದೆ ಸುರಪುರ ಉಜ್ವಲ ಭವಿಷ್ಯ: ಸಚಿವ ಶರಣಬಸಪ್ಪಗೌಡ ದರ್ಶನಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ನಗರದ ವಸಂತಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸುರಪುರ ಉಪಚುನಾವಣೆ ನಿಮಿತ್ತ ಮತದಾರರಿಗೆ ಶರಣಬಸಪ್ಪಗೌಡ ದರ್ಶನಾಪೂರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ಹಿರಿಯ ಶಾಸಕ ರಾಜಾ ವೆಂಕಟಪ್ಪ ನಾಯಕರ ಮರಣ ನಾವ್ಯಾರು ನಿರೀಕ್ಷಿಸಿರಲಿಲ್ಲ. ಉಪಚುನಾವಣೆ ಎದುರಾಗಿದ್ದು, ಮತದಾರರ ಕೈಯಲ್ಲಿ ಸುರಪುರ ಉಜ್ವಲ ಭವಿಷ್ಯ ನಿಂತಿದೆ. ಮತದಾರರೇ ಯುವ ನಾಯಕ ವೇಣುಗೋಪಾಲನನ್ನು ಕೈಹಿಡಿದು ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ನಗರದ ವಸಂತಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೆಂಕಟಪ್ಪ ನಾಯಕರು ಈ ಭಾಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಂದೆಗೆ ನೀಡಿದ ಶಕ್ತಿಯನ್ನು ಮಗನಿಗೆ ಧಾರೆ ಎರೆಯಬೇಕು. ರಾಯಚೂರು ಲೋಕಾಸಭಾ ಕ್ಷೇತ್ರಕ್ಕೂ ನಿಂತಿರುವ ನಿವೃತ್ತ ಐಎಎಸ್ ಅಧಿಕಾರಿ ಕುಮಾರನಾಯಕ ಅವರನ್ನು ಗೆಲ್ಲಿಸಬೇಕು ಎಂದರು.

ರಾಜ್ಯದಲ್ಲಿ 223 ತಾಲೂಕುಗಳಲ್ಲಿ ಬರಗಾಲವಿದ್ದರೂ ಕೇಂದ್ರದಿಂದ ಬಿಡುಗಾಸು ಬಿಡುಗಡೆಯಾಗಿಲ್ಲ. ಕೇಂದ್ರ ಬಿಜೆಪಿ ರೈತರನ್ನು ದಮನ ಮಾಡುವ ಕೆಲಸ ಮಾಡುತ್ತಿದೆ. ರೈತರನ್ನು ಉತ್ತೇಜಿಸಲು ಬದಲು ಎಲ್ಲ ಕಚ್ಚಾ ವಸ್ತುಗಳ ಬೆಲೆಯೇರಿಕೆ ಮಾಡಿದೆ. ಯಾವ ವಸ್ತುಗಳು ಕೈ ಎಟುಕುತ್ತಿಲ್ಲ. ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ. ಭಾರತೀಯರನ್ನು ಒಡೆದಾಳು ನೀತಿಯನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದರು.

ರಾಯಚೂರು ಲೋಕಾಸಭಾ ಕ್ಷೇತ್ರದ ಜಿ. ಕುಮಾರ ನಾಯಕ ಮಾತನಾಡಿ, 35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ಐಎಎಸ್ ಅಧಿಕಾರಿಯಾಗಿ ನಿವೃತ್ತನಾಗಿದ್ದೇನೆ. ಆಡಳಿತ ಭಾಷೆ ತಿಳಿದಿದ್ದು, ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡಿದ್ದೇನೆ. ಆಡಳಿತ ಭಾಷೆ ಬಳಸಿ ರಾಯಚೂರು ಮತಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆ. ಜನರ ಸೇವೆ ಮನ ತುಡಿಸುತ್ತಿದೆ. ನಿಮ್ಮ ಯೋಜನೆಗಳಿಗೆ ನಿಮ್ಮ ಮತ ನೀಡಿ ಗೆಲುವಿಗೆ ಕಾರಣರಾಗಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ತಂದೆಯವರು ಬಿಟ್ಟು ಹೋಗಿರುವ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಕನಸ್ಸು ಕಂಡಿದ್ದೇನೆ. ಇದಕ್ಕೆ ಕಾರ್ಯಕರ್ತರು ಕೊಡುತ್ತಿರುವ ಉತ್ಸಾಹವೇ ಟಾನಿಕ್ ಆಗಿದೆ. ಮತದಾರರು ನಮಗೆ ದಾರಿ ತೋರಿಸಬೇಕಿದೆ. ತಾಲೂಕಿನ ಜನತೆಯ ಮನಸ್ಸನ್ನು ಗೆಲ್ಲುವಂತ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ. ನಿಮ್ಮ ಅಮೂಲ್ಯವಾದ ಮತ ನೀಡಬೇಕು ಎಂದು ಹೇಳಿದರು.

ಜಿಪಂ ಸದಸ್ಯರಾದ ದೊಡ್ಡದೇಸಾಯಿ ಗೋನಾಲ, ಮರಿಲಿಂಗಪ್ಪ ಕರ್ನಾಳ ಹಾಗೂ ನಾಲ್ವರು ಗ್ರಾಪಂ ಸದಸ್ಯರು, ನೂರಾರು ಕಾರ್ಯಕರ್ತರು ಸೇರ್ಪಡೆಯಾದರು. ನಗರದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದಿಂದ ಕಾಂಗ್ರೆಸ್ ಮುಖಂಡರ ಮೆರವಣಿಗೆ ಗಾಂಧಿವೃತ್ತದವರೆಗೆ ನಡೆಯಿತು.

ಪ್ರಮುಖರಾದ ಭೀಮರಾಯ ಮೂಲಿಮನಿ, ಚಂದ್ರಶೇಖರ ದಂಡಿನ್, ನಿಂಗರಾಜ ಬಾಚಿಮಟ್ಟಿ, ಅಬ್ದುಲ್ ಅಲೀಂ ಗೋಗಿ, ಪ್ರಕಾಶ ಗುತ್ತೇದಾರ, ಮರಿಲಿಂಗಪ್ಪ ಕರ್ನಾಳ, ದೊಡ್ಡದೇಸಾಯಿ ಗೋನಾಲ ಮಾತನಾಡಿದರು.

ಮುಖಂಡರಾದ ವಿಠ್ಠಲ್ ಯಾದವ, ರಾಜಾ ವಾಸುದೇವ ನಾಯಕ, ರಾಜಾ ಕುಮಾರ ನಾಯಕ, ಬಾಪುಗೌಡ, ಅಬ್ದುಲ್ ಗಫೂರ ನಗನೂರಿ, ರಾಜಾ ಪಿಡ್ಡನಾಯಕ, ವೆಂಕಟೇಶ ಹೊಸಮನಿ, ಗುಂಡಪ್ಪ ಸೊಲ್ಲಾಪುರ, ಶಿವರಾಜ ಕಾಡ್ಲೂರ, ರಾಜಾ ಸಂತೋಷ ನಾಯಕ, ರಾಜಾ ಸುಶಾಂತ ನಾಯಕ, ರಾಜಾ ವಿಜಯಕುಮಾರ ನಾಯಕ, ಮಲ್ಲಣ್ಣ ಸಾಹುಕಾರ ಮುಧೋಳ ಸೇರಿದಂತೆ ಇತರರಿದ್ದರು.