ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಉಪಚುನಾವಣೆ ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರು ಸ್ವಗ್ರಾಮ ತಿಮ್ಮಾಪುರದಲ್ಲಿ ಮತದಾನದ ಕೇಂದ್ರದವರೆಗೂ ಟಗರಿಗೆ ಕಾಂಗ್ರೆಸ್ ಪಕ್ಷದ ಧ್ವಜ ಹಾಕಿಕೊಂಡು ಬಂದು ಮತದಾನ ಮಾಡಿದರು.

ಮತದಾನಕ್ಕೂ ಮುನ್ನ ತಂದೆ ದಿ.ಎಚ್.ವೈ. ಮೇಟಿ ಅವರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದು ಬೆಂಬಲಿಗರೊಂದಿಗೆ ಮತ ಕೇಂದ್ರಕ್ಕೆ ತೆರಳಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಮತದಾನ ಬಳಿಕ ಉಮೇಶ ಮೇಟಿ ತಂದೆಯನ್ನು ನೆನಸಿಕೊಂಡು ಕಣ್ಣೀರಿಟ್ಟರು. 15 ರಿಂದ 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಶ ವ್ಯಕ್ತಪಡಿಸಿದರು.

ಹಳದಿ ಶಾಲು ಹಾಕಿಕೊಂಡು ಬಂದ ವೀರಣ್ಣ ಚರಂತಿಮಠ:


ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಹಳದಿ ಶಾಲು ಹಾಕಿಕೊಂಡು ಪತ್ನಿ ಹಾಗೂ ಕುಟುಂಬದ ಸದಸ್ಯರ ಜೊತೆ ಬಾಗಲಕೋಟೆ ಹಳೆ ನಗರದ ಮತಗಟ್ಟೆ ಸಂಖ್ಯೆ 166 ರಲ್ಲಿ ಮತದಾನ ಮಾಡಿ ಗಮನ ಸೆಳೆದರು.

ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದ್ದು, ಸರಾಯಿ ಹಾಗೂ ಹಣ್ಣು ಹಂಚುವ ಕೆಲಸ ಮಾಡಿದ್ದಾರೆ. ಏನೆ ಆದರೂ ಬಾರಿ ಗೆಲುವು ನನ್ನದೇ ಎಂದರು.

ಪಿಂಕ್‌ ಮತಗಟ್ಟೆಯಲ್ಲಿ ವಿದ್ಯಾರ್ಥಿನಿಯರ ಸಾಲು:ಮತಗಟ್ಟೆ ನಂ195ನ್ನು ಸಖಿ ಮತಗಟ್ಟೆಯೆಂದು ಗುರುತಿಸಲಾಗಿತ್ತು. ಸರತಿ ಸಾಲಿನಲ್ಲಿ ವಿಧ್ಯಾರ್ಥಿನಿಯರು ನಿಂತು ಮತದಾನ ಮಾಡಿ ಗಮನ ಸೆಳೆದರು. ಕೈಯಲ್ಲಿ ವೋಟರ್ ಐಡಿ ಹಿಡಿದು ಸಾಲುಗಟ್ಟಿ ನಿಂತು ಮತದಾನ ಮಾಡಿದರು.

ಅಮೀನಗಡದಲ್ಲಿ ಕುಸಿದು ಬಿದ್ದ ವೃದ್ಧೆ: ಉಪಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂಬ ಆರೋಪ ಅಮೀನಗಡ ಪಟ್ಟಣದಲ್ಲಿ ಕೇಳಿ ಬಂತು. ಮತಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ನೆರಳಿನ ವ್ಯವಸ್ಥೆಯೂ ಇಲ್ಲ ಎಂದು ಮತದಾರರು ದೂರಿದರು.

ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧೆ ಅಸ್ವಸ್ಥರಾಗಿ ಕುಸಿದು ಬಿದ್ದರು. ತಕ್ಷಣ ಸ್ಥಳೀಯರು ಸಹಾಯಕ್ಕೆ ಬಂದು ಆಕೆಯನ್ನು ವೈದ್ಯರ ಬಳಿ ಕರೆದೊಯ್ದರು.

ಬಿಜೆಪಿಗೆ ಗೆಲುವು ಪಿ.ಎಚ್.ಪೂಜಾರ :ಕುಟುಂಬ ಸಮೇತ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ ವಿಪ ಸದಸ್ಯ ಪಿ.ಎಚ್. ಪೂಜಾರ ಬಿಜೆಪಿ ಅಭ್ಯರ್ಥಿ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಶ ವ್ಯಕ್ತಪಡಿಸಿದರು.

ದೂರದಿಂದ ಬಂದು ಮತಚಲಾಯಿಸಿದ ಕಾರ್ಮಿಕರು:ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ಮತವೂ ಪ್ರಾಮುಖ್ಯತೆ ಪಡೆದಿದ್ದು, ಮತದಾನಕ್ಕೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ದುಡಿಯಲು ಗುಳೆ ಹೋಗಿದ್ದ ಕಾರ್ಮಿಕರು ಗ್ರಾಮಗಳಿಗೆ ಮರಳಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಗೋವಾ, ಮಂಗಳೂರು, ಉಡುಪಿ, ಮುಂಬೈ ನಗರಗಳಿಗೆ ದುಡಿಯಲು ಹೋಗಿದ್ದ ಕುಟುಂಬಗಳು ಬಂದು ಮತ ಚಲಾಯಿಸಿದರು.