ಮಂಗಳೂರು: ಕಳೆದ ವರ್ಷ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ಯಶಸ್ವಿಯಾದ ಬೆನ್ನಲ್ಲೇ ಈ ವರ್ಷವೂ ನವೆಂಬರ್ 3ರಿಂದ 8ರವರೆಗೆ ಅಂತಾರಾಷ್ಟ್ರೀಯ ಟೂರ್ನಮೆಂಟ್ ಆಯೋಜಿಸಲು ಮಂಗಳೂರನ್ನು ಆಯ್ಕೆ ಮಾಡಲಾಗಿದೆ. ಇದರ ಆತಿಥ್ಯ ವಹಿಸಲು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಎಸೋಸಿಯೇಶನ್‌ಗೆ ಅವಕಾಶ ನೀಡಲಾಗಿದೆ.
ಬ್ಯಾಡ್ಮಿಂಟನ್ ಎಸೋಸಿಯೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಈ ವಿಷಯವನ್ನು ಪ್ರಕಟಿಸಿದ್ದಾರೆ.ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಯೋನೆಕ್ಸ್ ಸನ್‌ರೈಸ್ ಬ್ಯಾಡ್ಮಿಂಟನ್ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ ಅವರು ಸ್ಟೇಡಿಯಂನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಳೆದ ವರ್ಷ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಎಸೋಸಿಯೇಶನ್ ಅತ್ಯುತ್ತಮವಾಗಿ ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಿತ್ತು. ಹಾಗಾಗಿ ಈ ವರ್ಷವೂ ಇಲ್ಲೇ ಟೂರ್ನಮೆಂಟ್ ನಡೆಸಲು ಅವಕಾಶ ನೀಡಲಾಗುವುದು. ಕಳೆದ ವರ್ಷ 12ಕ್ಕೂ ಅಧಿಕ ದೇಶಗಳ ಆಟಗಾರರು ಭಾಗವಹಿಸಿದ್ದು, ಈ ವರ್ಷ ಇನ್ನೂ ಅಧಿಕ ಆಟಗಾರರ ನಿರೀಕ್ಷೆಯಿದೆ ಎಂದು ಸಂಜಯ್ ಮಿಶ್ರಾ ತಿಳಿಸಿದರು.
ಇದೇ ಸಂದರ್ಭ ರಾಜ್ಯ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡಿರುವ ಕರಾವಳಿಯ ಸ್ಥಳೀಯ ಆಟಗಾರರನ್ನು ಸಂಜಯ್ ಮಿಶ್ರಾ ಅಭಿನಂದಿಸಿದರು.ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಎಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಅಶೋಕ್ ಹೆಗ್ಡೆ, ಕಾರ್ಯದರ್ಶಿ ಸುಪ್ರೀತ್ ಆಳ್ವ, ಕೋಶಾಧಿಕಾರಿ ಲಕ್ಷ್ಮೀ ಪಿ. ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಕೆ. ನಿಯಾಝ್, ರಿಯಾಝ್ ಅಝರ್ ಹಸನ್, ಡಾ.ಶರತ್ ಕುಮಾರ್ ಕೆ. ಇದ್ದರು.