ದೇಶದಲ್ಲಿ ಮಹಾಭಾರತ ಕಾಲದಲ್ಲೇ ಕ್ವಿಜ್ ಪರಿಕಲ್ಪನೆ ಇತ್ತು

| Published : Jan 22 2025, 12:33 AM IST

ದೇಶದಲ್ಲಿ ಮಹಾಭಾರತ ಕಾಲದಲ್ಲೇ ಕ್ವಿಜ್ ಪರಿಕಲ್ಪನೆ ಇತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಪ್ರಪಂಚದಲ್ಲಿ ಮೊಟ್ಟ ಮೊದಲ ಕ್ವಿಜ್ ಎಂಬ ಪರಿಕಲ್ಪನೆ ಜನಿಸಿ, ಅದು ಸಾಕಾರಗೊಂಡಿದ್ದು ನಮ್ಮ ಭಾರತದಲ್ಲಿ ಎಂಬುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಥಟ್ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ ಹೇಳಿದರು.

ಶಿವಮೊಗ್ಗ: ಪ್ರಪಂಚದಲ್ಲಿ ಮೊಟ್ಟ ಮೊದಲ ಕ್ವಿಜ್ ಎಂಬ ಪರಿಕಲ್ಪನೆ ಜನಿಸಿ, ಅದು ಸಾಕಾರಗೊಂಡಿದ್ದು ನಮ್ಮ ಭಾರತದಲ್ಲಿ ಎಂಬುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಥಟ್ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ ಹೇಳಿದರು.

ಇಲ್ಲಿನ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಕ್ವಿಜ್ ಮಾಸ್ಟರ್ ಆಗಿ ಪಾಲ್ಗೊಂಡು ಮಾತನಾಡಿ, ರಸಪ್ರಶ್ನೆ ಎನ್ನುವ ಪರಿಕಲ್ಪನೆ ನಮ್ಮ ದೇಶದ್ದಾಗಿದ್ದು, ನಮ್ಮ ಪ್ರಶ್ನೋಪನಿಷತ್ ಎಂಬ ಗ್ರಂಥದಿಂದ ಬಂದಿದೆ. ಇದರಲ್ಲಿ ಪ್ರಶ್ನೆ ಮತ್ತು ಉತ್ತರ ರೂಪದಲ್ಲಿ ಬಂದ ಕಲ್ಪನೆ ನಂತರದ ಎಲ್ಲ ಉಪನಿಷತ್''''ಗಳಲ್ಲಿ ಇದು ಉಲ್ಲೇಖವಾಗಿವೆ ಎಂದು ತಿಳಿಸಿದರು.ಆರಂಭದಲ್ಲಿ ನಮ್ಮ ದೇಶದಲ್ಲಿ ಕ್ವಿಜ್ ನಡೆದಿದ್ದು ಮಹಾಭಾರತ ಕಾಲದಲ್ಲಿ. ಮೊದಲ ಕ್ವಿಜ್ ಮಾಸ್ಟರ್ ಯಮಧರ್ಮ, ಪಂಚ ಪಾಂಡವರು ಸ್ಪರ್ಧಿಗಳಾಗಿದ್ದರು. ಐವರಲ್ಲಿ ನಾಲ್ವರು ಸೋತಾಗ ಯುಧಿಷ್ಠಿತ ಮಾತ್ರ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟು ವಿಜಯಿಯಾಗುತ್ತಾನೆ. ಜಯಶಾಲಿಯಾದ ಆತನಿಗೆ ಏನು ಬಹುಮಾನ ಅಥವಾ ವರ ಬೇಕು ಎಂದು ಕೋರಿದಾಗ, ನನಗೇನು ಬೇಡ, ಬದಲಾಗಿ ನಮ್ಮ ಸಹೋದರರು ಮರಳಿ ಜೀವಂತ ಬೇಕು ಎಂದು ಕೋರುತ್ತಾನೆ ಎಂದು ವಿವರಿಸಿದರು.ಅದೇ ರೀತಿಯಲ್ಲಿ ಭಗವದ್ಗೀತೆಯಲ್ಲಿಯೂ ಸಹ ಕ್ವಿಜ್ ಇದೆ. ಅರ್ಜುನ ಕೇಳುವ ಪ್ರಶ್ನೆಗಳಿಗೆ ಶ್ರೀ ಕೃಷ್ಣ ಉತ್ತರ ನೀಡುತ್ತಾ ಹೋಗುತ್ತಾನೆ ಎಂದರು.ಇನ್ನು, ವಿದೇಶಗಳಲ್ಲಿ ನೋಡುವುದಾದರೆ ಪಾಶ್ಚಾತ್ಯ ದೇಶಗಳಲ್ಲಿ ಮೊದಲ ಬಾರಿಗೆ ಕ್ವಿಜ್ ನಡೆದಿದ್ದು ಈಡಿಪಸ್ ಕತೆಯಲ್ಲಿದೆ. ತನ್ನ ತಂದೆಯನ್ನುಕೊಂದು ತಾಯಿಯನ್ನೇ ಮದುವೆಯಾಗಿ ಮಕ್ಕಳನ್ನು ಪಡೆದ ಪರಮ ಪಾಪಿಯೊಬ್ಬನ ಕಥೆಯಿದೆ. ಆತನ ಊರಿನ ಬಳಿಯಲ್ಲಿ ಓರ್ವ ರಾಕ್ಷಸಿ ಇರುತ್ತಾಳೆ. ಆ ದಾರಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಆಕೆ ಪ್ರಶ್ನೆ ಕೇಳುತ್ತಿರುತ್ತಾಳೆ. ಸರಿ ಉತ್ತರ ನೀಡದವರನ್ನು ತಿನ್ನುತ್ತಿರುತ್ತಾಳೆ. ಅದೇ ದಾರಿಯಲ್ಲಿ ಬಂದ ಈಡಿಪಸ್ ಬಂದಾಗ ಆತನಿಗೂ ಆ ರಾಕ್ಷಸಿ ಕೇಳಿದ ಎಲ್ಲಾ ಪ್ರಶ್ನೆಗೆ ಈಡಿಪಸ್ ಸರಿಯಾದ ಉತ್ತರ ನೀಡುತ್ತಾನೆ. ಹೀಗಾಗಿ, ಆ ರಾಕ್ಷಸಿ ಬೆಟ್ಟದ ಮೇಲಿನಿಂದ ಬಿದ್ದು ಸಾವನ್ನಪ್ಪುತ್ತಾಳೆ. ಸಾಯುವ ಮುನ್ನ ನೀನು ನಿನ್ನ ಊರಿಗೆ ಹೋಗಿ, ನನ್ನನ್ನು ಕೊಂದ ಕಥೆ ಹೇಳು. ನೀನು ರಾಜನಾಗುತ್ತೀಯಾ ಎಂದಿದ್ದಳು. ಅದರಂತೆ, ಊರಿಗೆ ಹೋದ ಆತನನ್ನು ಜನರು ರಾಜನನ್ನಾಗಿ ಮಾಡುತ್ತಾರೆ. ಈಡಿಪಸ್ ಹಾಗೂ ರಾಕ್ಷಸಿ ನಡುವೆ ನಡೆದ ಪ್ರಶ್ನೋತ್ತರವೇ ಪಾಶ್ಚಾತ್ಯ ದೇಶಗಳ ಮೊದಲ ಕ್ವಿಜ್ ಎಂದು ತಿಳಿಸಿದರು.ಕಾಲೇಜಿನ ಡೀನ್ ಡಾ.ವಿನಾಯಕ್, ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವಿನಯ ಶ್ರೀನಿವಾಸ್ ಮಾತನಾಡಿದರು.

ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್.ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ ಮತ್ತಿತರರಿದ್ದದರು.ವಿಜೇತರಿಗೆ 150ಕ್ಕೂ ಅಧಿಕ ಪುಸ್ತಕ ಬಹುಮಾನ

ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೇ ಸಾರ್ವಜನಿಕ ವಲಯದಿಂದ 60ಕ್ಕೂ ಅಧಿಕ ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇಂಗ್ಲಿಷ್ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ಜನ್ಮತಃ ಅಂಧ ವಿದ್ಯಾರ್ಥಿ ಕೆ. ಅಭಿರಾಮ್ ಭಾಗವತ್ ಅವರು ಲಿಖಿತ ಪರೀಕ್ಷೆ ಬರೆದು, ಸ್ಪರ್ಧಿಯಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ನಾ.ಸೋಮೇಶ್ವರ ಅವರು ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ರೀತಿಯಲ್ಲಿಯೇ ಇಲ್ಲಿಯೂ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಸ್ಪರ್ಧೆಗಾಗಿ ಚಂದನ ವಾಹಿನಿಯಲ್ಲಿರುವ ರೀತಿಯಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ವಿಜೇತರಿಗೆ ಸುಮಾರು 150ಕ್ಕೂ ಅಧಿಕ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.