ಜಾತಿ ಪದ್ಧತಿ ಇದ್ದರೂ ಸ್ವರೂಪ ಬದಲಾಗಿದೆ

| Published : Jan 22 2025, 12:33 AM IST

ಸಾರಾಂಶ

ಜಾತಿ ಪದ್ಧತಿ ಇದ್ದರೂ ಅದರ ಸ್ವರೂಪಗಳು ಬದಲಾಗಿವೆ. ಹಿಂದಿನಕಾಲದಲ್ಲಿದ್ದ ಜಾತಿ ವ್ಯವಸ್ಥೆ ಪ್ರಭಾವ ಈಗ ಅಷ್ಟಾಗಿಲ್ಲ. ಹಿಂದೆ ಇದ್ದಂತಹ ಜಾತಿ ಪದ್ದತಿ ಮುಂದೆ ಇರಬಾರದು. ಪ್ರತಿ ಧರ್ಮದಲ್ಲೂ ಜಾತಿ ವ್ಯವಸ್ಥೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಎಲ್ಲ ಧರ್ಮಗಳಲ್ಲಿ ಜಾತಿ ವ್ಯವಸ್ಥೆ ಇದೆ. ಈ ಪದ್ಧತಿ ಮುಂದುವರಿದಿದೆ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಜಾತಿ ಪದ್ಧತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ತಮ್ಮದೆ ಆದ ರೀತಿಯಲ್ಲಿ ಕಾರ್ಯನಿರ್ವಹಿಸಿದ ಅಂಬಿಗರ ಚೌಡಯ್ಯ ಸಮಾಜ ಸುಧಾರಕರಾಗಿ ನಿಜಶರಣರಾಗಿ ಅಗ್ರಪಂಕ್ತಿಯಲ್ಲಿ ಒಬ್ಬರೆನಿಸಿಕೊಂಡಿದ್ದಾರೆ ಎಂದು ತಹಸೀಲ್ದಾರ್ ಸುದರ್ಶನ್ ಯಾದವ್ ಹೇಳಿದರು.

ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, ಅಂಬಿಗರ ಚೌಡಯ್ಯನವರು ಜಗಜ್ಯೋತಿ ಬಸವಣ್ಣನವರ ಸಮಕಾಲಿನರು ಎಂದರು.

ಬದಲಾದ ಜಾತಿ ಸ್ವರೂಪ

ಜಾತಿ ಪದ್ಧತಿ ಇದ್ದರೂ ಅದರ ಸ್ವರೂಪಗಳು ಬದಲಾಗಿವೆ. ಹಿಂದಿನಕಾಲದಲ್ಲಿದ್ದ ಜಾತಿ ವ್ಯವಸ್ಥೆ ಪ್ರಭಾವ ಈಗ ಅಷ್ಟಾಗಿಲ್ಲ. ಹಿಂದೆ ಇದ್ದಂತಹ ಜಾತಿ ಪದ್ದತಿ ಮುಂದೆ ಇರಬಾರದು. ಪ್ರತಿ ಧರ್ಮದಲ್ಲೂ ಜಾತಿ ವ್ಯವಸ್ಥೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಎಲ್ಲ ಧರ್ಮಗಳಲ್ಲಿ ಜಾತಿ ವ್ಯವಸ್ಥೆ ಇದೆ. ಈ ಪದ್ಧತಿ ಮುಂದುವರಿದಿದೆ. ಒಂದು ಜಾತಿಯವರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂದರು.

ವಿದ್ಯೆ ಜತೆ ವಿನಯ ಮುಖ್ಯ

ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ಇಂತಹ ವ್ಯವಸ್ಥೆಯಿಂದ ದೂರ ಉಳಿಯಬೇಕಾದರೆ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಬೇಕು. ವಿದ್ಯೆಗೆ ವಿನಯವೇ ಭೂಷಣ. ಅದು ಕಿರೀಟವಿದ್ದಂತೆ ಇದನ್ನು ಸಮರ್ಪಕವಾಗಿ ಧರಿಸಿದಾಗ ಮಾತ್ರ ಜಾತಿ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯ, ವಿದ್ಯೆಯಿದ್ದರೂ ವಿನಯವಿಲ್ಲದಿದ್ದರೆ ಅದು ವ್ಯರ್ಥ ಎಂದರು.

ಜಾತಿ ವ್ಯವಸ್ಥೆ ತೊಲಗಬೇಕು

ಬಸವಣ್ಣ ಮತ್ತು ಅವರ ಅನುಯಾಯಿಗಳು ೧೨ನೇ ಶತಮಾನದಲ್ಲಿ ಜಾತಿ ಪದ್ಧತಿ ವ್ಯವಸ್ಥೆ ಬಗ್ಗೆ ನಿಜಶರಣಾಗಿ ಹೋರಾಟ ನಡೆಸಿದರು. ೨೧ನೇ ಶತಮಾನದಲ್ಲಿದ್ದರೂ ಜಾತಿ ವ್ಯವಸ್ಥೆ ಇಂದಿಗೂ ಇದೆಯೆಂದರೆ ಎಂತಹ ಮನಸ್ಥಿತಿಗಳಲ್ಲಿ ನಾವು ಬದುಕುತ್ತಿದ್ದೇವೆಂಬುದನ್ನು ಅರ್ಥೈಸಿಕೊಳ್ಳಬೇಕು. ಯಾರೂ ಮೇಲಲ್ಲ, ಕೀಳಲ್ಲ. ನಾವೆಲ್ಲ ಒಂದೇ ಎಂಬ ಸಂದೇಶ ಇಂದಿನ ಪೀಳಿಗೆಗೆ ತಿಳಿಯದಂತಾಗಿದೆ, ಇದನ್ನು ಇಂದಿನ ಪಿಳೀಗೆಗೆ ಅಥೈಸುವ ಮೂಲಕ ಸುಂಸ್ಕೃತ ಸಮಾಜವನ್ನು ನಿರ್ಮಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಯೆಂದರು.

ಈ ಸಂದರ್ಭದಲ್ಲಿ ತಾ.ಪಂ.ಇಒ ಎಸ್.ಆನಂದ್, ನಗರಸಭೆ ಅಧ್ಯಕ್ಷ ಜಗನ್ನಾಥ, ಪೌರಾಯುಕ್ತ ಜಿ.ಎನ್.ಚಲಪತಿ, ಬಿಇಓ ಉಮಾದೇವಿ, ನೌಕರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಮುಖ್ಯ ಭಾಷಣಕಾರ ಚಿಕ್ಕಪ್ಪಯ್ಯ, ಸಮುದಾಯದ ಅದ್ಯಕ್ಷ ಮುರಳಿ, ಉಪಾದ್ಯಕ್ಷ ವೆಂಕಟೇಶ್, ಪ್ರಮುಖರಾದ ಶಿವಯ್ಯ, ಚಂದ್ರಶೇಖರ್ ನಗರಸಭೆಯ ಸದಸ್ಯರುಗಳಾದ ಶೋಭಾ ಶ್ರೀನಿವಾಸ್, ಜೈ ಬೀಮ್ ಮುರಳಿ ಮತ್ತಿತರು ಉಪಸ್ಥಿತರಿದ್ದರು.