ಮಕ್ಕಳ ರಕ್ಷಣೆಯಲ್ಲಿ ಕಾಳಜಿ, ಪ್ರಾಮಾಣಿಕತೆ ಇರಲಿ: ಡಾ. ತಿಪ್ಪೇಸ್ವಾಮಿ

| Published : Jan 22 2025, 12:32 AM IST

ಮಕ್ಕಳ ರಕ್ಷಣೆಯಲ್ಲಿ ಕಾಳಜಿ, ಪ್ರಾಮಾಣಿಕತೆ ಇರಲಿ: ಡಾ. ತಿಪ್ಪೇಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಮಕ್ಕಳ ಶಿಕ್ಷಣ ಕಾರ್ಯಪಡೆ, ಮಹಿಳೆ ಮತ್ತು ಮಕ್ಕಳ ಕಾವಲು ಸಮಿತಿ ರಚನೆಯು ಶೇ. 100ರಷ್ಟು ಅನುಷ್ಠಾನಗೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು.

ಕಾರವಾರ: ಜಿಲ್ಲೆಯನ್ನು ಮಕ್ಕಳ ರಕ್ಷಣೆಯಲ್ಲಿ ಇಡೀ ರಾಜ್ಯದಲ್ಲೇ ಮಾದರಿಯಾಗಿ ರೂಪಿಸಬೇಕು ಎಂದು ಜಿಲ್ಲೆಯ ಎಲ್ಲ ತಹಸೀಲ್ದಾರರಿಗೆ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಬಲವರ್ಧನೆಗಾಗಿ ಜಿಲ್ಲೆಯ ಎಲ್ಲ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ವ್ಯಾಪ್ತಿಯ ಮಕ್ಕಳ ಸಂಪೂರ್ಣ ಸುರಕ್ಷತೆಯ ಕುರಿತಂತೆ ಗಮನ ಹರಿಸಬೇಕು. ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಎಲ್ಲ ಶಾಲೆಗಳು ಮತ್ತು ವಸತಿನಿಲಯಗಳಿಗೆ ಆಗಾಗ ಭೇಟಿ ನೀಡಿ ಮಕ್ಕಳ ರಕ್ಷಣೆಗಾಗಿ ಆಯೋಗ ಮತ್ತು ಸರ್ಕಾರ ಸೂಚಿಸಿರುವ ನಿಯಮಗಳು ಸಂಪೂರ್ಣ ಅನುಷ್ಠಾನವಾಗಿರುವ ಕುರಿತಂತೆ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದರು.ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಮಕ್ಕಳ ಶಿಕ್ಷಣ ಕಾರ್ಯಪಡೆ, ಮಹಿಳೆ ಮತ್ತು ಮಕ್ಕಳ ಕಾವಲು ಸಮಿತಿ ರಚನೆಯು ಶೇ. 100ರಷ್ಟು ಅನುಷ್ಠಾನಗೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು. ಪೊಲೀಸ್ ಠಾಣೆಗಳಲ್ಲಿ ತೆರೆದಮನೆ ಕಾರ್ಯಕ್ರಮಗಳು ನಡೆಯಬೇಕು. ಶಾಲೆ ಮತ್ತು ಹಾಸ್ಟೆಲ್‌ಗಳ ವ್ಯಾಪ್ತಿಯಲ್ಲಿ ಮಕ್ಕಳಿಗೆ ಅತ್ಯಂತ ಸುರಕ್ಷಿತ ವಾತಾವರಣ ನಿರ್ಮಿಸಬೇಕು. ಮಕ್ಕಳ ಸಹಾಯವಾಣಿ 1098 ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಶಾಶ್ವತ ಫಲಕದಲ್ಲಿ ಆಳವಡಿಸಬೇಕು. ವಸತಿ ಶಾಲೆಗಳು ಮತ್ತು ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ಕೂಡಾ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಪರಿಶೀಲಿಸಬೇಕು ಎಂದು ಸೂಚಿಸಿದರು.ಶಾಲೆ ಮತ್ತು ಹಾಸ್ಟೆಲ್‌ಗಳ ಆವರಣದಲ್ಲಿ ವಿದ್ಯುತ್ ಕಂಬ ಅಳವಡಿಕೆ, ವಿದ್ಯುತ್ ತಂತಿ ಹಾದು ಹೋಗಿರುವ ಮತ್ತು ಟಿಸಿ ಅಳವಡಿಸಿರುವುದು ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಅಲ್ಲಿಂದ ತೆರವುಗೊಳಿಸಬೇಕು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಮಕ್ಕಳಸ್ನೇಹಿ ಕಾರ್ಯಾಚರಣೆ ನಡೆಸಬೇಕು ಮತ್ತು ಉತ್ತಮ ವಾತಾವರಣ ನಿರ್ಮಿಸಬೇಕು. ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು ನಿಯಮಾನುಸಾರ ನಡೆಸಬೇಕು ಮತ್ತು ಎಲ್ಲ ಗ್ರಾಪಂಗಳಲ್ಲಿ ತಮ್ಮ ಗ್ರಾಮದ ವ್ಯಾಪ್ತಿಯಲ್ಲಿರುವ ಎಲ್ಲ ಮಕ್ಕಳ ಸಮಗ್ರ ಮಾಹಿತಿಯ ದಾಖಲೆ ಇರಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿರೂಪಾಕ್ಷ ಗೌಡ ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಮೊದಲಾದವರು ಇದ್ದರು.