ಸಾರಾಂಶ
- ಮೇಯರ್ ಚಮನ್ ಸಾಬ್ ಅಧ್ಯಕ್ಷತೆ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಗುಂಡಿ ಬಿದ್ದ ರಸ್ತೆಗಳು, ಬೀದಿನಾಯಿಗಳು ಮತ್ತೆ ಹಂದಿಗಳ ಹಾವಳಿ ಬಗ್ಗೆ ಚರ್ಚೆಯೇ ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆಯ ಮಹಾನಗರ ಪಾಲಿಕೆ ಚೊಚ್ಚಲ ಸಾಮಾನ್ಯ ಸಭೆಯ ಬಹುತೇಕ ಸಮಯ ನುಂಗಿಹಾಕಿತು.
ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಸೇರಿದಂತೆ ಬಿಜೆಪಿ ಸದಸ್ಯರು ಜಿಲ್ಲಾ ಕೇಂದ್ರದ ಗುಂಡಿ ಬಿದ್ದ ರಸ್ತೆಗಳ ಫೋಟೋಗಳು, ಪತ್ರಿಕಾ ತುಣುಕುಗಳನ್ನು ಪ್ರದರ್ಶಿಸಿ, ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವಂತೆ ಒತ್ತಾಯಿಸಿದರು.ಕೆ.ಪ್ರಸನ್ನ ಮಾತನಾಡಿ, ಕಳೆದ ಸಭೆಯಲ್ಲೇ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಿಸುವಂತೆ ಒತ್ತಾಯಿಸಿದ್ದೆವು. ಆದರೆ, ಈವರೆಗೂ ಆ ಕೆಲಸ ಆಗಿಲ್ಲ. ವಾಹನಗಳು ಸಂಚರಿಸುವುದೇ ಕಷ್ಟವಾಗುತ್ತಿದೆ. ಅಂದಿನ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಎ.ನಾಗರಾಜ ಎಲ್ಲ ಗುಂಡಿಗಳನ್ನು ಮುಚ್ಚಿರುವುದಾಗಿ ಹೇಳಿದ್ದರು. ಆದರೂ, ರಸ್ತೆಯಲ್ಲಿ ಮತ್ತೆ ಯಾಕೆ ಗುಂಡಿಗಳಿವೆ ಎಂದು ಪ್ರಶ್ನಿಸಿದರು.
ಅದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯ ಎ.ನಾಗರಾಜ, ಎಲ್ಲ ಕಡೆ ದೊಡ್ಡ ಮಳೆಯಾಗಿದ್ದು, ಮತ್ತೆ ರಸ್ತೆಗಳಲ್ಲಿ ಗುಂಡಿಗಳಾಗಿವೆ. ರಸ್ತೆಗಳನ್ನು ಸರಿಪಡಿಸೋಣ. ಹಾಗೆಂದು ನೀವು ಸಂದಿಗೊಂದಿಯಲ್ಲಿ ಗುಂಡಿ ಬಿದ್ದ ರಸ್ತೆಗಳ ಬಗ್ಗೆ, ಇಡೀ ಊರಿನ ತುಂಬಾ ಗುಂಡಿಗಳ ರಸ್ತೆ ಇವೆಯೆಂಬಂತೆ ಹೇಳಬೇಡಿ. ಜಿಲ್ಲಾ ಕೇಂದ್ರದಲ್ಲಿ ಅದ್ಭುತ ಸಿ.ಸಿ. ರಸ್ತೆಗಳಿವೆ. ಗಂಭೀರ ಸಮಸ್ಯೆ ಬೇರೆ ಇವೆ. ಅವುಗಳ ಬಗ್ಗೆಯೂ ಚರ್ಚಿಸೋಣ ಎಂದು ಸಲಹೆ ನೀಡಿದರು.ಕಾಂಗ್ರೆಸ್ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ ಮಾತನಾಡಿ, ಸಣ್ಣಪುಟ್ಟ ಗುಂಡಿಗಳ ಫೋಟೋ ಪ್ರದರ್ಶಿಸಿದ್ದಾರಷ್ಟೇ. ಬಿಜೆಪಿ ಅಧಿಕಾರ ಅವಧಿಯಲ್ಲಿ ಬೀದಿದೀಪಿಗಳಿಗೆ ಬಲ್ಬ್‌ಗಳನ್ನು ಸಹ ನಿಮ್ಮಿಂದ ಹಾಕಿಲ್ಲ. ಈಗ ಕಾಂಗ್ರೆಸ್ಸನ್ನು ಪ್ರಶ್ನಿಸುತ್ತಿರುವ ಬಿಜೆಪಿ ಸದಸ್ಯರು ಯಾವ ರಸ್ತೆ ಗುಂಡಿಗಳು ಎಂಬುದನ್ನು ಅರಿಯಬೇಕು. ಜಲಸಿರಿ ಯೋಜನೆಯಡಿ ಮಾಡಿದ್ದ ಕಾಮಗಾರಿಗಳ ಗುಂಡಿಗಳೂ ರಸ್ತೆಯಲ್ಲಿ ಹಾಗೆಯೇ ಇವೆ ಎಂದು ಬಿಜೆಪಿ ಸದಸ್ಯರಿಗೆ ಟಾಂಗ್ ನೀಡಿದರು.
ವಿಪಕ್ಷ ನಾಯಕ ಪ್ರಸನ್ನ ಮಾತನಾಡಿ, ಗುಂಡಿ ಬಿದ್ದಿವೆ ಎಂದು ನಾವು ಆಡಳಿತ ಯಂತ್ರದ ಗಮನಕ್ಕೆ ತರುತ್ತಿದ್ದೇವೆ. ಆದರೆ, ಕಾಂಗ್ರೆಸ್ ಸದಸ್ಯರು ಏನು ಸಮರ್ಥನೆ ಮಾಡಿಕೊಳ್ಳಲು ಹೊರಟಿದ್ದಾರೆ? ಮಾಧ್ಯಮಗಳಲ್ಲಿ ತಿಂಗಳ ಹಿಂದೆ ವರದಿಯಾಗಿವೆ. ದಾವಣಗೆರೆಯಲ್ಲಿ ಗುಂಡಿಗಳಲ್ಲಿ ರಸ್ತೆ ಇವೆಯೋ ಅಥವಾ ರಸ್ತೆಗಳಲ್ಲೇ ಗುಂಡಿಗಳಿವೆಯೋ ಎಂಬುದೇ ಪ್ರಶ್ನೆಯಾಗಿದೆ ಎಂದರು.ಅದಕ್ಕೆ ಬಿಜೆಪಿ ಸದಸ್ಯ ಆರ್. ಶಿವಾನಂದ ಧ್ವನಿಗೂಡಿಸಿ, ಸ್ವತಃ ಮೇಯರ್ ವಾರ್ಡಲ್ಲೇ ಗುಂಡಿ ಬಿದ್ದ ರಸ್ತೆಗಳು ಸಾಕಷ್ಟಿವೆ. ಹೀಗೆ ಗುಂಡಿ ಬಿದ್ದ ರಸ್ತೆಗಳಿದ್ದರೂ, ಕಾಂಗ್ರೆಸ್‌ನವರು ಹೇಳುವಂತೆ ಸಿಂಗಾಪುರ ಆಗಲ್ಲ ಎಂದು ವ್ಯಂಗ್ಯವಾಡಿದರು.
ಮೇಯರ್ ಚಮನ್ ಸಾಬ್ ಮಾತನಾಡಿ, ರಸ್ತೆ ಗುಂಡಿಗಳ ಸಮಸ್ಯೆ ಕೇವಲ ಬಿಜೆಪಿಯದ್ದಷ್ಟೇ ಅಲ್ಲ. ಎಲ್ಲ 45 ವಾರ್ಡ್‌ಗಳ ಸಮಸ್ಯೆಯಾಗಿದೆ. ತಿಂಗಳುಗಟ್ಟಲೇ ಜೋರು ಮಳೆಯಾಗಿದ್ದರಿಂದ ರಸ್ತೆಗಳು ಮತ್ತೆ ಗುಂಡಿ ಬಿದ್ದಿವೆ. ಗುಂಡಿಗಳ ಮುಚ್ಚಿಸಲು ಪಾಲಿಕೆಯಿಂದಲೂ ಕ್ರಮ ಕೈಗೊಳ್ಳಲಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸಭೆಗೆ ಮಾಹಿತಿ ನೀಡಿ ಎಂದು ಸೂಚಿಸಿದರು.ವಾರದಲ್ಲೇ ಕಾಮಗಾರಿ ಆರಂಭ:
ಪಾಲಿಕೆ ಎಂಜಿನಿಯರ್ ಮಾತನಾಡಿ, ರಸ್ತೆಗಳ ಗುಂಡಿ ಮುಚ್ಚಲು ₹2 ಕೋಟಿ ಟೆಂಡರ್ ಕರೆಯಲಾಗಿತ್ತು. ಮಳೆ ಬಂದಿದ್ದರಿಂದ ಹಾಗೂ ಗುತ್ತಿಗೆದಾರರು ಸಾವನ್ನಪ್ಪಿದ್ದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಮತ್ತೆ ಮರುಟೆಂಡರ್ ಕರೆದಿದ್ದೇವೆ. ಮಾಧ್ಯಮಗಳಲ್ಲಿ ವರದಿಯಾದ ರಸ್ತೆಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಪಾಲಿಕೆ ವ್ಯಾಪ್ತಿಯ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚುವ ಕೆಲಸ ಇನ್ನೊಂದು ವಾರದಲ್ಲೇ ಆರಂಭಿಸಲಾಗುವುದು ಎಂದರು. ಮೇಯರ್ ಚಮನ್ ಸಾಬ್, ಬೇರೆ ಇಲಾಖೆ ರಸ್ತೆಯಾಗಿದ್ದರೆ, ಆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲು ಆದೇಶಿಸಿದರು.ಉಪ ಮೇಯರ್ ಸೋಗಿ ಶಾಂತಕುಮಾರ, ಆಯುಕ್ತೆ ರೇಣುಕಾ, ಸದಸ್ಯರಾದ ಸುಧಾ ಇಟ್ಟಿಗುಡಿ, ಮೀನಾ ಜಗದೀಶ, ನಾಮ ನಿರ್ದೇಶಿತ ಸದಸ್ಯರಾದ ಸುರಭಿ ಎಸ್. ಶಿವಮೂರ್ತಿ, ಎಲ್.ಎಂ..ಎಚ್. ಸಾಗರ್, ಮಾಜಿ ಮೇಯರ್‌ಗಳಾದ ಡಿ.ಎಸ್.ಉಮಾ ಪ್ರಕಾಶ, ರೇಖಾ ಸುರೇಶ ಗಂಡುಗಾಳೆ, ಮಾಜಿ ಉಪ ಮೇಯರ್ ಯಶೋಧ ಯೋಗೇಶ್ವರ, ಗಾಯತ್ರಿ ಬಾಯಿ, ಆರ್.ಎಲ್. ಶಿವಪ್ರಕಾಶ, ಕೆ.ಎಂ.ವೀರೇಶ, ಆಡಳಿತ, ವಿಪಕ್ಷ ಸದಸ್ಯರು, ಪಾಲಿಕೆ ಅಧಿಕಾರಿ, ಸಿಬ್ಬಂದಿ ಇದ್ದರು.
- - -ಬಾಕ್ಸ್ * ಹಂದಿ, ನಾಯಿ ಹಾವಳಿ ತಪ್ಪಿಸಲು ಪಕ್ಷಾತೀತ ಧ್ವನಿ
- ಟೆಂಡರ್ ಕರೆದು ನಾಯಿಗಳ ನಿಯಂತ್ರಣಕ್ಕೆ ಮೇಯರ್ ಸೂಚನೆ ಕನ್ನಡಪ್ರಭ ವಾರ್ತೆ ದಾವಣಗೆರೆನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರುತ್ತಿದೆ. ಅಲ್ಲದೇ, ಮತ್ತೆ ಹಂದಿಗಳನ್ನು ತಂದು ಊರೊಳಗೆ ಬಿಡುವ ಕೆಲಸವಾಗುತ್ತಿದೆ. ತಕ್ಷಣವೇ ನಾಯಿಗಳ ನಿಯಂತ್ರಣ, ಹಂದಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಿದರು.
ಬಿಜೆಪಿ ಸದಸ್ಯ ಆರ್.ಶಿವಾನಂದ ಮಾತನಾಡಿ, ಹಿಂದೆ ತಮ್ಮ ಪಕ್ಷದ ಎಸ್.ಟಿ.ವೀರೇಶ ಮೇಯರ್ ಆಗಿದ್ದಾಗ ಹಂದಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದರು. ಈಗ ಮತ್ತೆ ಹಂದಿಗಳ ಹಾವಳಿ ಹೆಚ್ಚುತ್ತಿದ್ದು, ಹೀಗಾದರೆ ದಾವಣಗೆರೆಯನ್ನು ಹೇಗೆ ಸಿಂಗಾಪುರ್ ಮಾಡುತ್ತೀರಿ ಎಂದು ಕಾಂಗ್ರೆಸ್ ಸದಸ್ಯರ ಕಾಲೆಳೆದರು.ಕಾಂಗ್ರೆಸ್ ಸದಸ್ಯ ಎ.ನಾಗರಾಜ ಮಾತನಾಡಿ, ಹಂದಿಗಳ ಹಾವಳಿ ಸಾಕಷ್ಟು ಕಡಿಮೆಯಾಗಿದ್ದು, ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಪ್ರತಿ ವಾರ್ಡ್‌ನಲ್ಲೂ ನಾಯಿಗಳ ಸಮಸ್ಯೆ ಇದ್ದು, ಕಾಂಪೌಂಡ್ ನಿರ್ಮಿಸಿರುವ ಜಾಗದಲ್ಲೇ ಸಾಕುನಾಯಿಗಳನ್ನು ಬಿಡಲು ಪಾಲಿಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಸಾಕುನಾಯಿಗಳನ್ನು ಮನೆಯಲ್ಲೇ ಕಟ್ಟಿಕೊಳ್ಳಬೇಕು. ರಸ್ತೆಯಲ್ಲಿ ಬಿಟ್ಟರೆ, ಪಾಲಿಕೆ ಸ್ಥಳಾಂತರಿಸುತ್ತದೆಂಬ ಎಚ್ಚರಿಕೆ ನೀಡಬೇಕು ಎಂದರು.
ಹಂದಿಗಳ ಕಾಂಪೌಂಡ್ ಕೆಲಸ ಅಂತ್ಯ:ಆರೋಗ್ಯಾಧಿಕಾರಿ ಮಾತನಾಡಿ, ಹಂದಿಗಳನ್ನು ಹೆಬ್ಬಾಳ್ ಸಮೀಪ ಸ್ಥಳಾಂತರಿಸಲು ಕಾಂಪೌಂಡ್ ನಿರ್ಮಿಸುವ ಕೆಲಸ ಮುಗಿದಿದೆ. ಹಂದಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು. ಆಗ ಮೇಯರ್ ಚಮನ್ ಸಾಬ್ ಮಾತನಾಡಿ, ಟೆಂಡರ್ ಕರೆದು, ನಾಯಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ಮನೆಯಲ್ಲಿ ಅಳಿದುಳಿದ ಆಹಾರವನ್ನು ತಂದು, ಮನೆಗಳ ಮುಂದೆ, ಚರಂಡಿ ಬಳಿ, ಖಾಲಿ ಜಾಗದಲ್ಲಿ ಸುರಿಯುವ ಜನರಿಂದಾಗಿ ನಾಯಿ, ಹಂದಿ ಹಾವಳಿ ಹೆಚ್ಚಾಗಿದೆ. ಇಲ್ಲದಿದ್ದರೆ, ಮನೆಗಳ ಆಟವಾಡಿಕೊಂಡಿರುವ, ಶಾಲೆಗೆ ಹೋಗಿ ಬರುವ, ಅಂಗಡಿಗೆ ಹೋಗಿ, ಬರುವ ಮಕ್ಕಳಿಗೆ ಅಂತಹ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸುತ್ತಿದೆ. ಹಂದಿ, ನಾಯಿಗಳ ಉಪಟಳದಿಂದ ದಾವಣಗೆರೆ ಜನರನ್ನು ರಕ್ಷಿಸಿ ಎಂದು ಆಗ್ರಹಿಸಿದರು.- - -
ಕೋಟ್ಸ್ ದಾವಣಗೆರೆ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಕೊಡಲು ₹50 ಸಾವಿರ ರು., ₹70 ಸಾವಿರ ಪಡೆಯಲಾಗುತ್ತಿದೆ. ಇ-ಸ್ವತ್ತು ಪಡೆಯಲು ಯಾವ ದಾಖಲೆಗಳನ್ನು ಕೊಡಬೇಕೆಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಅದೇ ರೀತಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಇ-ಸ್ವತ್ತು ನೀಡಲು ಹಣ ವಸೂಲು ಮಾಡುವುದನ್ನು ಮೊದಲು ತಡೆಯಿರಿ- ಸುರಭಿ ಎಸ್.ಶಿವಮೂರ್ತಿ, ನಾಮನಿರ್ದೇಶಿತ ಸದಸ್ಯೆ
- - - ಮಹಾನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ನಿಧನರಾದರೆ, ಅಂತಹವರ ಕುಟುಂಬಗಳಿಗೆ ಅಂತ್ಯಕ್ರಿಯೆಗೆ ಪಾಲಿಕೆ ನೀಡುವ ಖರ್ಚಿನ ಹಣವನ್ನು ಅವತ್ತೇ ನೀಡಬೇಕು. ಪೌರಕಾರ್ಮಿಕರಿಗೆ ಹೆಲ್ತ್ ಕಾರ್ಡ್ ಸೌಲಭ್ಯ ಕಲ್ಪಿಸಬೇಕು- ಎಲ್.ಎಂ.ಎಚ್. ಸಾಗರ್, ನಾಮ ನಿರ್ದೇಶಿತ ಸದಸ್ಯ
- - - ದಾವಣಗೆರೆ ಹೈಸ್ಕೂಲ್ ಮೈದಾನದ ಬಸ್ ನಿಲ್ದಾಣ ತೆರವುಗೊಳಿಸಿ, ಅಲ್ಲಿ ಕ್ರೀಡಾಭ್ಯಾಸಕ್ಕೆ ಅವಕಾಶ ಮಾಡಿಕೊಡಿ. ಆದರೆ, ಅವುಗಳನ್ನು ಕಮರ್ಷಿಯಲ್ ಮಾಡಲು ಹೊರಟಿದ್ದಾರೆ. ಮೈದಾನವನ್ನು ಮೈದಾನವಾಗಿಯೇ ಉಳಿಸಿ, ಕ್ರೀಡಾಪಟುಗಳಿಗೆ ಸ್ಪಂದಿಸಿ- ಆರ್.ಎಲ್.ಶಿವಪ್ರಕಾಶ, ಪಾಲಿಕೆ ಸದಸ್ಯ, ಬಿಜೆಪಿ
- - - ಪಾಲಿಕೆ ವ್ಯಾಪ್ತಿಯ ಜನಸಂಖ್ಯೆಗೆ 840 ಪೌರ ಕಾರ್ಮಿಕರು ಬೇಕು. ಆದರೆ, 419 ಜನ ಕೆಲಸ ಮಾಡುತ್ತಿದ್ದಾರೆ. ಕೆಲವರು ಆರೋಗ್ಯ ಇನ್ನಿತರೆ ಸಮಸ್ಯೆಗಳಿಂದಾಗಿ ಗೈರಾಗಿದ್ದಾರೆ. ಈಗಾಗಲೇ ಪೌರಕಾರ್ಮಿಕರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅನುಮೋದನೆ ಬರುವವರೆಗೂ ಪೌರ ಕಾರ್ಮಿಕರ ವಾರ್ಡ್ ವರ್ಗಾವಣೆ ನಡೆಯಲಿದೆ. ಪಾಲಿಕೆ ಸದಸ್ಯರು ಸಹಕರಿಸಬೇಕು- ರೇಣುಕಾ, ಆಯುಕ್ತೆ, ಪಾಲಿಕೆ
- - - -21ಕೆಡಿವಿಜಿ7: ದಾವಣಗೆರೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್ ಕೆ.ಚಮನ್ ಸಾಬ್ ಮಾತನಾಡಿದರು. -21ಕೆಡಿವಿಜಿ8, 9, 10: ದಾವಣಗೆರೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗುಂಡಿ ಬಿದ್ದ ರಸ್ತೆಗಳ ಬಗ್ಗೆ ವಿಪಕ್ಷ ಸದಸ್ಯ ಕೆ.ಪ್ರಸನ್ನಕುಮಾರ ಇತರೆ ಸದಸ್ಯರು ಕಾವೇರಿದ ಚರ್ಚೆ ನಡೆಸಿದರು.