ಸಾರಾಂಶ
ಕಳೆದೊಂದು ವಾರದಿಂದ ನಡೆಯುತ್ತಿರುವ ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು, ದೇವಿಯರ ಪ್ರಾಣ ಪ್ರತಿಷ್ಠಾಪನೆ, ಅಕ್ಷತಾರೋಹಣ ಹಾಗೂ ಹೋಮ-ಹವನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಅಳ್ನಾವರ: ಮೊದಲ ಬಾರಿಗೆ ಜರುಗುತ್ತಿರುವ ಇಲ್ಲಿಯ ಡೋರಿ ಗ್ರಾಮದ ಜಾತ್ರೆಯಲ್ಲಿ ದೇವಿಯರ ಮೂರನೇ ದಿವಸದ ಹೊನ್ನಾಟ ಗುರುವಾರ ಅತ್ಯಂತ ವೈಭವದಿಂದ ನಡೆಯಿತು.
ಕಳೆದೊಂದು ವಾರದಿಂದ ನಡೆಯುತ್ತಿರುವ ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು, ದೇವಿಯರ ಪ್ರಾಣ ಪ್ರತಿಷ್ಠಾಪನೆ, ಅಕ್ಷತಾರೋಹಣ ಹಾಗೂ ಹೋಮ-ಹವನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದ್ಯಾಮವ್ವ ಮತ್ತು ದುರ್ಗಾದೇವಿಯ ಮೂರು ದಿವಸದ ಹೊನ್ನಾಟದ ಮೆರವಣಿಗೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಭಂಡಾರದಲ್ಲಿ ಮಿಂದೆದ್ದರು. ಕೊನೆಯ ದಿವಸದ ಹೊನ್ನಾಟದ ಮೆರವಣಿಗೆಯಲ್ಲಿ ಗ್ರಾಮದ ಇಸ್ಲಾಂ ಧರ್ಮದವರು ಪಾಲ್ಗೊಂಡು ಭಕ್ತಿಯ ಸೇವೆ ಸಲ್ಲಿಸುವ ಮೂಲಕ ಧಾರ್ಮಿಕ ಸೌಹಾರ್ಧತೆಯನ್ನು ಮೆರೆದರು.ದೇವಿಯರ ಭವ್ಯ ರಥೋತ್ಸವ ಮೇ 16ರ ಶುಕ್ರವಾರ ಮಧ್ಯಾಹ್ನ ನಡೆಯಲಿದೆ. ಬೈಲಹೊಂಗಲದ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಹಿರೇಮುನವಳ್ಳಿಯ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯರು, ಬೆಳಗಾವಿ ಮುಕ್ತಿ ಮಠದ ಸೋಮೇಶ್ವರ ಶಿವಾಚಾರ್ಯರು, ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಭಾರತಿ ಮಹಾಸ್ವಾಮೀಜಿ ರಥೋತ್ಸವದಲ್ಲಿ ಭಾಗವಹಿಸಿದ್ದರು.
ರಥೋತ್ಸವದ ನಂತರ ದೇವಿಯರನ್ನು ಶಾಲಾ ಮಯದಾನದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವದೆಂದು ಜಾತ್ರಾ ಉತ್ಸವ ಸಮಿತಿಯವರು ತಿಳಿಸಿದ್ದಾರೆ. ಮುಸ್ಲಿಂ ಸಮಾಜದ ಮುಖಂಡ ಹಾಗೂ ಗ್ರಾಪಂ ಉಪಾಧ್ಯಕ್ಷ ಅಲ್ಲಾಭಕ್ಷ ಬಡಗಿ ನೇತೃತ್ವದಲ್ಲಿ ಸಮಾಜದವರು ದೇವಿಯರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.