ಸಾರಾಂಶ
ದೊಡ್ಡಬಳ್ಳಾಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಹಿಳೆಯರಿಗೆ ಇನ್ನೂ ಪೂರ್ಣ ಪ್ರಮಾಣದ ಅವಕಾಶಗಳು ದೊರೆಯದೇ ಇರುವುದು ವಿಷಾದನೀಯ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಎಚ್.ಎಸ್.ಸುನಂದ ಅಭಿಪ್ರಾಯಪಟ್ಟರು.
ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ಮಹಿಳೆ ಮತ್ತು ಪ್ರಸ್ತುತ ಸಮಾಜ ವಿಷಯ ಕುರಿತು ಮಾತನಾಡಿದ ಅವರು, ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಿರುವುದಾಗಿ ಹೇಳುವ ಪಟ್ಟಭದ್ರಹಿತಾಸಕ್ತಿಗಳು ಆಕೆಯ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳುತ್ತಿದ್ದಾರೆ. ಇಂದಿಗೂ ಮಹಿಳೆ ಸಮಾನ ಅವಕಾಶ ಮತ್ತು ಗೌರವವನ್ನು ಪಡೆಯಲು ಸಾಧ್ಯವಾಗಿಲ್ಲ. ಜನಸಂಖ್ಯೆಯಲ್ಲಿ ಮಹಿಳೆಯರೇ ಹೆಚ್ಚಿದ್ದರೂ ಸ್ಥಾನಮಾನ ಮತ್ತು ಪ್ರಾತಿನಿಧ್ಯದಲ್ಲಿ ಹಿಂದುಳಿದಿದ್ದಾರೆ. ಲಿಂಗತ್ವ ಸಮಾನತೆ ಅನುಷ್ಠಾನಗೊಳ್ಳುವವರೆಗೂ ಮಹಿಳೆಯರಿಗೆ ಸೂಕ್ತ ಅವಕಾಶಗಳು ಲಭಿಸುವುದಿಲ್ಲ ಎಂದರು.ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್‌ವರೆಗೆ ಮಹಿಳೆಯರಿಗೆ ಸಮಾನ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಮೀಸಲಾತಿ ವಿಚಾರದಲ್ಲೂ ಅನ್ಯಾಯವಾಗಿದೆ. ಮೀಸಲಾತಿ ನೆಪಮಾತ್ರಕ್ಕೆ ಮಹಿಳೆಯರಿಗೆ ಇದ್ದರೂ, ಅವಕಾಶ, ಅಧಿಕಾರ ಪುರುಷರ ಪಾಲಾಗುತ್ತಿದೆ ಎಂದು ಆರೋಪಿಸಿದರು.
ಹುಟ್ಟಿನಿಂದಲೇ ತಾರತಮ್ಯವನ್ನು ಎದುರಿಸಬೇಕಾದ ಅನಿವಾರ್ಯತೆ ಎಲ್ಲ ಮಹಿಳೆಯರಿಗೆ ಸಹಜವಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧೆಯವರೆಗೆ ಎಲ್ಲ ಹಂತದ ಹೆಣ್ಣು ಮಕ್ಕಳೂ ದೌರ್ಜನ್ಯದಿಂದ ಹೊರತಾಗಿಲ್ಲ. ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ದೊರೆಯುತ್ತಿಲ್ಲ. ಶೇ.14ರಷ್ಟು ದುಡಿಯುವ ಮಹಿಳೆಯರು ಮಾತ್ರ ನಿರ್ದಿಷ್ಟ ಸಂಬಳ ಪಡೆಯುವ ಹಂತದಲ್ಲಿದ್ದು, ಶೇ.68ರಷ್ಟು ಮಹಿಳೆಯರಿಗೆ ನಿಶ್ಚಿತ ವೇತನವೇ ಇಲ್ಲ ಎಂಬುದನ್ನು ಸಮೀಕ್ಷೆಗಳು ದೃಢಪಡಿಸಿವೆ ಎಂದರು.ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ ಮಾತನಾಡಿ, ಕೌಟುಂಬಿಕ ಸಂದರ್ಭಗಳಿಂದ ಹಿಡಿದು ಎಲ್ಲ ಹಂತಗಳಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೊಣೆಯಾಧಾರಿತ ಕಾರ್ಯನಿರ್ವಹಣೆಯಿಂದ ಮಾತ್ರ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ. ಕಾನೂನುಗಳಿದ್ದರೂ ಅವುಗಳನ್ನು ಪ್ರಜ್ಞಾಪೂರ್ವಕವಾಗಿ ಜಾರಿಗೆ ತರುವ ಮನೋಸ್ಥಿತಿ ಇಲ್ಲದಿರುವುದು ಸಮಸ್ಯೆ ಬಗೆಹರಿಯದಿರಲು ಪ್ರಮುಖ ಕಾರಣವಾಗಿದೆ ಎಂದರು.
ಗೋಷ್ಠಿಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಕೆ.ವತ್ಸಲ, ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ ಅಧ್ಯಕ್ಷ ರಾಮಶೆಟ್ಟಿ, ಎಂಎಸ್‌ವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಸುಬ್ರಹ್ಮಣ್ಯ, ಮುಖಂಡರಾದ ನೇತ್ರಾವತಿ ಮತ್ತಿತರರು ಭಾಗವಹಿಸಿದ್ದರು.26ಕೆಡಿಬಿಪಿ3-ದೊಡ್ಡಬಳ್ಳಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ಎಚ್.ಎಸ್.ಸುನಂದ, ಕೆ.ಎಸ್.ಪ್ರಭಾ ಮತ್ತಿತರರು ಭಾಗವಹಿಸಿದ್ದರು.