ಸಾರಾಂಶ
ಎಸ್.ಎಂ. ಸೈಯದ್
ಕನ್ನಡಪ್ರಭ ವಾರ್ತೆ ಗಜೇಂದ್ರಗಡಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಳಿತದ ಅವಧಿ ಮುಗಿದು ೮ ತಿಂಗಳು ಗತಿಸಿದರೂ ಮೀಸಲಾತಿ ಪ್ರಕಟವಾಗದ ಪರಿಣಾಮ ಅಭಿವೃದ್ಧಿ ಕಾರ್ಯಗಳು ಗ್ರಹಣ ಹಿಡಿದಂತಾಗಿವೆ.
ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೊದಲನೇ ಅವಧಿ ಆಡಳಿತ ಎರಡೂವರೆ ವರ್ಷ ಮುಗಿದಿದ್ದು, ಇನ್ನುಳಿದ ಅವಧಿಗೆ ಪುರಸಭೆ ಕಾಯ್ದೆ ಕಾನೂನಿನ ಪ್ರಕಾರ ರೊಟೇಷನ್ ಪದ್ಧತಿಯಂತೆ ಸರ್ಕಾರ ಮೀಸಲಾತಿಯನ್ನು ಘೋಷಣೆ ಮಾಡಿದರೆ ತೆರವಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ತುಂಬಬಹುದು.ಕಂದಾಯ ನಿರೀಕ್ಷಕರಾಗಿದ್ದ ಬಸವರಾಜ ಬಳಗಾನೂರ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಡಳಿತಾಧಿಕಾರಿ ನೇಮಕ ಮಾಡಿರುವುದರಿಂದ ಪುರಸಭೆ ಸದಸ್ಯರು ಕಳೆದ ಕಳೆದ ೮ ತಿಂಗಳಿನಿಂದ ಪುರಸಭೆಯಲ್ಲಿ ಸಾಮಾನ್ಯ ಸಭೆ ನಡೆದಿಲ್ಲ. ಪರಿಣಾಮ ಪಟ್ಟಣದ ಸಾರ್ವಜನಿಕರು ಹಾಗೂ ಪುರಸಭೆ ಸದಸ್ಯರ ಗೋಳು ಕೇಳವವರು ಇಲ್ಲದಂತಾಗಿದೆ.
8 ತಿಂಗಳಿಂದ ಖಾಲಿ:ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ವೀರಪ್ಪ ಪಟ್ಟಣಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅ ವರ್ಗದ ಮೀಸಲು ಬಂದಿದ್ದರಿಂದ ಲೀಲಾವತಿ ವನ್ನಾಲ ಕಾರ್ಯನಿರ್ವಹಿಸಿದ್ದರು. ಅವರ ಮೊದಲ ಎರಡೂವರೆ ವರ್ಷದ ಅಧಿಕಾರ ಅವಧಿ ಮೇ ತಿಂಗಳಲ್ಲಿ ಮುಗಿದಿದೆ. ಕಳೆದ ೮ ತಿಂಗಳಿನಿಂದ ಸಾಮಾನ್ಯ ಸಭೆ ನಡೆಯದ್ದರಿಂದ ಸಾರ್ವಜನಿಕರು ಮೂಲ ಸೌಲಭ್ಯಗಳಿಗಾಗಿ ಪ್ರತಿನಿತ್ಯ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಉಪ ವಿಭಾಗಾಧಿಕಾರಿ ಪುರಸಭೆ ಆಡಳಿತಾಧಿಕಾರಿಯಾಗಿದ್ದು, ₹೧೦ ಸಾವಿರಕ್ಕೂ ಮೇಲ್ಪಟ್ಟ ಕಾಮಗಾರಿಗಳ ಬಿಲ್ ಪಾವತಿಗಾಗಿ ಜಿಲ್ಲಾ ಕೇಂದ್ರದ ಕಾರ್ಯಾಲಯಕ್ಕೆ ಪರವಾನಗಿ ಪಡೆಯಲು ಪ್ರಭಾರಿ ಮುಖ್ಯಾಧಿಕಾರಿ ಅಲೆದಾಡುತ್ತಿದ್ದಾರೆ.18 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಪಟ್ಟಣದ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಬೆಂಬಲಿತ ಐವರು ಸದಸ್ಯ ವಿಪಕ್ಷ ಸ್ಥಾನದಲ್ಲಿದ್ದಾರೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಬದಲಾದ ರಾಜಕೀಯ ವಿದ್ಯಮಾನವು ಪಟ್ಟಣದ ಪುರಸಭೆ ಆಡಳಿತದ ಮೇಲೆ ಪರಿಣಾಮ ಬೀರಲಿದೆ ಎಂಬ ಚರ್ಚೆಗಳಿಗೆ ಪೂರಕವಾಗಿ ತೆರೆಮರೆಯಲ್ಲಿ ಕೆಲವು ಬಿಜೆಪಿ ಸದಸ್ಯರನ್ನು ಸಂಪರ್ಕಿಸಿ ವಿಶ್ವಾಸಕ್ಕೆ ಪಡೆಯುವ ಕಾರ್ಯ ನಡೆದಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೆ ಬಿಜೆಪಿಗೆ ಬಹುಮತ ಇರುವ ಕಾರಣದಿಂದ ಅಭಿವೃದ್ಧಿಗಾಗಿ ಆಡಳಿತಕ್ಕೆ ಸಹಕಾರ ನೀವು ನೀಡಿ, ನಾವು ನೀಡುತ್ತೇವೆ ಎಂಬ ಚರ್ಚೆಗಳಿಗೆ ಸಭೆಗಳು ಸೀಮಿತವಾಗಿದ್ದವು ಎನ್ನಲಾಗಿದೆ.
ನಿರಾಸೆಯ ಕರಿಮೋಡ:ಆದರೆ ಲೋಕಸಭಾ ಚುನಾವಣೆಗೆ ಮಾರ್ಚ್ ತಿಂಗಳಲ್ಲಿ ನೀತಿ ಸಂಹಿತೆ ಪ್ರಕಟವಾಗಲಿದೆ ಎಂಬ ವರದಿಗಳ ಹಿನ್ನೆಲೆ ಪುರಸಭೆಯ ಪಡಸಾಲೆಯಲ್ಲಿ ಲೋಕಸಭಾ ಚುನಾವಣೆ ಬಳಿಕ ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿವೆ ಎಂಬ ಚರ್ಚೆಗಳಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಕನಸು ಕಟ್ಟಿಕೊಂಡಿದ್ದವರ ಮೇಲೆ ನಿರಾಸೆಯ ಕರಿಮೋಡ ಆವರಿಸಿದೆ.ಕಳೆದ ೧೯೯೬ರಲ್ಲಿ ಪುರಸಭೆಗೆ ಎಸ್‌ಸಿ ಮೀಸಲು ಬಂದಿದ್ದರಿಂದ ಪಟ್ಟಣದ ದಿ. ಶಂಕರಪ್ಪ ಗಡಾದ ಹಾಗೂ ದಿ. ದುರಗಪ್ಪ ಬಳೂಟಗಿ ಪುರಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಇಲ್ಲಿಯವರೆಗೆ ಎಸ್‌ಸಿ ಹಾಗೂ ಎಸ್‌ಟಿಗೆ ಮೀಸಲು ಬಂದಿಲ್ಲ. ಹೀಗಾಗಿ ಈ ಬಾರಿಯ ಮೀಸಲು ಎಸ್‌ಟಿ ಅಥವಾ ಎಸ್‌ಸಿಗೆ ಬರಬಹುದು ಎಂಬ ಚರ್ಚೆಗಳ ನಡುವೆ ಇನ್ನುಳಿದ ಎರಡೂವರೆ ವರ್ಷದ ಅವಧಿಗೂ ಸಾಮಾನ್ಯ ಮೀಸಲು ಬರಲಿದೆ ಎಂಬ ಚರ್ಚೆಗಳಲ್ಲಿ ಸದಸ್ಯರು ಮಗ್ನರಾಗುವ ಜತೆಗೆ ಮೀಸಲು ಬಂದರೆ ಒಂದು ಕೈ ನೋಡೋಣ ಎಂಬ ಆಸೆಯಲ್ಲಿದ್ದಾರೆ.ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೊದಲ ಅವಧಿಯ ಆಡಳಿತ ಮೇ ತಿಂಗಳಲ್ಲಿ ಪೂರ್ಣಗೊಂಡಿದೆ. ಆದರೆ ಈ ವರೆಗೂ ಸಹ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿಲ್ಲ. ಪರಿಣಾಮ ಹೊಸ ಕ್ರಿಯಾ ಯೋಜನೆ ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಯ ಹಿಡಿಯುತ್ತಿದೆ. ಸರ್ಕಾರ ತಕ್ಷಣವೇ ಮೀಸಲು ಪ್ರಕಟ ಮಾಡಬೇಕು ಎಂದು ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ ಹೇಳಿದರು.