ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳಿಗೆ ರಾಜ್ಯಮಟ್ಟದ ವಿಶೇಷ ತರಬೇತಿ
ಕನ್ನಡಪ್ರಭ ವಾರ್ತೆ ಕೊಪ್ಪಳಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್ಗಳೊಂದಿಗೆ ಸ್ಪರ್ಧಿಸುವುದು ಸುಲಭವಲ್ಲ. ಆದರೂ ಸದಸ್ಯರಿಗೆ ಉತ್ತಮ ಸೇವೆ ಒದಗಿಸುವ ಜತೆಗೆ ಅವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವುದು ಸಹಕಾರ ಸಂಘಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶೇಖರಗೌಡ ವಿ. ಮಾಲಿಪಾಟೀಲ ಹೇಳಿದರು.
ನಗರದ ಹೊಸಪೇಟೆ ರಸ್ತೆಯ ನ್ಯೂ ಶೋಭಾಸ್ ಮಲ್ಟಿಕ್ಯೂಸಿನ್ ರೆಸ್ಟೋರೆಂಟ್ನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಹಕಾರ ಸಂಘಗಳ ಪದಾಧಿಕಾರಿಗಳು ತರಬೇತಿಯ ಪ್ರಯೋಜನ ಪಡೆದು, ಸಂಘಗಳ ಕಾರ್ಯನಿರ್ವಹಣೆಯಲ್ಲಿ ಅಳವಡಿಸಿಕೊಳ್ಳಬೇಕು. ಸಂಘಗಳ ಸೇವೆ ಮತ್ತು ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಅವುಗಳನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ತೋಟಪ್ಪ ಕಾಮನೂರು ಮಾತನಾಡಿ, ಸಹಕಾರ ಕ್ಷೇತ್ರ ಪವಿತ್ರವಾದ ಕ್ಷೇತ್ರವಾಗಿದೆ. ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಬಿ.ಕೆ. ಶಿವಕುಮಾರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಹಾಮಂಡಳದ ನಿರ್ದೇಶಕ ಜೆ.ಎಂ. ಶಿವಪ್ರಸಾದ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಕಾಯ್ದೆ-1959, ನಿಯಮಗಳು-1960ರ ಇತ್ತೀಚಿನ ತಿದ್ದುಪಡಿ, ಚುನಾವಣೆ ಪ್ರಕ್ರಿಯೆ, ಸಾಲ ವಸೂಲಾತಿ, ದಾವೆ ಪ್ರಕರಣಗಳು ಹಾಗೂ ಅನುಷ್ಠಾನ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ವರದಿಗಳಲ್ಲಿನ ನ್ಯೂನತೆಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜವಾಬ್ದಾರಿಗಳ ಕುರಿತು ಹಿರಿಯ ಲೆಕ್ಕಪರಿಶೋಧಕ ಸಂಗಮೇಶ ದೇಸಾಯಿ ಉಪನ್ಯಾಸ ನೀಡಿದರು.ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹಾಲಯ್ಯ ವಿ. ಹುಡೇಜಾಲಿ, ನಿರ್ದೇಶಕರಾದ ಶಕುಂತಲಾ ಎಚ್. ಹುಡೇಜಾಲಿ, ರಾಜೀವ್ ಬಿ. ಮಾದಿನೂರು, ಸಿ.ಎಚ್. ಸತ್ಯನಾರಾಯಣ, ವೆಂಕಟೇಶ ಶೆಟ್ಟರ್, ದಶರಥಗಿರಿ, ಮಲ್ಲಿಕಾರ್ಜುನ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಮಹಬೂಬ್, ಸಹಾಯಕ ನಿಬಂಧಕ ಮಲ್ಲಯ್ಯ ಕಂದ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯಕುಮಾರ, ಕೆಐಸಿಎಂ ಉಪನ್ಯಾಸಕ ರಾಜೇಶ ಯಾವಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಮರಯ್ಯ ಸ್ವಾಮಿ ಸಾಲಿಮಠ ಪ್ರಾರ್ಥಿಸಿದರು. ರಾಜೇಶ ಯಾವಗಲ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ಮಾಜಿ ನಿರ್ದೇಶಕ ಗವಿಸಿದ್ದೇಶ ಹುಡೇಜಾಲಿ ಗಣ್ಯರನ್ನು ಸ್ವಾಗತಿಸಿದರು. ರಾಜಶೇಖರ ಹೊಸಮನಿ ನಿರೂಪಿಸಿದರು. ಅಕ್ಷಯಕುಮಾರ ವಂದಿಸಿದರು.ಫೋಟೋ ಶೀರ್ಷಿಕೆ...
ಕೊಪ್ಪಳದಲ್ಲಿ ನಡೆದ ರಾಜ್ಯಮಟ್ಟದ ಸಹಕಾರ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಬಿ.ಕೆ. ಶಿವಕುಮಾರ ಉದ್ಘಾಟಿಸಿದರು.