ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರದ ನಾನಾ ಯೋಜನೆಯ ಅಡಿ ತಮ್ಮ ಸುತ್ತಮುತ್ತ ನಡೆಯುವ ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರು ಖುದ್ದು ವೀಕ್ಷಿಸಿ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿಯನ್ನು ಪಡೆದಾಗ ಮಾತ್ರ ನನ್ನ ಶ್ರಮದ ಜತೆಗೆ ಸರಕಾರದ ಅನುದಾನ ಸಾರ್ಥಕವಾಗಲಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಕೆ.ಎಂ ಶಿವಲಿಂಗೇಗೌಡ ಕ್ಷೇತ್ರದ ಜನತೆಗೆ ಕಿವಿಮಾತು ಹೇಳಿದರು.ತಾಲೂಕಿನ ಕಣಕಟ್ಟೆ ಹೋಬಳಿ ಪಡುವನಹಳ್ಳಿಯಿಂದ ಕಾಮಸಮುದ್ರದವರಗೆ ಸಿ.ಸಿ ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ORF ಯೋಜನೆಯಡಿ ರು.1ಕೋಟಿ.50 ಲಕ್ಷ ವೆಚ್ಚದಲ್ಲಿ ಭಾನುವಾರ ಕಾಮಸಮುದ್ರ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸಿ ಮಾದರಿ ಗ್ರಾಮವಾಗಿಸುವಲ್ಲಿ ಎಂಜಿನಿಯರ್ ಉಸ್ತುವಾರಿ ವಹಿಸಬೇಕು, ಗುತ್ತಿಗೆದಾರರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿ ಎಂದರು. ಅಭಿವೃದ್ಧಿ ಎಂದರೆ ಕೇವಲ ನಗರ ಪ್ರದೇಶದ ಜನತೆಗೆ ಮಾತ್ರ ಸೀಮಿತ ಎಂಬ ಅಸಮಾಧಾನದ ಮಾತು ಗ್ರಾಮೀಣ ಭಾಗದ ಜನರಲ್ಲಿತ್ತು. ಆದರೆ ಈಗ ಆಡಳಿತದ ವ್ಯವಸ್ಥೆ ಬದಲಾಗಿದ್ದು ನಗರ ಪ್ರದೇಶದ ಮಾದರಿಯಲ್ಲಿ ಗ್ರಾಮೀಣ ಭಾಗದ ಜನತೆಗೆ ಮನೆ ಮನೆಗೆ ಕುಡಿಯುವ ನೀರು ರಸ್ತೆ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಈ ಎಲ್ಲಾ ಯೋಜನೆಗಳನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿದ್ದರಿಂದಾಗಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲೂ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಕೊಡಲಾಗಿದೆ ಅಲ್ಲದೆ ಗ್ರಾಮೀಣ ಭಾಗದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ಅಭಿವೃದ್ಧಿಯಾಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರು ನಗರಕ್ಕೆ ಸುಲಭವಾಗಿ ಹೋಗಿ ಬರಲು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡರು.
ಮುಖಂಡರಾದ ಶಿವಣ್ಣ ಮಾತನಾಡಿ, ಕ್ಷೇತ್ರದ ಶಾಸಕರಾಗಿ ಶಿವಲಿಂಗೇಗೌಡರು ಚುನಾಯಿತರಾದ ಬಳಿಕ ನಗರ ಪ್ರದೇಶದಂತೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಶಾಸಕರ ಕಾಳಜಿಯಿಂದಾಗಿ ಕ್ಷೇತ್ರವ್ಯಾಪ್ತಿಯಲ್ಲಿ ಇರುವ ಕಾಲೋನಿ, ತಾಂಡ್ಯ, ಯಾದವರ ಹಟ್ಟಿ, ಹೀಗೆ ಹಿಂದುಳಿದ ಸಮಾಜಗಳು ವಾಸಿಸುವ ಸಣ್ಣಪುಟ್ಟ ಗ್ರಾಮಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಕಾಂಕ್ರೀಟ್ ರಸ್ತೆ ಚರಂಡಿ ನಿರ್ಮಾಣ ಹೀಗೆ ಅಗತ್ಯ ಮೂಲಭೂತ ಸೌಕರ್ಯಗಳು ಪೂರೈಕೆಯಾಗುತ್ತಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ, ರವಿ, ಗಂಗಾಧರ, ರೇಣುಕಪ್ಪ, ಮಹಲಿಂಗಪ್ಪ, ಶಿವಣ್ಣ ನಾನಾನಾಯ್ಕ, ಸದಸ್ಯ ಸಿದ್ದಪ್ಪ, ಮುರುಳಿ ಗ್ರಾಮಸ್ಥರಾದ ಸಿದ್ದಬಸಯ್ಯ, ರಂಗನಾಥ, ಇಲಾಖೆಯ ಎ.ಇ.ಇ ಮುನಿರಾಜು, ಗುತ್ತಿಗೆದಾರರಾದ ವೆಂಕಟೇಗೌಡ , ಹಾಗೂ ಗ್ರಾಮಸ್ಥರು ಹಾಜರಿದ್ದರು.