ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಿ: ಪ್ರಕಾಶ

| Published : Nov 25 2024, 01:04 AM IST

ಸಾರಾಂಶ

ಎಲ್ಲ ಗ್ರಾಮ ಪಂಚಾಯಿತಿಯವರು ಉದ್ಯೋಗ ಖಾತರಿ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಗಂಗಾವತಿ, ಕಾರಟಗಿ ತಾಲೂಕಿನ ಪ್ರಗತಿ ಪರಿಶೀಲನೆ ಸಭೆ । ಜಿಪಂ ಯೋಜನಾ ನಿರ್ದೇಶಕ

ಕನ್ನಡಪ್ರಭ ವಾರ್ತೆ ಗಂಗಾವತಿ

2025-26ನೇ ಸಾಲಿನ ನರೇಗಾ ಕ್ರಿಯಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಂತೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ. ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ಗಂಗಾವತಿ ಹಾಗೂ ಕಾರಟಗಿ ತಾಲೂಕಿನ ಗ್ರಾಪಂ ಪಿಡಿಒ ಹಾಗೂ ನರೇಗಾ ಸಿಬ್ಬಂದಿಗೆ ಗುರುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಎಲ್ಲ ಗ್ರಾಮ ಪಂಚಾಯಿತಿಯವರು ಉದ್ಯೋಗ ಖಾತರಿ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ಕಡ್ಡಾಯವಾಗಿ 100 ಮಾನವ ದಿನಗಳ ಕೆಲಸ ನೀಡಬೇಕು. ಗ್ರಾಮದ ವಿಧವೆಯರು, ನಿರ್ಗತಿಕರು, ವಿಕಲಚೇತನರನ್ನು ಗುರುತಿಸಿ ಅವರಿಗೆ ನರೇಗಾ ಯೋಜನೆ ಸೌಲಭ್ಯ ನೀಡಬೇಕು. ಸ್ಥಳೀಯವಾಗಿ ನಾಲಾ ಹೂಳೆತ್ತುವುದು, ಗೋಕಟ್ಟೆ ನಿರ್ಮಾಣ, ಹಳ್ಳದ ಹೂಳೆತ್ತುವ ಕೆಲಸ ಇಟ್ಟುಕೊಳ್ಳುವಂತೆ ಸೂಚಿಸಿದರು.

ನರೇಗಾ ಸಿವಿಲ್ ಕಾಮಗಾರಿಗಳಾದ ಶಾಲಾ ಕಾಮಗಾರಿ, ಸಿಸಿ ರಸ್ತೆ, ಚರಂಡಿ, ನಮ್ಮ ಹೊಲ, ನಮ್ಮ ರಸ್ತೆ ಕಾಮಗಾರಿಗಳನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಎಂಜಿನಿಯರ್‌ಗಳು ಮೇಲುಸ್ತುವಾರಿ ವಹಿಸಿ ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಪಂ ಒಟ್ಟಾರೆ ಅನುದಾನದಲ್ಲಿ ಶೇ.5ರಷ್ಟು ಅನುದಾನವನ್ನು ವಿಕಲಚೇತನರ ಕಲ್ಯಾಣಕ್ಕೆ ಸರಿಯಾಗಿ ಬಳಕೆ ಮಾಡಬೇಕು. ವಿವಿಧ ಯೋಜನೆಯಲ್ಲಿ ವಿಕಲಚೇತನರು ಬದುಕು ಕಟ್ಟಿಕೊಳ್ಳಲು ಅವರಿಗೆ ಮಾಹಿತಿ ನೀಡಿ, ಸ್ವಾವಲಂಬಿಗಳನ್ನಾಗಿ ಮಾಡಬೇಕು. ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಪ್ರಗತಿ ಕುಂಠಿತವಾಗಿದ್ದು, ಶೇ.100 ಗುರಿ ಸಾಧಿಸಲು ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕೆಂದರು.

ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ಗಂಗಾವತಿ, ಕಾರಟಗಿ ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ವೈ. ವನಜಾ, ಜಿಪಂ ಎಡಿಪಿಸಿ ಮಹಾಂತಸ್ವಾಮಿ, ವಿಷಯ ನಿರ್ವಾಹಕ ರವೀಂದ್ರ ಕುಲಕರ್ಣಿ ಸೇರಿದಂತೆ ಪಿಡಿಇಗಳು ಭಾಗವಹಿಸಿದ್ದರು.