ಚಿಕ್ಕಲ್ಲೂರು ಜಾತ್ರೆಗೆ ಸಕಲ ಸಿದ್ಧತೆ ಭರದಿಂದ ಸಾಗಿದ್ದು, ಐದು ದಿನಗಳ ಕಾಲ ನಡೆಯುವ ಜಾತ್ರೆಗೆ ಶನಿವಾರ ರಾತ್ರಿ ಜರುಗುವ ಚಂದ್ರಮಂಡಲೋತ್ಸದ ಮೂಲಕ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಇಂದು ಚಂದ್ರಮಂಡಲೋತ್ಸವ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ

ಕನ್ನಡಪ್ರಭ ವಾರ್ತೆ, ಹನೂರು

ಚಿಕ್ಕಲ್ಲೂರು ಜಾತ್ರೆಗೆ ಸಕಲ ಸಿದ್ಧತೆ ಭರದಿಂದ ಸಾಗಿದ್ದು, ಐದು ದಿನಗಳ ಕಾಲ ನಡೆಯುವ ಜಾತ್ರೆಗೆ ಶನಿವಾರ ರಾತ್ರಿ ಜರುಗುವ ಚಂದ್ರಮಂಡಲೋತ್ಸದ ಮೂಲಕ ವಿಧ್ಯುಕ್ತ ಚಾಲನೆ ದೊರೆಯಲಿದೆ.ಐದು ಹಗಲು, ಐದು ರಾತ್ರಿ ಅಪಾರ ಜನಸಂದಣಿಯ ನಡುವೆ ಜರುಗುವ ಜಾತ್ರೆಯಲ್ಲಿ ಒಂದೊಂದು ದಿನವು ಒಂದೊಂದು ವಿಶೇಷ ಆಚರಣೆಗಳು ನಡೆಯುತ್ತವೆ. ಹುಣ್ಣಿಮೆಯ ದಿನ ಮಧ್ಯರಾತ್ರಿ ಚಂದ್ರಮಂಡಲ ನಡೆಯುತ್ತದೆ. ಎರಡನೇ ದಿನ ದೊಡ್ಡವರ ಸೇವೆ. ಧರೆಗೆ ದೊಡ್ಡವರು ಎಂದು ಕರೆಯುವ ದೊಡ್ಡಮ್ಮತಾಯಿ ಮತ್ತು ರಾಚಾಪ್ಪಾಜಿ ಅವರಿಗೆ ಸಲ್ಲಿಸುವ ಸೇವೆ. ಮೂರನೇ ದಿನ ಮುಡಿಸೇವೆ ಅಥವಾ ನೀಲಗಾರರ ಧೀಕ್ಷೆ, ನಾಲ್ಕನೇ ದಿನ ಪಂಕ್ತಿಸೇವೆ (ಸಿದ್ಧರ ಸೇವೆ), ಐದನೇ ದಿನ ಮುತ್ತತ್ತಿರಾಯನ ಸೇವೆ ಅಥವಾ ಕಡೆ ಬಾಗಿಲು ಸೇವೆಯೊಂದಿಗೆ ಜಾತ್ರೆಗೆ ತೆರಬೀಳುತ್ತದೆ.

ಹಲುಗೂರು ಭಿಕ್ಷೆ ಬಳಿಕ ಒಕ್ಕಲು ಪಡೆದ ಕಾರಣ ಏಳು ಗ್ರಾಮಗಳ ಜನರು ಒಟ್ಟಾಗಿ ಸೇರಿ ಚಂದ್ರಮಂಡಲೋತ್ಸವ ಆಚರಿಸುತ್ತಾರೆ. ಈ ಉತ್ಸವಕ್ಕೆ ಒಂದೊಂದು ಸಮುದಾಯದ ಜನರು ಒಂದೊಂದು ಸೇವೆ ಸಲ್ಲಿಸುವ ನಿಯಮವಿದೆ. ಚಂದ್ರಮಂಡಲವೆಂಬ ಬಿದಿರಿನ ಕಿರೀಟ, ತೇರಿನ ಜ್ಯೋತಿಯ ಆಕೃತಿ ನಿರ್ಮಾಣಕ್ಕೆ ತೆಳ್ಳನೂರು ಗ್ರಾಮದ ಜನರು ಬೊಂಬು, ಬಿದಿರು, ಅಚ್ಚೆ ನೀಡಿದರೆ, ಮಸ್ಕಯ್ಯನದೊಡ್ಡಿ ಗ್ರಾಮಸ್ಥರು ಎಣ್ಣೆ, ಪಂಜು, ಬಾಣೂರು ಹಾಗೂ ಬಾಳಗುಣಸೆ ಗ್ರಾಮದವರು ಮಡಿ ಬಟ್ಟೆಯನ್ನು ನೀಡುತ್ತಾರೆ. ಹೀಗೆ ಎಲ್ಲ ಗ್ರಾಮಗಳು ನೀಡಿದ ವಸ್ತುಗಳನ್ನು ಸಂಗ್ರಹಿಸಿ ಶಾಗ್ಯ ಗ್ರಾಮದ ಗುರುಮನೆ ನೀಲಗಾರರು ಚಂದ್ರಮಂಡಲವನ್ನು ಸಾಂಪ್ರದಾಯದಂತೆ ತಯಾರಿಸುವ ಚಂದ್ರಮಂಡಲಕ್ಕೆ ಸಿದ್ಧತೆ ಮಾಡುತ್ತಾರೆ.

ಶಾಗ್ಯ ಗ್ರಾಮದವರಿಗೆ ಸೀಮಿತ:

ಪ್ರತಿ ವರ್ಷ ಚಂದ್ರಮಂಡಲ ಕಟ್ಟುವ ಜವಾಬ್ಧಾರಿ ಶಾಗ್ಯ ಗ್ರಾಮಸ್ಥರದ್ದು. ಜಾತ್ರೆಯ ಮೊದಲನೇ ದಿನವಾದ ಚಂದ್ರಮಂಡಲ ಉತ್ಸವ, ಕೊನೆಯ ದಿನವಾದ ಕಡೆ ಬಾಗಿಲ ಸೇವೆಯವರೆಗೂ ಈ ಗ್ರಾಮದ ಜನರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಜಾತ್ರೆಯ ಕೊನೆಯ ದಿನವಾದ ಬಾಗಿಲ ಸೇವೆಯಲ್ಲಿ ಇವರಿಗೆ ಮಠದ ವತಿಯಿಂದ ವಿಶೇಷ ಆತಿಥ್ಯವನ್ನು ನೀಡಿ ಗೌರವಿಸಲಾಗುತ್ತದೆ.ಶ್ರೀ ಕ್ಷೇತ್ರ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಆರಂಭಗೊಳ್ಳುವುದು ಹಾಗೂ ತೆರೆ ಬೀಳುವುದು ಶಾಗ್ಯ ಗ್ರಾಮಸ್ಥರಿಂದಲೇ ಎಂಬುದು ಮತ್ತೊಂದು ವಿಶೇಷವಾಗಿದೆ.

ಜಾತ್ರೆಗೆ ಚಿಕ್ಕಲೂರು ಸಿದ್ದಪ್ಪಾಜಿ ದೇವಾಲಯ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ದೀಪಾಲಂಕರ ಗಳಿಂದ ಕಂಗೊಳಿಸುತ್ತಿದೆ. ತಳಿರು ತೋರಣಗಳಿಂದ ಹಾಗೂ ವಿವಿಧ ಬಗೆಯ ಹೂಗಳಿಂದ ಸಿಂಗರಿಸಿ ಸಜ್ಜುಗೊಳಿಸಲಾಗಿದೆ.

2ಸಿಎಚ್ಎನ್‌11

ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರು ಜಾತ್ರಾ ಮಹೋತ್ಸವ ಪ್ರಯುಕ್ತ ಚಂದ್ರಮಂಡಲ ನಡೆಯುವ ಸ್ಥಳದಲ್ಲಿ ಸಕಲ ಸಿದ್ಧತೆ ನಡೆದಿದೆ.2ಸಿಎಚ್ಎನ್‌12

ಹನೂರು ಚಿಕ್ಕಲೂರು ಮಂಟೆಸ್ವಾಮಿ ದೇವಾಲಯ.

2ಸಿಎಚ್ಎನ್13 ಮಂಟೇಸ್ವಾಮಿ