ಮದ್ದೂರು ಪುರಸಭೆ ಜನ ಪ್ರತಿನಿಧಿಗಳ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಸ್ತೆಗಳು ಗುಂಡಿ ಬಿದ್ದಿವೆ. ಕೊಳಚೆ ನೀರು ರಸ್ತೆಯಲ್ಲಿ ಹರಿದು ಜನಸಾಮಾನ್ಯರು ಮೂಗು ಮುಚ್ಚಿಕೊಂಡು ತಿರುಗಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸದಸ್ಯರು ಗೆಜ್ಜಲಗೆರೆ ಹೋರಾಟಗಾರರ ವಿರುದ್ಧ ಟೀಕೆ ಮಾಡುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ.
ಕನ್ನಡಪ್ರಭ ವಾರ್ತೆ ಮದ್ದೂರು
ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ಉಂಟಾಗಿರುವ ಲೋಪ ಸರಿಪಡಿಸುವ ಜವಾಬ್ದಾರಿ ಶಾಸಕರಾದ ಕೆ.ಎಂ.ಉದಯ್ ಮತ್ತು ದಿನೇಶ್ ಗೂಳಿಗೌಡರ ಮೇಲಿದೆ ಎಂದು ಸಾಮಾಜಿಕ ಹೋರಾಟಗಾರ ಡಾ.ಎಚ್.ಎನ್.ರವೀಂದ್ರ ಶುಕ್ರವಾರ ಹೇಳಿದರು.ತಾಲೂಕಿನ ಗೆಜ್ಜಲಗೆರೆ ಗ್ರಾಪಂ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ವಿರೋಧಿಸಿ ಕಳೆದ 12 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಮದ್ದೂರು ಕ್ಷೇತ್ರದ ಜನರು ಇಂತಹ ಶಾಸಕರನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೀರಿ. ಈ ತಪ್ಪನ್ನು ಮನನ ಮಾಡಿಕೊಂಡು ಸರಿಸಪಡಿಸಬೇಕಾದ ಜವಾಬ್ದಾರಿ ಶಾಸಕರದ್ದಾಗಿದೆ ಎಂದರು.
ಗ್ರಾಪಂ ಜನಪ್ರತಿನಿಧಿಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಹ ಮಧ್ಯಪ್ರವೇಶ ಮಾಡಿ ಸಹಕಾರ ನೀಡಿ ಗೆಜ್ಜಲಗೆರೆ ಗ್ರಾಪಂ ಉಳಿಸಿಕೊಡಬೇಕು ಎಂದು ಆಗ್ರಹಪಡಿಸಿದರು.ಗ್ರೇಟರ್ ಬೆಂಗಳೂರು ಹಾಗೂ ಮೈಸೂರು ಅಭಿವೃದ್ಧಿ ಹೆಸರಿನಲ್ಲಿ ಆಡಳಿತರೂಢ ಪಕ್ಷದ ನಾಯಕರುಗಳು ರೈತರ ಜಮೀನನ್ನು ರಿಯಲ್ ಎಸ್ಟೇಟ್ ದಂಧೆ ಮೂಲಕ ಕಬಳಿಸುವ ಉನ್ನಾರ ನಡೆಸುತ್ತಿದ್ದಾರೆ. ಇದರಿಂದ ಜಮೀನು ಕಳೆದುಕೊಂಡ ರೈತರು ಈಗ ಜಮೀನ್ದಾರರ ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವುದು ಬೇಸರದ ಸಂಗತಿ ಎಂದರು.
ಮಂಡ್ಯ ಸೇರಿ ಜಿಲ್ಲೆಯ ಯಾವುದೇ ಗ್ರಾಪಂಗಳಲ್ಲಿ ಇನ್ನು ಮುಂದೆ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿ ರೈತರು ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು ಎಂದು ಎಚ್ಚರಿಸಿದರು.ರೈತಪರ ಹೋರಾಟಗಾರ್ತಿ ಸುನಂದ ಜಯರಾಮ್, ಗ್ರಾಪಂ ಅಧ್ಯಕ್ಷ ರಾಧಾ, ತಾಪಂ ಮಾಜಿ ಅಧ್ಯಕ್ಷ ಡಿಪಿ ಯೋಗೇಶ, ವಿಶ್ವಕರ್ಮ ಸಂಘಟನೆ ಶ್ರೀಕಂಠ, ಕುಮಾರ, ಶ್ರೀಧರ, ಸುಕನ್ಯಮ್ಮ, ರಮೇಶ, ಸ್ವಾಮಿ, ರೈತ ಮುಖಂಡ ರಾಧಾವೀರಪ್ಪ, ವಳೆಗೆರೆಹಳ್ಳಿ ಶ್ರೀನಿವಾಸ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರೈತ ಮಹಿಳೆಯರು ಧರಣಿಯಲ್ಲಿ ಭಾಗವಹಿಸಿದ್ದರು.
-------------ಜೆಡಿಎಸ್ ನಾಯಕರ ಬೆನ್ನಿಗೆ ಚೂರಿ; ಚಂದ್ರಶೇಖರ್ ಕಿಡಿ
ಮದ್ದೂರು: ಹಣ ಮತ್ತು ಅಧಿಕಾರದ ಆಸೆಗಾಗಿ ಜೆಡಿಎಸ್ ನಾಯಕರ ಬೆನ್ನಿಗೆ ಚೂರಿ ಹಾಕಿ ಅನ್ಯ ಪಕ್ಷಕ್ಕೆ ವಲಸೆ ಹೋಗಿರುವ ಜನಪ್ರತಿನಿಧಿಗಳಿಂದ ಗೆಜ್ಜಲಗೆರೆ ರೈತ ಹೋರಾಟಗಾರರು ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪಿ ಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ಜಿ.ಟಿ.ಚಂದ್ರಶೇಖರ್ ಪುರಸಭೆ ಮಾಜಿ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮದ್ದೂರು ಪುರಸಭೆ ಜನ ಪ್ರತಿನಿಧಿಗಳ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಸ್ತೆಗಳು ಗುಂಡಿ ಬಿದ್ದಿವೆ. ಕೊಳಚೆ ನೀರು ರಸ್ತೆಯಲ್ಲಿ ಹರಿದು ಜನಸಾಮಾನ್ಯರು ಮೂಗು ಮುಚ್ಚಿಕೊಂಡು ತಿರುಗಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸದಸ್ಯರು ಗೆಜ್ಜಲಗೆರೆ ಹೋರಾಟಗಾರರ ವಿರುದ್ಧ ಟೀಕೆ ಮಾಡುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ ಎಂದು ಕಿಡಿಕಾರಿದರು.