ಸಾರಾಂಶ
ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕಕನ್ನಡಪ್ರಭ ವಾರ್ತೆ ಹೊಸಪೇಟೆ
ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ ಆಗಿವೆ. ಯುವಜನತೆ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಹೊಂದಬೇಕು. ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಒತ್ತು ನೀಡುವೆ. ಕ್ರೀಡಾಪಟುಗಳಿವೆ ವೈಯಕ್ತಿಕವಾಗಿ ಪ್ರೋತ್ಸಾಹ ಧನ ಕೂಡ ನೀಡುವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯನಗರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಿಜಯನಗರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದು ದೇಶದ ಅಭಿವೃದ್ಧಿ ದ್ಯೋತ್ಯಕ ಕ್ರೀಡಾಪಟುಗಳು ಆಗಿದ್ದಾರೆ. ನಾವು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಸಾಧಿಸುತ್ತಾ ಹೊರಟಿದ್ದೇವೆ. ಮುಂದಿನ ಹಂತದಲ್ಲಿ ಒಲಿಂಪಿಕ್ಸ್ ಮಟ್ಟದಲ್ಲೂ ಭಾರತ ಅಗ್ರ ಐದು ದೇಶಗಳಲ್ಲಿ ಸ್ಥಾನ ಪಡೆಯಲಿದೆ. ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರೀಡಾಪಟುಗಳಿಗಾಗಿ ವಿಶೇಷ ಯೋಜನೆಗಳನ್ನು ತಂದಿವೆ. ಗ್ರಾಮೀಣ ಕ್ರೀಡಾಪಟುಗಳು ಇದರ ಸದುಪಯೋಗ ಪಡೆಯಬೇಕು ಎಂದರು.ವಿಜಯನಗರ ಜಿಲ್ಲೆಯಲ್ಲೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆಯುತ್ತಿದೆ. ಈ ಭಾಗದಲ್ಲಿ ಕ್ರೀಡಾಪಟುಗಳ ಸಮಸ್ಯೆ ಆಲಿಸಲು ವಿಶೇಷ ಸಭೆ ಕರೆಯಲಾಗುವುದು. ಸುತ್ತಮುತ್ತಲ ಕಂಪನಿಗಳ ಜೊತೆಗೆ ಮಾತನಾಡಿ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ಕೊಡಿಸಲಾಗುವುದು. ಜಿಲ್ಲಾಡಳಿತದ ಜೊತೆಗೆ ಸೇರಿ ಈ ಕಾರ್ಯ ಮಾಡಲಾಗುವುದು. ಹಲವು ಆಲೋಚನೆ, ಯೋಜನೆ ನಮ್ಮಲ್ಲಿದೆ. ಅವುಗಳನ್ನು ಸಾಕಾರಗೊಳಿಸಬೇಕಿದೆ. ಕ್ರೀಡಾಪಟುಗಳು ಈಗ ಸಮಸ್ಯೆ ಹೇಳಿಕೊಂಡಿದ್ದಾರೆ. ಅದನ್ನು ಹಂತ ಹಂತವಾಗಿ ಪರಿಹರಿಸುವೆ. ಇದಕ್ಕಾಗಿ ವಿಶೇಷ ಸಭೆ ಖಂಡಿತ ಕರೆದು ಪರಿಹರಿಸುವೆ ಎಂದರು.
ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಕ್ರೀಡಾ ಸ್ಫೂರ್ತಿ ಮೆರೆಯಬೇಕು. ದಸರಾ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ, ವಿಜಯನಗರದ ಬಾವುಟ ಹಾರಿಸಬೇಕು. ದಸರೆ ಹಬ್ಬ ಹಂಪಿ ನೆಲದಿಂದ ಆಚರಣೆಗೊಂಡು, ಈಗ ನಾಡಹಬ್ಬವಾಗಿದೆ. ಮೈಸೂರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವಿಜಯನಗರ ನೆಲದ ಕ್ರೀಡಾಪಟುಗಳು ಭಾಗವಹಿಸಿ, ಈ ನೆಲದ ಕೀರ್ತಿ ಬೆಳಗಬೇಕು ಎಂದರು.ಶಾಸಕರ ಪುತ್ರ ಎಚ್.ಜಿ. ವಿರೂಪಾಕ್ಷಿ 44 ಕ್ರೀಡಾ ತಂಡಗಳಿಗೆ ತಲಾ ₹1500 ವೈಯಕ್ತಿಕ ಪ್ರೋತ್ಸಾಹ ಧನ ನೀಡಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು, ಕ್ರೀಡಾಧಿಕಾರಿಗಳು, ದೈಹಿಕ ಶಿಕ್ಷಕರು ಮತ್ತಿತರರಿದ್ದರು.