ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಮಹಾರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರೇವಣ ಸಿದ್ದೇಶ್ವರರ ರಥವನ್ನು ಎಳೆದು ಪುನೀತರಾದರು. ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವರ ಮೂರ್ತಿಗೆ ವಿಸೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಜೊತೆಗೆ ಭೀಮೇಶ್ವರ ದೇವಾಲ ಮತ್ತು ರೇಣುಕಾಂಬಾ ಅಮ್ಮನವರ ದೇವಾಲಯದಲ್ಲಿಯೂ ವಿಶೇಷ ಪೂಜೆ , ವಿಶೇಷ ಅಲಂಕಾರ ಹಾಗೂ ರುದ್ರಾಭಿಷೇಕ ನೆಡದವು.

ರಥೋತ್ಸವಕ್ಕೂ ಮುನ್ನ ಬಸವೇಶ್ವರಸ್ವಾಮಿಯ ಅಗ್ನಿಕೊಂಡ ನಡೆಯುವ ಸಂಪ್ರದಾಯವಿದೆ. ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ ಬಳಿಕ ಬೆಳಗ್ಗೆ ದೇಗುಲದ ಆವರಣದಲ್ಲಿರುವ ಬಸವೇಶ್ವರ ಸ್ವಾಮಿ ಅಗ್ನಿಕೊಂಡವನ್ನು ಅರ್ಚಕ ವಿನಯ್ ರವರು ಭಕ್ತಿಯಿಂದ ಹಾಯ್ದರು.

ಮಧ್ಯಾಹ್ನ 12.45ರ ವೇಳೆಗೆ ರೇವಣ ಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಂದು ವಿಶೇಷವಾಗಿ ಅಲಂಕಾರಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಅಲಂಕೃತ ರಥಕ್ಕೆ ಅರ್ಚಕರು ಪೂಜೆ ಹಾಗೂ ಇತರೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಮಧ್ಯಾಹ್ನ 1 ಗಂಟೆ ವೇಳೆಗ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳು ರಥ ಎಳೆದು ಕೃತಾರ್ಥರಾದರು.

ಭಕ್ತರು ಜೈ ರೇವಮ ಸಿದ್ದೇಶ್ವರ, ಜೈ ಜೈ ರೇವಣ ಸಿದ್ದೇಶ್ವರ ಎಂದು ದೇವರಿಗೆ ಜೈಕಾರ ಹಾಕುತ್ತಾ ರಥವನ್ನು ಭಕ್ತಿಯಿಂದ ಎಳೆದು ಪುನೀತರಾದರು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಬಾಳೆ ಹಣ್ಣು , ಹೂ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ವೀರಗಾಸೆ, ಡೋಲು, ಹಗಲು ವೇಷ, ನಂದಿ ಧ್ವಜ ತಂಡಗಳು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ರಥೋತ್ಸವಕ್ಕೆ ಮೆರಗು ತಂದವು.


ರಥೋತ್ಸವದಲ್ಲಿ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ), ಮಾಜಿ ಶಾಸಕ ಕೆ. ರಾಜು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಧಾರ್ಮಿಕ ದತ್ತಿ ತಹಸೀಲ್ದಾರ್ ರಮ್ಯಾ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ರಮೇಶ್, ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಜಾತ್ರೆ ಅಂಗವಾಗಿ ರೇವಣ ಸಿದ್ದೇಶ್ವರಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ ರಂಗೋಲಿ ಸ್ಪರ್ಧೆ ಏರ್ಪಡಿಸಿತ್ತು. ದೇಗುಲದ ಆವರಣದಲ್ಲಿ ಮಹಿಳೆಯರು ಬಿಡಿಸಿದ್ದ ಬಗೆ ಬಗೆಯ ರಂಗೋಲಿಗಳು ನೋಡಗರ ಗಮನ ಸೆಳೆದವು. ಅತ್ಯುತ್ತಮ ಎನಿಸಿದ ರಂಗೋಲಿಗಳಿಗೆ ಟ್ರಸ್ಟ್ ವತಿಯಿಂದ ಬಹುಮಾನ ವಿತರಿಸಲಾಯಿತು.

ದಾಸೋಹ ವ್ಯವಸ್ಥೆ :

ರೇವಣಸಿದ್ದೇಶ್ವರಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್ ಮತ್ತು ಶ್ರೀ ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ಕೆಜಿ. ಹೊಸಹಳ್ಳಿ ಗ್ರಾಮಸ್ಥರಿಂದ ಬೃಹತ್ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಭಕ್ತರು ಅಲ್ಲಲ್ಲಿ ಅರವಂಟಿಗೆ ನಡೆಸಿದರು.

ರಥ ಬರುವ ಸಂಧರ್ಭದಲ್ಲಿ ರಥ ಬೀದಿಯಲ್ಲಿ ಭಕ್ತಾಧಿಗಳು ಮಜ್ಜಿಗೆ, ಪಾನಕ ಕೋಸಂಬರಿ ಹಂಚಿ ಭಕ್ತರ ಬಾಯಾರಿಕೆ ನೀಗಿಸಿದರು. ಹುಲಿಕೆರೆ-ಗುನ್ನೂರು ಗ್ರಾಪಂ ಮತ್ತು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿದ್ದರು.

ರಥೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್ , ಅಗ್ನಿಶಾಮಕ ದಳದ ವಾಹನ ಸನ್ನದ್ಧ ಸ್ಥಿತಿಯಲ್ಲಿತ್ತು. ವೈದ್ಯಕೀಯ ತಂಡವನ್ನು ಸಹ ನಿಯೋಜನೆ ಮಾಡಲಾಗಿತ್ತು.

ಬಾಕ್ಸ್ .............

ರಥಕ್ಕೆ ಸಿಲುಕಿದ ವ್ಯಕ್ತಿಯ ಕಾಲು

ರಥೋತ್ಸವದ ವೇಳೆ ಶಿವರುದ್ರ ಕೋಟಹಳ್ಳಿರವರ ಕಾಲು ರಥಕ್ಕೆ ಸಿಲುಕಿದ್ದರಿಂದ ಗಾಯಗೊಂಡಿದ್ದಾರೆ.

ರಥೋತ್ಸವ ರಥ ಬೀದಿಯಲ್ಲಿ ಸಾಗಿ ಮತ್ತೆ ಮೂಲ ಸ್ಥಾನದಲ್ಲಿ ನಿಲ್ಲಬೇಕಾದ ಸ್ಥಳದಲ್ಲಿ ಒಂದಷ್ಟು ದೂರ ಕ್ರಮಿಸುವಾಗ ರಥ ನಡೆಸುತ್ತಿದ್ದ ಶಿವರುದ್ರ ಕೋಟಹಳ್ಳಿರವರ ಕಾಲು ರಥದ ಚಕ್ರಕ್ಕೆ ಸಿಲುಕಿ ಅವಘಡವಾಯಿತು. ಕೂಡಲೇ ಸ್ಥಳದಲ್ಲಿದ್ದ ಅಂಬುಲೆನ್ಸ್ ಮುಖಾಂತರ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.

1ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಮಹಾರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.