ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಮಹನೀಯರನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೆ ಅವರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಪಿಎಸ್ಐ ಮಹೇಶ್ ಹೊಸಪೇಟೆ ಹೇಳಿದರು.ತಾಲೂಕಿನ ಬಿಜಿಕೆರೆ ಗ್ರಾಮದ ಪೆನ್ನೋಬಳೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಆಶಯಗಳಿಗೆ ನ್ಯಾಯ ದೊರಕಬೇಕಾದರೆ ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕು. ಪೋಷಕರು ಮೊದಲು ದುಶ್ಚಟಗಳನ್ನು ತ್ಯಜಿಸಿ ಮಕ್ಕಳ ಭವಿಷ್ಯಕ್ಕೆ ಶಿಕ್ಷಣದ ಭದ್ರ ಬುನಾದಿ ಹಾಕಬೇಕು. ವಿದ್ಯಾರ್ಥಿಗಳು ಅಂಕಗಳು ಕಡಿಮೆಯಾಯಿತು ಎನ್ನುವ ಬೇಸರ ಮಾಡಿಕೊಳ್ಳದೆ ಬರುವ ದಿನಗಳಲ್ಲಿ ಚಾಲೆಂಜ್ ಮಾಡಿಕೊಂಡು ಉತ್ತಮ ಅಂಕ ಗಳಿಸುವ ಮೂಲಕ ಸಮಾಜದಲ್ಲಿ ಉತ್ತಮ ಹುದ್ದೆಗಳನ್ನು ಪಡೆದುಕೊಂಡು ಹೆಸರು ಸಂಪಾದಿಸಿಕೊಳ್ಳಬೇಕೆಂದು ತಿಳಿಸಿದರು.ವಾಣಿಜ್ಯ ತೆರಿಗೆ ಇಲಾಖೆ, ಸಹಾಯಕ ಆಯುಕ್ತರಾದ ಜಯಂತ್ ಮಾತನಾಡಿ, ಜಯಂತಿಗಳು ಕೇವಲ ಮೋಜು-ಮಸ್ತಿಗೆ ಸೀಮಿತವಾಗಬಾರದು. ನಮ್ಮ ನೆಲದ ಸಂಸ್ಕೃತಿ ಮತ್ತು ಮಹನೀಯರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವಾಗಬೇಕು. ಶಿಕ್ಷಣ ಎಂಬುದು ಯಾರೊಬ್ಬರ ಸ್ವತ್ತಲ್ಲ. ಸಾಧಿಸುವಂತ ಮನೋಭಾವ ಇದ್ದಲ್ಲಿ ಯಶಸ್ವಿಯಾಗಬಹುದು. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣಪಡೆದು ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದರು.
ದಲಿತ ಯುವ ಮುಖಂಡ ಬಿ.ಟಿ.ನಾಗಭೂಷಣ ಮಾತನಾಡಿ, ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಆಶಯಗಳು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಬೇಕು. ಅವರ ಆದರ್ಶದಂತೆ ಪ್ರತಿಯೊಬ್ಬರು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಶಿಕ್ಷಣದಿಂದ ಎಲ್ಲವನ್ನೂಗಳಿಸಬಹುದು ಎನ್ನುವುದನ್ನು ಅರ್ಥ ಮಾಡಿಕೊಂಡು ಕಲಿಕೆಯತ್ತ ಮುಖ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಮಿತಿಯ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ, ದಶಕಗಳಿಂದ ಜಯಂತಿಗಳನ್ನು ಆಚರಿಸುತ್ತಿದ್ದರೂ ಶಿಕ್ಷಣದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿರಲಿಲ್ಲ. ಆದರೆ ಈ ಬಾರಿ ಗ್ರಾಮದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದು ಹೆಮ್ಮೆಯ ವಿಷಯ. ಇವರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಮತ್ತೊಬ್ಬರಿಗೆ ಸ್ಫೂರ್ತಿಯಾಗಬೇಕು. ಉತ್ತಮ ಅಂಕ ಗಳಿಸಿ ಹೆಸರು ಮಾಡುವಂತ ಛಲ ಮೈಗೂಡಿಸಿಕೊಂಡು ಯಶಸ್ವಿಯಾಗಬೇಕೆಂದು ತಿಳಿಸಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡ ಎಸ್.ಟಿ.ಸಣ್ಣ ವೀರಣ್ಣ, ಶಿಕ್ಷಕ ಶ್ರೀನಿವಾಸ್, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಷಣ್ಮುಖಪ್ಪ, ದಲಿತ ಮುಖಂಡರಾದ ಬಿ.ಸಿದ್ದಣ್ಣ, ಬಿ.ಬಸವರಾಜ, ಚಂದ್ರಣ್ಣ, ದಲಿತ ಮುಖಂಡ ತೊರೆ ಕೊಲಮ್ಮನ ಹಳ್ಳಿ ಬಸವರಾಜ, ಹಿರಿಯ ಮುಖಂಡರಾದ ಮಾರಣ್ಣ, ದುರುಗಪ್ಪ, ತಿಪ್ಪಯ್ಯ, ಗಂಗಣ್ಣ, ಮಾರಣ್ಣ, ಓಂಕಾರ ಮೂರ್ತಿ ಇದ್ದರು.