ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಹಂಪಿ ಉತ್ಸವದ ಮುಖ್ಯ ವೇದಿಕೆ ವಿಜಯನಗರ ವಾಸ್ತುಶಿಲ್ಪ ಶೈಲಿಯಲ್ಲಿ ಅರಳಲಿದ್ದು, ಈಗಾಗಲೇ ಕಲಾವಿದರು ಹಾಗೂ ಕಾರ್ಮಿಕರು ಪ್ರಧಾನ ವೇದಿಕೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಂಪಿ ಉತ್ಸವಕ್ಕೆ ಜನರನ್ನು ಸೆಳೆಯಲು ಆಕರ್ಷಕ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.ಬೆಂಗಳೂರಿನ ರಾಜ್ ಎಂಟರ್‌ಪ್ರೈಸಸ್‌ನ ಪರಿಣತ ಕಲಾವಿದರು ಹಾಗೂ ಕಾರ್ಮಿಕರು ವೇದಿಕೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹಂಪಿಯ ಗಾಯತ್ರಿ ಪೀಠದ ಬಳಿ ಪ್ರಧಾನ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಈ ವೇದಿಕೆಯಲ್ಲೇ ಫೆ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಹಾಗಾಗಿ ಈ ವೇದಿಕೆಯನ್ನು ಈ ಬಾರಿ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ.
ವಿಜಯನಗರ ವಾಸ್ತುಶಿಲ್ಪ: ಹಂಪಿ ಉತ್ಸವದ ಪ್ರಧಾನ ವೇದಿಕೆಯಲ್ಲಿ ವಿರೂಪಾಕ್ಷೇಶ್ವರ ದೇವಾಲಯದ ಗೋಪುರ ಅರಳಲಿದೆ. ಭವ್ಯ ವೇದಿಕೆಯಲ್ಲಿ ಗೋಪುರ ಆಕರ್ಷಣೆ ಕೇಂದ್ರವಾಗಲಿದೆ. ಬಳಿಕ ಹಂಪಿಯ ಕಲ್ಲಿನತೇರು, ಕಡಲೆ ಕಾಳು ಗಣಪತಿ ಮತ್ತು ವಿಜಯನಗರ ವಾಸ್ತುಶಿಲ್ಪದ ಸ್ಮಾರಕಗಳನ್ನು ವೇದಿಕೆಯಲ್ಲಿ ಸೃಜಿಸಲಾಗುತ್ತದೆ. ಈ ವೇದಿಕೆಯಲ್ಲಿ ಎಲ್‌ಇಡಿ ಪರದೆಗಳು ಇರಲಿದ್ದು, ಲೈಟಿಂಗ್‌ನಲ್ಲಿ ವೇದಿಕೆ ಕಂಗೊಳಿಸಲಿದೆ. ಈ ವೇದಿಕೆ ಸೃಜನೆ ಕಾರ್ಯ ಇನ್ನೂ ಎರಡು ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ವೇದಿಕೆ ನಿರ್ಮಾಣದ ಹೊಣೆ ಹೊತ್ತಿರುವ ಬೆಂಗಳೂರಿನ ರಾಜ್ ಎಂಟರ್‌ಪ್ರೈಸಸ್‌ನ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.ಈ ವೇದಿಕೆ 60 ಅಡಿ ಉದ್ದ ಹಾಗೂ 80 ಅಡಿ ಅಗಲ ಇರಲಿದೆ. ಇನ್ನೂ ಮುಂದೆಗಡೆ 120 ಅಡಿ ಅಗಲ ಇರಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಸೃಜಿಸಲಾಗುತ್ತಿದೆ. ಈ ವೇದಿಕೆ ಇಡೀ ಉತ್ಸವದ ಆಕರ್ಷಣೆ ಕೇಂದ್ರವಾಗಲಿದೆ.
60 ಸಾವಿರ ಆಸನಗಳು: ಹಂಪಿ ಉತ್ಸವದ ಪ್ರಧಾನ ವೇದಿಕೆ ನಿರ್ಮಾಣ ಕಾರ್ಯದಲ್ಲಿ 130 ಕಲಾವಿದರು ತೊಡಗಿಸಿಕೊಂಡಿದ್ದಾರೆ. ಅಸ್ಸಾಂ ಹಾಗೂ ರಾಜ್ಯದ ಕಾರ್ಮಿಕರು ಇದ್ದಾರೆ. ಇನ್ನೂ 30ರಿಂದ 40 ಪರಿಣಿತ ಕಲಾವಿದರು ಕೂಡ ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಣಿತ ಕಾರ್ಮಿಕರನ್ನು ಬಳಸಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ವೇದಿಕೆ ಸುತ್ತ ಕೋಟೆ, ಕೊತ್ತಲು, ಬೆಟ್ಟ- ಗುಡ್ಡಗಳನ್ನು ಸೃಜಿಸಲಾಗುತ್ತಿದೆ. ಹಂಪಿ ಸ್ಮಾರಕಗಳನ್ನು ನೆನಪಿಸುವ ಮಾದರಿಯಲ್ಲಿ ವೇದಿಕೆ ಸುತ್ತ ಸೃಜನೆ ಮಾಡಲಾಗುತ್ತಿದೆ.ವೇದಿಕೆಯಲ್ಲಿ 15ರಿಂದ 20 ಸಾವಿರ ವಿವಿಐಪಿ, ವಿಐಪಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ 40 ಸಾವಿರ ಕುರ್ಚಿಗಳನ್ನು ಹಾಕಲಾಗುತ್ತಿದ್ದು, ಒಟ್ಟು 60 ಸಾವಿರ ಕುರ್ಚಿಗಳನ್ನು ಈ ವೇದಿಕೆ ಮುಂಭಾಗ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನುಳಿದ ಮೂರು ವೇದಿಕೆಗಳ ನಿರ್ಮಾಣವನ್ನು ರಾಜ್ ಎಂಟರ್ ಪ್ರೈಸಸ್ ಸಂಸ್ಥೆ ಮಾಡುತ್ತಿದೆ.
ಗ್ರೀನ್ ರೂಮ್: ಪ್ರಧಾನ ವೇದಿಕೆ ಬಳಿ ಕಲಾವಿದರಿಗಾಗಿ ಗ್ರೀನ್ ರೂಮ್ 20x80 ಅಡಿಯಲ್ಲಿ ನಿರ್ಮಾಣ ಮಾಡಲಾಗುವುದು. ಇನ್ನೂ ಮಾಧ್ಯಮ ಕೇಂದ್ರ ಹಾಗೂ ವಿಐಪಿ ಕೇಂದ್ರಗಳನ್ನು ಕೂಡ ಜರ್ಮನ್ ಟೆಂಟ್ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಭದ್ರತಾ ವ್ಯವಸ್ಥೆ ದೃಷ್ಟಿಕೋನ ಇರಿಸಿಕೊಂಡು, ಮುಖ್ಯ ವೇದಿಕೆ ನಿರ್ಮಿಸಲಾಗುತ್ತಿದ್ದು, ಈ ವೇದಿಕೆಯೇ ಹಂಪಿ ಉತ್ಸವದ ಆಕರ್ಷಣೆ ಕೇಂದ್ರವಾಗಿರಲಿದೆ.ನಾಲ್ಕು ವೇದಿಕೆ: ಹಂಪಿಯಲ್ಲಿ ಈ ಬಾರಿ ಗಾಯತ್ರಿ ಪೀಠದ ಬಳಿ ಪ್ರಧಾನ ವೇದಿಕೆ ಸೇರಿ ಒಟ್ಟು ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗಾಯತ್ರಿಪೀಠ, ಎದುರು ಬಸವಣ್ಣ, ವಿರೂಪಾಕ್ಷೇಶ್ವರ ದೇವಾಲಯ ಆವರಣ ಮತ್ತು ಸಾಸಿವೆಕಾಳು ಗಣಪತಿ ಮಂಟಪದ ಬಳಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಡಿಸಿ ಎಂ.ಎಸ್. ದಿವಾಕರ್ ತಿಳಿಸಿದರು.60 ಸಾವಿರ ಆಸನ: ಹಂಪಿ ಉತ್ಸವದ ಪ್ರಧಾನ ವೇದಿಕೆ ಆಕರ್ಷಕ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಹಿಂದೆ ಕೂಡ ಹಂಪಿ ಉತ್ಸದಲ್ಲಿ ವೇದಿಕೆ ನಿರ್ಮಾಣ ಮಾಡಿದ ಅನುಭವ ಇದೆ. ವಿಜಯನಗರ ವಾಸ್ತುಶಿಲ್ಪ ಶೈಲಿಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಧಾನ ವೇದಿಕೆಯ ಮುಂಭಾಗ 60 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ ಎಂಟರ್‌ಪ್ರೈಸಸ್‌ನ ಮಂಜೇಶ್ ತಿಳಿಸಿದರು.