ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ದೇಶದಲ್ಲಿ ಕ್ರಿಕೆಟ್ ಗೆ ಸಿಕ್ಕಷ್ಟು ಪ್ರಾಮುಖ್ಯತೆ ಬೇರೆ ಆಟಗಳಿಗೆ ಸಿಗದೇ ಇರುವುದು ನೋವಿನ ಸಂಗತಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ 2024-25 ನೇ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಒಲಂಪಿಕ್ಸ್‌ನಲ್ಲಿ ಭಾರತ ಒಂದೇ ಒಂದು ಚಿನ್ನದ ಪದಕ ಗೆದ್ದಿಲ್ಲ. ಅದೇ ಚೈನಾ 87 ಪದಕ, ಅಮೇರಿಕಾ 113 ಪದಕಗಳನ್ನು ಮುಡಿಗೇರಿಸಿಕೊಂಡಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲ್ಲೋ ಒಂದು ಕಡೆ ಲೋಪ ಆಗುತ್ತಿದೆ ಎನ್ನುವುದು ಗೊತ್ತಿದ್ದರೂ ಆದ್ಯತೆಯಾಗಿ ಸ್ವೀಕರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಾಠದ ಜೊತೆ ವಿದ್ಯಾರ್ಥಿಗಳು ಕ್ರೀಡಾ ಮನೋಬಲ ಹೆಚ್ಚಿಸಿಕೊಳ್ಳಬೇಕು. ಕ್ರೀಡೆಗಳು ಮನುಷ್ಯನ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿಡುವಲ್ಲಿ ಪೂರಕವಾಗಿದೆ. ದೇಹಕ್ಕೆ ಕಸರತ್ತು ನೀಡಲು ಕ್ರೀಡೆಗಳು ಅವಶ್ಯಕ. ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸದಿದ್ದರೆ ಆರೋಗ್ಯ ಮತ್ತು ಶಿಕ್ಷಣಕ್ಕೂ ತೊಂದರೆಯಾಗುತ್ತದೆ ಎನ್ನುವುದು ಪಾಶ್ವಿಮಾತ್ಯ ರಾಷ್ಟ್ರಗಳಿಂದ ಗೊತ್ತಾಗಿದೆ. ಸರ್ಕಾರಕ್ಕಿಂತ ಹೆಚ್ಚಾಗಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮಕ್ಕಳ ಆಟಕ್ಕೆ ತೊಂದರೆಯಾಗಬಾರದೆಂದು ₹5ಲಕ್ಷ ವೆಚ್ಚದ ಕ್ರೀಡಾ ಸಾಮಾಗ್ರಿ ಕೊಡಿಸಲಾಗಿದೆ. ಹೊಳಲ್ಕೆರೆ ಪಟ್ಟಣದಲ್ಲಿ ₹12 ಕೋಟಿ ವೆಚ್ಚದಲ್ಲಿ ಕ್ರಿಡಾಂಗಣ ನಿರ್ಮಾಣ ಮಾಡಲಾಗಿದೆ. ಒಳಾಂಗಣ ಕ್ರೀಡಾಂಗಣಕ್ಕೆ₹5 ಕೋಟಿ ಹಾಗೂ 2 ಕೋಟಿ ರು.ವೆಚ್ಚದಲ್ಲಿ ಈಜುಕೊಳ ನಿರ್ಮಿಸಲಾಗಿದೆ ಎಂದು ತಿಳಿಸಿದರು.ತಾಲೂಕು ಮಟ್ಟದ ಕ್ರೀಡೆಯಲ್ಲಿ ಗೆದ್ದವರು ಜಿಲ್ಲಾ ಮಟ್ಟ, ಜಿಲ್ಲಾ ಮಟ್ಟದಲ್ಲಿ ಗೆಲ್ಲುವವರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವಂತೆ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು. ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರಮೋದಿರವರು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದ ಅವರು, ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಶೇ.60ರಷ್ಟು ಹೆಣ್ಣು ಮಕ್ಕಳು ತೇರ್ಗಡೆಯಾಗಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಈ ವೇಳೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಪುಟ್ಟಸ್ವಾಮಿ, ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎಸ್.ಆರ್.ಗಿರೀಶ್, ಉಪಾಧ್ಯಕ್ಷ ಮಾರುತೇಶ್ ಎಸ್.ಪ್ರಾಚಾರ್ಯ ಶಿವಗಂಗಮ್ಮ ಪಿ, ಪುರಸಭೆ ಸದಸ್ಯರಾದ ಪಿ.ಆರ್.ಮಲ್ಲಿಕಾರ್ಜುನ್, ಸುಧಾ ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಸ್ಥಳೀಯ ಸಲಹಾ ಸಮಿತಿ ಸದಸ್ಯರುಗಳು, ತಾಲೂಕು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರುಗಳು ಕ್ರೀಡಾಕೂಟದಲ್ಲಿ ಹಾಜರಿದ್ದರು.