ಕೃಷ್ಣ ರಾಧೆ ವೇಷಧರಿಸಿ ಕಂಗೊಳಿಸಿದ ಸರ್ಕಾರಿ ಶಾಲೆ ಪುಟಾಣಿಗಳು

| Published : Sep 01 2024, 01:47 AM IST / Updated: Sep 01 2024, 01:48 AM IST

ಸಾರಾಂಶ

ಹಾಸನ ನಗರದ ಚನ್ನಪಟ್ಟಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೪-೨೫ನೇ ಸಾಲಿನಿಂದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳು ಪ್ರಾರಂಭವಾಗಿದ್ದು, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊದಲ ವರ್ಷದಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳು ಕರಷ್ಣ, ರಾಧೆ ವೇಷ ಧರಿಸಿ ಹಾಡಿಗೆ ನೃತ್ಯ ಮಾಡುವ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ. ಸರ್ಕಾರಿ ಶಾಲೆಯೊಂದು ತನಗೆ ಸಿಗುವ ಅತ್ಯಲ್ಪ ಸಂಪನ್ಮುಲಗಳೊಂದಿಗೆ ಉತ್ತಮವಾಗಿ ಸಾಗುತ್ತಿದೆ.ಈಗ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಿರುವುದು ಇನ್ನು ಪ್ರೋತ್ಸಾಹ ಸಿಕ್ಕಿದಂತಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಚನ್ನಪಟ್ಟಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೪-೨೫ನೇ ಸಾಲಿನಿಂದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳು ಪ್ರಾರಂಭವಾಗಿದ್ದು, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊದಲ ವರ್ಷದಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ಬೆಳಿಗ್ಗೆ ಜರುಗಿತು. ಪ್ರಭಾರಿ ಮುಖ್ಯ ಶಿಕ್ಷಕರಾದ ಕೆ.ಎಂ. ಹರೀಶ್ ಮಾತನಾಡಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳು ಕರಷ್ಣ, ರಾಧೆ ವೇಷ ಧರಿಸಿ ಹಾಡಿಗೆ ನೃತ್ಯ ಮಾಡುವ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ. ಈ ಕಾರ್ಯಕ್ರಮ ನಡೆಸಲು ದಾನಿಗಳು ತಮ್ಮ ಕೊಡುಗೆ ನೀಡಿದ್ದು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡ ತಮ್ಮ ಸಹಕಾರ ನೀಡಿದ್ದರು. ಮಕ್ಕಳು ಮತ್ತು ಪೋಷಕರು ಆಸಕ್ತಿಯಿಂದ ಕಾರ್ಯಕ್ರಮ ವೀಕ್ಷಣೆ ಮಾಡಲು ಭಾಗವಹಿಸಿದ್ದರು. ಇದರ ಜೊತೆಗೆ ಜಿಲ್ಲಾ ಉಪನಿರ್ದೇಶಕರು ಈ ಶಾಲೆಗೆ ಭೇಟಿ ನೀಡಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲು ಪ್ರತ್ಯೇಕ ಒಂದು ಕೊಠಡಿ ನಿರ್ಮಿಸಲು ಸೂಚನೆ ಕೊಟ್ಟರು. ಈಗಾಗಲೇ ಅದರ ಕಾಮಗಾರಿ ಪ್ರಗತಿಯಲ್ಲಿದ್ದು, ಶಾಲೆಯ ಶೌಚಾಲಯದ ಯುಜಿಡಿ ಪೈಪ್‌ಲೈನನ್ನು ಸರಿಪಡಿಸಲು ದಾನಿಗಳು ಅದಕ್ಕೆ ಬೇಕಾದ ಸಲಕರಣೆಗಳನ್ನು ನೀಡಿದ್ದಾರೆ. ಸರ್ಕಾರಿ ಶಾಲೆಯೊಂದು ತನಗೆ ಸಿಗುವ ಅತ್ಯಲ್ಪ ಸಂಪನ್ಮುಲಗಳೊಂದಿಗೆ ಉತ್ತಮವಾಗಿ ಸಾಗುತ್ತಿದೆ ಎಂದರು. ಈಗ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಿರುವುದು ಇನ್ನು ಪ್ರೋತ್ಸಾಹ ಸಿಕ್ಕಿದಂತಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ವಿನಯಕುಮಾರಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಉತ್ತಮವಾಗಿದೆ. ಮಕ್ಕಳ ಪ್ರತಿಭೆಗಳನ್ನು ಅನಾವರಣ ಮಾಡಲು ಇಂತಹ ವೇದಿಕೆ ಸ್ಫೂರ್ತಿ ಸಿಗಲಿದೆ. ಪೋಷಕರು ಕೂಡ ಭಾಗವಹಿಸಿ ಸಹಕರಿಸಿದ್ದಾರೆ ಎಂದರು. ಈ ಮಕ್ಕಳ ನೋಡಿದರೇ ಕೃಷ್ಣ ರಾಧೆಯರೆ ಎದುರು ಬಂದಂತೆ ಕಾಣಿಸುತ್ತಿದೆ. ಇಂತಹ ಕಾರ್ಯಕ್ರಮಗಳು ಒಳ್ಳೆಯ ವಾತಾವರಣ ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಸತೀಶ್, ಸಹ ಶಿಕ್ಷಕರಾದ ಎಚ್.ಎಂ. ಗೀತಾ, ಎಲ್. ರುಕ್ಮಿಣಿ, ಗಿರಿಜಮ್ಮ, ಭಾರತಿ, ರಕ್ಷಾ, ಅನುಪಮ, ಶೋಭಾ, ಪೂಜಾ, ಮಧುರ ಸೇರಿದಂತೆ ಇತರರು ಉಪಸ್ಥಿತರಿದ್ದರು.