ನೀರಾವರಿ ಇಲಾಖೆ ಹುದ್ದೆ ಗೋಲ್ಮಾಲ್‌ ಬಯಲಿಗೆಳೆದಿದ್ದ ''''ಕನ್ನಡಪ್ರಭ''''

| Published : Sep 01 2024, 01:48 AM IST

ನೀರಾವರಿ ಇಲಾಖೆ ಹುದ್ದೆ ಗೋಲ್ಮಾಲ್‌ ಬಯಲಿಗೆಳೆದಿದ್ದ ''''ಕನ್ನಡಪ್ರಭ''''
Share this Article
  • FB
  • TW
  • Linkdin
  • Email

ಸಾರಾಂಶ

"Kannadaprabha " who had revealed the post of Irrigation Department in Golmal.

- 10-12 ಲಕ್ಷ ರು. ಲಂಚ ಆರೋಪ । ಕೇಂದ್ರ ಕಚೇರಿಯಿಂದಲೇ ಅಭ್ಯರ್ಥಿಗಳಿಗೆ ಕರೆ? । ಅಣ್ಣ, ಅಪ್ಪ, ಅಮ್ಮ ಹೆಸರಿನಿಂದ ಬಂದಿದ್ದ ಅರ್ಜಿ

-------

ಕನ್ನಡಪ್ರಭ ವಾರ್ತೆ ಯಾದಗಿರಿ

545 ಹುದ್ದೆಗಳ ಪಿಎಸ್ಐ ನೇಮಕಾತಿ ಹಗರಣ ಬಯಲಿಗೆಳೆದಿದ್ದ "ಕನ್ನಡಪ್ರಭ " ಇದೀಗ ನೀರಾವರಿ ಇಲಾಖೆಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕದಲ್ಲೂ ನಡೆದಿದ್ದ ಭಾರಿ ಗೋಲ್ಮಾಲ್‌ ಬಯಲಿಗೆಳೆದಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋವಿಂದ ಕಾರಜೋಳ ಅವರು ಜಲಸಂಪನ್ಮೂಲ ಇಲಾಖೆ ಸಚಿವರಾಗಿದ್ದ ವೇಳೆ ನಡೆದಿದ್ದ ಈ ನೇಮಕಾತಿಗಳಲ್ಲಿ ಭಾರಿ ಅವ್ಯವಹಾರದ ವಾಸನೆ ಮೂಡಿ ಬಂದಿತ್ತು. ನಕಲಿ ಅಂಕಪಟ್ಟಿ ಹಾಗೂ ದಾಖಲೆಗಳನ್ನು ನೀಡಿ ಅನರ್ಹ ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ, "ಕನ್ನಡಪ್ರಭ "ದಲ್ಲಿ ಈ ವರದಿಗಳು ಸಂಚಲನ ಮೂಡಿಸಿದ್ದವು.

ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಲು ಒಬ್ಬೊಬ್ಬರಿಂದ 10-12 ಲಕ್ಷ ರು. ಹಣದ ಅವ್ಯವಹಾರ ನಡೆದಿದ್ದು, ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಕುರಿತು ದಾಖಲೆಗಳ ಸಮೇತ "ಕನ್ನಡಪ್ರಭ " ಡಿ.18, 2022 ರಿಂದ ಸರಣಿ ವರದಿಗಳ ಪ್ರಕಟಿಸಿತ್ತು.

ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಬೀದರ್‌, ಕೊಪ್ಪಳ ಮುಂತಾದೆಡೆ ಅಭ್ಯರ್ಥಿಗಳ ಪೈಕಿ ಕೆಲವರು ನಕಲಿ ದಾಖಲೆಗಳ ಮೂಲಕ ಆಯ್ಕೆಯಾಗುವ ಪ್ರಯತ್ನ ನಡೆಸಿದ್ದು, ಇದಕ್ಕೆ ಇಲಾಖೆಯಲ್ಲೇ ಮಧ್ಯವರ್ತಿಗಳು ಇದ್ದಾರೆ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬಂದಿದ್ದವು.

ಆಗ, ವಿರೋಧ ಪಕ್ಷದಲ್ಲಿದ್ದ, ಹಾಲಿ ಸಚಿವ ಪ್ರಿಯಾಂಕ ಖರ್ಗೆ ಈ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟಿಸಿ, ಟೀಕಿಸಿದ್ದರು. ನೊಂದ ಅಭ್ಯರ್ಥಿಗಳು ರಾಜ್ಯಪಾಲರು ಸೇರಿದಂತೆ, ಸಿಎಂ ಆದಿಯಾಗಿ ಎಲ್ಲರಿಗೂ "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡ ವರದಿಗಳು ಸೇರಿದಂತೆ ಇನ್ನಿತರ ದಾಖಲೆಗಳ ಸಮೇತ ದೂರು ನೀಡಿದ್ದರು. ಲೋಕಾಯುಕ್ತದಲ್ಲೂ ಈ ಕುರಿತು ದೂರು ದಾಖಲಿಸಲಾಗಿತ್ತಾದರೂ, ನಂತರ ಮುಕ್ತಾಯಗೊಳಿಸಲಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೂ ದೂರು ನೀಡಿದ್ದ ನೊಂದ ಅಭ್ಯರ್ಥಿಗಳು ತನಿಖೆಗೆ ಆಗ್ರಹಿಸಿದ್ದರು. ಆದರೆ, ತನಿಖೆಗೆ ಆಸಕ್ತಿ ತೋರದ ನೀರಾವರಿ ಇಲಾಖೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳಲೆತ್ನಿಸಿದರಲ್ಲದೆ, ಇದೇ ಜೂ.27 ರಂದು ಅಂತಿಮ ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದರು. ಯಾವಾಗ ಹಗರಣದ ವಾಸನೆ ಹೆಚ್ಚಾಯಿತೋ, ಆಗ ತನಿಖೆಗೆ ವಹಿಸಿದಾಗ, ಈಗ 48 ಜನರ ಬಂಧನದೊಂದಿಗೆ ಆರಂಭವಾಗಿದೆ.

ಈಗೇನಾಗಿದೆ?: ಜಲಸಂಪನ್ಮೂಲ ಇಲಾಖೆಯ "ಸಿ " ವೃಂದದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ವೇಳೆ ನಕಲಿ ದಾಖಲೆಗಳ ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಯತ್ನಿಸಿದ ಆರೋಪದಡಿ, ಬೆಂಗಳೂರಿನಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ವಿಶೇಷ ವಿಚಾರಣ ದಳದ ಅಧಿಕಾರಿಗಳು ಮೂವರು ಸರ್ಕಾರಿ ನೌಕರರು, 11 ಜನ ಮಧ್ಯವರ್ತಿಗಳು ಹಾಗೂ 37 ಅನರ್ಹ ಅಭ್ಯರ್ಥಿಗಳು ಸೇರಿದಂತೆ ಒಟ್ಟು 48 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

.....ಬಾಕ್ಸ್....

ಏನಿದು ನೀರಾವರಿ ನೇಮಕಾತಿ ಹಗರಣ?

ರಾಜ್ಯ ಜಲಸಂಪನ್ಮೂಲ ಇಲಾಖೆಯು 2022 ರ ಸೆಪ್ಟೆಂಬರಿನಲ್ಲಿ ಗ್ರೂಪ್-ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆಂದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿತ್ತು. ಒಟ್ಟು 182 ಎಸ್ಡಿಸಿ ಬ್ಯಾಕ್‌ಲಾಗ್ ಹುದ್ದೆಗಳಿಗೆ 1.12 ಲಕ್ಷ ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಅರ್ಜಿಗಳ ಪೈಕಿ 1:2 ರ ಪರಿಶೀಲನಾ ಅರ್ಹತಾ ಪಟ್ಟಿಯನ್ನು ಡಿ.5, 2022 ರಂದು ಬಿಡುಗಡೆಗೊಳಿಸಿ, 364 ಜನರ ಅಭ್ಯರ್ಥಿಗಳ ಹೆಸರುಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿತ್ತು.

ಬಹುತೇಕ ನಕಲಿ ದಾಖಲೆ/ಅಂಕಪಟ್ಟಿ ನೀಡಿದವರನ್ನೇ ಪರಿಗಣಿಸಲಾಗಿದೆ ಎಂಬ ಆರೋಪಗಳು ನೊಂದ ಅಭ್ಯರ್ಥಿಗಳ ವಲಯದಲ್ಲಿ ಕೇಳಿ ಬಂದಿದ್ದವು. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾಗಿರುವ ಈ ಬ್ಯಾಕ್ ಲಾಗ್ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಶೀಲನಾ ಅರ್ಹತಾ ಪಟ್ಟಿಯಲ್ಲಿ ಮುಸ್ಲಿಂ, ವೀರಶೈವ ಲಿಂಗಾಯತ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳ ಹೆಸರುಗಳು ಕಂಡು ಬಂದಿದ್ದವು.

ಪರಿಶೀಲನಾ ಅರ್ಹತಾ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡ ಭಾಗಶಃ ಅಭ್ಯರ್ಥಿಗಳ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅಂಕಗಳು ಅನುಮಾನ ಮೂಡಿಸಿದ್ದವು. ಉದಾಹರಣೆಗೆ, ಶೇ.100ಕ್ಕೆ ನೂರರಷ್ಟು ಅಂಕ ಪಡೆದ ಅಭ್ಯರ್ಥಿಗಳ ಅರ್ಜಿ ಪರಿಶೀಲಿಸಿದಾಗ, ಪಿಯುಸಿಯಲ್ಲಿ ಒಟ್ಟು 600 ಅಂಕಗಳಿದ್ದಾಗ್ಯೂ ಕೂಡ, ತಾವು ಪಡೆದ ಅಂಕಗಳಷ್ಟೇ ಒಟ್ಟು ಅಂಕಗಳು ಎಂದು ನಮೂದಿಸಿ, ಶೇ.100 ರಷ್ಟು ಅಂಕಗಳ ಪಡೆದಿರುವ ಬಗ್ಗೆ ನಮೂದಿಸಿರುವುದು. ಉದಾಹರಣೆಗೆ, ಅಂದರೆ, 60 ಅಂಕಗಳ ಪಡೆದ ಅಭ್ಯರ್ಥಿ ಅಷ್ಟೇ ಒಟ್ಟು ಅಂಕಗಳು ಎಂದು ನಮೂದಿಸಿದ್ದ. ಇಂತಹ ಅನೇಕ ಪ್ರಮಾದಗಳು ಅಲ್ಲಿದ್ದವು.

ಒಬ್ಬನೇ ಅಭ್ಯರ್ಥಿಯ ಹೆಸರು ಎರಡೆರಡು ಹಾಗೂ ಮೂರು ಬಾರಿ ಪ್ರಕಟಗೊಂಡಿದ್ದವು. ಇದರಿಂದ ಸುಮಾರು 40ಕ್ಕೂ ಹೆಚ್ಚು ಅಭ್ಯರ್ಥಿಗಳು ಅವಕಾಶ ವಂಚಿತಗೊಂಡಿದ್ದರು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಯೊಬ್ಬ ತನ್ನ ಹೆಸರನ್ನು ''''''''ಅಣ್ಣ'''''''' ಎಂದು, ತಂದೆಯ ಹೆಸರು ''''''''ಅಪ್ಪ'''''''' ಹಾಗೂ ತಾಯಿ ಹೆಸರಿನ ಮುಂದೆ ''''''''ಅಮ್ಮ'''''''' ಎಂದು ನಮೂದಿಸಿ, ಓಕೆಓಕೆ @ಜಿಮೇಲ್‌.ಕಾಮ್ ವಿಳಾಸ ನಮೂದಿದ್ದಾರೆ. ಇಂತಹ ಅರ್ಜಿಗಳನ್ನು ಯಾವ ಮಾನದಂಡದ ಮೇಲೆ ಪರಿಶೀಲನಾ ಅರ್ಹತಾ ಪಟ್ಟಿಗೆ ಸೇರ್ಪಡೆ ಮಾಡಿದ್ದರು ಅನ್ನೋದು ಬಾರಿ ಶಂಕೆ ಮೂಡಿಸಿತ್ತು.

----

31ವೈಡಿಆರ್‌15 : ಡಿ.18, 2022 ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿ.

31ವೈಡಿಆರ್‌16 : ಅಣ್ಣ, ಅಪ್ಪ, ಅಮ್ಮ ಎಂಬ ಹೆಸರಿನ ವಿಚಿತ್ರಗಳಿಂದ ಕೂಡಿದ್ದ ಅರ್ಜಿ.