ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕಾರ್ಮಿಕರ ಬೆವರಿನ ಶರ್ಮ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಹೇಳಿದರು.ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ವತಿಯಿಂದ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಮೂವರು ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ಕಾರ್ಮಿಕರ ಬದುಕು ಹಸನಾಗಬೇಕೆಂಬ ಹಂಬಲಿಸಿಂದ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಕಾರ್ಮಿಕ ವಲಯಕ್ಕೆ ಸಂವಿಧಾನದಲ್ಲಿ ವಿಶೇಷ ಅವಕಾಶ ಹಾಗೂ ಭದ್ರತೆಯನ್ನು ಒದಗಿಸಿಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ನಂತರದ ಮೊದಲ ಕಾರ್ಮಿಕ ಸಚಿವರಾದ ಬಾಬು ಜಗಜೀವನ್ ರಾಮ್ ಅವರ ದೂರದೃಷ್ಟಿ ಕಾರ್ಮಿಕರು ಬದುಕಿ ಕಟ್ಟಿಕೊಳ್ಳಲು ನೆರವಾಗಿದೆ ಎಂದು ಅಭಿಪ್ರಾಯಪಟ್ಟರು. ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ್ ವಿ. ಬೈರಿ ಮಾತನಾಡಿ, ಕಾರ್ಮಿಕ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ದುಡಿಯುವ ವರ್ಗಕ್ಕೆ ಆರೋಗ್ಯ ಸೌಲಭ್ಯಗಳು, ವಿಮೆ ಹಾಗೂ ಕಾರ್ಮಿಕರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿಶೇಷ ನೆರವು ನೀಡಲಾಗುತ್ತಿದೆ ಎಂದರು.ಅಲೆಯನ್ಸ್ ಕ್ಲಬ್ ಆಫ್ ಮೈಸೂರ್ ನಾಲ್ವಡಿ ವತಿಯಿಂದ ದೇವೇಂದ್ರ, ಸುಂದರ್ ಹಾಗೂ ಸಲೀಂ ಮೂವರು ವಿವಿಧ ಕ್ಷೇತ್ರದ ಕಾರ್ಮಿಕರನ್ನು ಬೆಟ್ಟೇಗೌಡರು ಗುರುತಿಸಿ ಸನ್ಮಾನಿಸಿರುವುದು ನಿಜಕ್ಕೂ ನನಗೆ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಕಾರ್ಮಿಕರ ಸೇವೆಗೆ ಸಮಾನಾಂತರವಾದ ದುಡಿಮೆಗೆ ತಕ್ಕ ಗಳಿಕೆ ಸಿಗುತ್ತಿಲ್ಲ. ವೇತನದಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ, ಇದನ್ನು ತಡೆಗಟ್ಟಿ ಎಲ್ಲ ನೌಕರರನ್ನು ಸಮಾನರಾಗಿ ಕಾಣುವ ದೃಷ್ಟಿ ಬೆಳೆಸಿಕೊಳ್ಳಬೇಕು ಎಂದರು.ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಅಧ್ಯಕ್ಷ ಎನ್. ಬೆಟ್ಟೇಗೌಡ ಮಾತನಾಡಿ, ಕಾರ್ಮಿಕರ ಶ್ರಮವಿಲ್ಲದೆ ಯಾವ ಕೆಲಸವೂ ಕೂಡ ನಡೆಯುವುದಿಲ್ಲ. ಕಾರ್ಮಿಕರು ಇಲ್ಲದೆ ಯಾವ ಕಾರ್ಖಾನೆಯೂ ಇಲ್ಲ, ಕಚೇರಿಗಳು ಕೂಡ ಇಲ್ಲ. ಎಲ್ಲ ವರ್ಗದ ಕಾರ್ಮಿಕರನ್ನು ಸರಿ ಸಮಾನವಾಗಿ ಕಾಣುವಂತೆ ಕರೆ ನೀಡಿದರು.ಅಲಿಯನ್ಸ್ ಕ್ಲಬ್ ಆಫ್ ಇಂಟರ್ ನ್ಯಾಷನಲ್ ಜಿಲ್ಲೆ 255ರ ಎರಡನೇ ಉಪರಾಜ್ಯಪಾಲ ಸಂತೋಷ್ ಕುಮಾರ್, ಜಿಲ್ಲೆ 255ರ ಸಂಪುಟ ಕೋಶಾಧ್ಯಕ್ಷರಾದ ಕೃಷ್ಣಾಜಿರಾವ್ ಹಾಗೂ ವಿಕ್ರಂ ಅಯ್ಯಂಗಾರ್ ಇದ್ದರು.