ಸಾರಾಂಶ
ಗದಗ: ಕಾವ್ಯದ ಮುಖ್ಯ ನೆಲೆಯೆಂದರೆ ಅದು ಮನುಷ್ಯನ ಬದುಕು. ಈ ಬದುಕಿನ ಕಾವ್ಯಕ್ಕೆ ಕನಿಕರದ ಕರುಳಿರುತ್ತದೆ. ಮನುಷ್ಯತ್ವದ ಬೇರಿರುತ್ತದೆ ಎಂದು ಸಾಹಿತಿ ಡಿ. ರಾಮಣ್ಣ ಅಲ್ಮರ್ಸಿಕೇರಿ ಹೇಳಿದರು.
ನಗರದ ತೋಂಟದ ಸಿದ್ದಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಫಕೀರಮ್ಮ ಚಿಗಟೇರಿ (ರಮಾ ಬಸು) ಹೆಪ್ಪುಗಟ್ಟಿದ ಕಣ್ಣೀರು ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಪರಿಚಯ ಮಾಡಿ ಅವರು ಮಾತನಾಡಿದರು. ಅಂತಹ ಕರುಳ ಧ್ವನಿಯ ಜಾಡು ಹಿಡಿದು ಕಲ್ಲೆದೆ ಕರಗಿಸಿ ಮುನ್ನಡೆದ ಕವಿಯಿತ್ರಿ ಫಕ್ಕೀರಮ್ಮ ಚಿಗಟೇರಿ ಅವರ ಕವನ ಸಂಕಲನ ಹೆಪ್ಪುಗಟ್ಟಿದ ಕಣ್ಣೀರು ನೆಲದ ಸೊಗಡಿನೊಂದಿಗೆ ಬೆರೆತದ್ದಾಗಿದೆ ಎಂದು ಹೇಳಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿ.ಬಿ.ಬಿಡನಾಳ ಮಾತನಾಡಿ, ಕಾವ್ಯಕನ್ನಿಕೆಯೆಡೆಗಿನ ಅನಂತ ಪ್ರೇಮದಿಂದ ಕಾವ್ಯ ಕೃಷಿಗೆ ತೊಡಗಿರುವ ಕವಿಯಿತ್ರಿ ಸತ್ವಯುತ ಕವಿತೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕದ ಸತ್ಯ ನೇರವಾಗಿ ಪ್ರಶ್ನಿಸುವ ಎದೆಗಾರಿಕೆ ಅವರಿಗಿದೆ. ಸಾಮಾಜಿಕ ಕಳಕಳಿ ಜೀವ ಪರ ನಿಲುವುಗಳಿಂದ ಕೂಡಿದ ಇವರ ಕವಿತೆಗಳು ಓದುಗರ ಜತೆ ಮಾತಿಗಿಳಿಯುತ್ತವೆ. ತಾಯಿಯ ಬಗೆಗೆ ಮಾರ್ಮಿಕವಾಗಿ ಕವನ ಹೆಣೆದಿದ್ದಾರೆ ಎಂದರು.
ಸಾಹಿತಿ ಶ್ರೀಶೈಲ ಹುಲ್ಲೂರ ಮಾತನಾಡಿ, ಸಾಮಾಜಿಕವಾಗಿ ಮಹಿಳೆಯ ಬಗೆಗಿರುವ ಧೋರಣೆ ಮೃದುವಾಗಿ ಕುಟುಕಿ ಪುರುಷನ ತಾತ್ಸಾರ ಒಲವಿನಿಂದಲೇ ನೇರವಾಗಿಸುವಾಗಿನ ಕವನದ ಸಾಲುಗಳು ನಾ ಬಿಳಿ ಹಾಳೆ, ನೀ ಕಪ್ಪುಇಂಕು ಎರಡು ಸೇರಿದಾಗಲೇ ತಾನೇ ನನ್ನ ಕವಿತೆ. ಬದುಕಿನಲ್ಲಿ ಬರುವ ನೋವುಗಳ ಮನುಷ್ಯನನ್ನು ಎಷ್ಟು ಜರ್ಜರಿತಗೊಳಿಸುತ್ತವೆ. ಹಲುಬಿದ ಜೀವದೊಳಗೇ ಇಳಿವ ಫಕ್ಕೀರಮ್ಮ ಚಿಗಟೇರಿ ಅವರು ಹನಿಹನಿಯಾಗಿ ತೊಟ್ಟಿಕ್ಕುತ್ತಾರೆ. ಆರ್ದ್ರಭಾವದ ಒಡಲಾಳದಿಂದ ಹರಿದ ಸಾಲುಗಳು ಬಯಲಲ್ಲಿನ ಹಾಡು ನಮ್ಮ ಎದೆಯನ್ನು ತೋಯಿಸುತ್ತದೆ. ಒಮ್ಮೊಮ್ಮೆ ಕಣ್ಣೀರ ತುಂಬಿಕೊಂಡ ಕಾರ್ಮೋಡ ಮಳೆಯಾಗಿ ಇಳಿದು ಜಾರಿ ಹೋಗುವುದು ಇಳೆಯ ಒಡಲೊಳಗೆ ಎಂದಿದ್ದಾರೆ ಎಂದು ಹೇಳಿದರು.ಕವಿ ಎ.ಎಸ್. ಮಕಾನದಾರ ಮಾತನಾಡಿ, ಕಾವ್ಯವೆಂದರೆ ವೇದ ಬೋಧಗಳ ನ್ಯಾಸ ಉಪನ್ಯಾಸವಲ್ಲ, ವಾಚನ ಪ್ರಚನಗಳ ಯೋಚನೆಯೂ ಅಲ್ಲ, ಕವಿಯಂತರಂಗದ ಸಂವಾದವಾಗಿದೆ. ನಿಶ್ಚಲ ಮನದಿಂದ ಆಸ್ವಾದಿಸುವ ಸ್ವಾದವಾಗಿದೆ. ಚಿಗಟೇರಿ ಅವರ ಕವನಗಳಲ್ಲಿ ನಾಗರಪಂಚಮಿ ದೀಪಾವಳಿ ಮುಂತಾದ ಕವನಗಳು ಜನಪದೀಯ ಸೊಗಡನ್ನು ನುಡಿಚಿತ್ರವಾಗಿಸಿವೆ ಎಂದರು.
ಈ ವೇಳೆ ವಿವೇಕಾನಂದಗೌಡ ಪಾಟೀಲ, ಸಂಜೀವ ಧುಮಕನಾಳ, ನೇತ್ರಾ ರುದ್ರಾಪುರಮಠ, ಫಕೀರಮ್ಮ ಚಿಗಟೇರಿ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪೂರಿ, ವಿ.ಎಸ್. ಗುಜಮಾಗಡಿ, ಸಿ. ಬಸಪ್ಪ ಸೊಂಡೂರ, ಪ್ರೊ.ಕೆ.ಎಚ್. ಬೇಲೂರ, ಎಚ್.ಟಿ. ಸಂಜೀವಸ್ವಾಮಿ, ಅನ್ನದಾನಿ ಹಿರೇಮಠ, ಆರ್.ಡಿ. ಕಪ್ಪಲಿ, ಪ್ರಾ. ಪಾಟೀಲ, ಸಿದ್ದಲಿಂಗೇಶ ಸಜ್ಜನಶೆಟ್ಟರ, ಪ್ರ.ತೋ. ನಾರಾಯಣಪುರ, ಡಾ. ರಾಜೇಂದ್ರ ಗಡಾದ, ಎಂ.ಇ. ದೊಡ್ಡಮನಿ, ಬಿ.ಎಸ್. ಹಿಂಡಿ, ತಿಪ್ಪಾನಾಯ್ಕ. ಎಸ್., ಬಿ.ಎಸ್. ಬಣಕಾರ, ಸಿ.ಎಂ. ಮಾರನಬಸರಿ, ಸಂಗಮೇಶ ಶಿವಪ್ಪನವರ, ಡಾ. ಶಂಕರ ಬಾರಿಕೇರ, ಕಲ್ಲಯು ಹಿರೇಮಠ, ಕನಕಪ್ಪ ಧೂಳಪ್ಪನವರ, ವಿಶ್ವನಾಥ ಗುಳಬಾಳ ಇದ್ದರು.ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ಗಿಡ್ನಂದಿ ವಂದಿಸಿದರು.