ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಇದು ದ.ಕ. ಜಿಲ್ಲೆಯ ಪ್ರಥಮ ಬಹುಗ್ರಾಮ ಕುಡಿಯುವ ನೀರಿನ ಯೋಜನೆ. ಈ ಯೋಜನೆಯ ಅಣೆಕಟ್ಟಿಗೆ ಮಲ-ಮೂತ್ರ ಮಿಶ್ರಿತ ಒಳಚರಂಡಿ ನೀರು ಸೇರುತ್ತಿರುವುದರಿಂದ ಮಹತ್ವಾಕಾಂಕ್ಷೆಯ ಯೋಜನೆ ಜನರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಸುಮಾರು 11 ಗ್ರಾಮಗಳ ಜನತೆ ಕೊಳಚೆ ವಿಷಯುಕ್ತ ನೀರು ಸೇವಿಸುವಂತಾಗಿದೆ!ಕೊಳಚೆ ನೀರು ಹೋಗುತ್ತಿರುವುದು ಮರವೂರಿನಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ ಅಣೆಕಟ್ಟಿಗೆ. ಇದರ ಬಗ್ಗೆ ಕೆಲ ವರ್ಷಗಳ ಹಿಂದೆಯೇ ‘ಕನ್ನಡಪ್ರಭ’ ಸವಿಸ್ತಾರವಾಗಿ ವರದಿ ಪ್ರಕಟಿಸಿತ್ತು. ಕೆಲ ಸಮಯ ನಿಂತಿದ್ದ ಕೊಳಚೆ ನೀರು ಮತ್ತೆ ಡ್ಯಾಂಗೆ ಹರಿಯಲು ಆರಂಭವಾಗಿದೆ. ಎಚ್ಚೆತ್ತ ಜನರು ಹೋರಾಟಕ್ಕೆ ಮುಂದಾಗಿದ್ದಾರೆ.
ಎಲ್ಲಿಂದ ಈ ಸಮಸ್ಯೆ?: ಮಂಗಳೂರು ಮಹಾನಗರ ಪಾಲಿಕೆ ವ್ಯಪ್ತಿಯಲ್ಲಿ ಕುಡ್ಸೆಂಪ್ ಯೋಜನೆಯಡಿ ಒಳಚರಂಡಿಯ ಮಲ ತ್ಯಾಜ್ಯ ನೀರು ಸಂಸ್ಕರಣೆಗಾಗಿ ನಗರದ ಹೊರಭಾಗದ ಮೂಡುಶೆಡ್ಡೆಯ ಮಂಜಲ್‌ಪಾದೆ ಪರಿಸರದಲ್ಲಿ ಘಟಕ ನಿರ್ಮಿಸಲಾಗಿದೆ. ಈ ಹಿಂದೆ ಈ ಭಾಗದಲ್ಲಿರುವ ವೆಟ್‌ವೆಲ್‌ನಿಂದ ಕೊಳಚೆ ನೀರನ್ನ ಸಂಸ್ಕರಿಸದೆ ನೇರವಾಗಿ ಸ್ಥಳೀಯ ಹಳ್ಳಗಳಿಗೆ ಬಿಡುವ ಬಗ್ಗೆ ಹೋರಾಟ ನಡೆದು ಇದಕ್ಕೆ ಸೂಕ್ತ ಪರಿಹಾರವನ್ನು ಗ್ರಾಮಸ್ಥರು ಕಂಡುಕೊಂಡಿದ್ದರು. ಇದೀಗ ಮತ್ತೊಂದು ವೆಟ್‌ವೆಲ್‌ನಿಂದ ಮಲ ತ್ಯಾಜ್ಯ ಕೊಳಚೆ ನೀರನ್ನು ನೇರವಾಗಿ ಸ್ಥಳೀಯ ಹಳ್ಳಕ್ಕೆ ಬಿಡಲಾಗುತ್ತಿದೆ. ಹಳ್ಳದ ಈ ನೀರು ನೇರವಾಗಿ ಬಹುಗ್ರಾಮ ಯೋಜನೆಯ ಮರವೂರು ಡ್ಯಾಂ ಸೇರುತ್ತಿದೆ. ಈ ನೀರು ಬಳಸಿದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿ ಉಮೇಶ್ ಆರೋಪಿಸಿದ್ದಾರೆ.ಜಾನುವಾರುಗಳ ಪ್ರಾಣಕ್ಕೆ ಕಂಟಕ:ಇಲ್ಲಿರುವ ವೆಟ್‌ವೆಲ್ 9 ರೇಚಕ ಸ್ಥಾವರದ ನಿರ್ವಹಣೆ ಕೊರತೆಯಿಂದ ಸ್ಥಾವರಕ್ಕೆ ಬರುವ ಕೊಳಚೆ ನೀರನ್ನು ಸಂಸ್ಕರಣೆ ಮಾಡಲು ಆಗದೆ ನೇರವಾಗಿ ಹಳ್ಳಕ್ಕೆ ಬಿಡಲಾಗುತ್ತಿದೆ. ಅಧಿಕಾರಿಗಳು ಗುತ್ತಿಗೆದಾರರು ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತಿದ್ದಾರೆ. ದನ ಕರುಗಳು ಕಲುಷಿತ ನೀರು ಸೇವಿಸಿ ಸಾವನಪ್ಪುತ್ತಿವೆ. ಜನರು ರೋಗ ಪೀಡಿತರಾಗುವ ಭೀತಿಯಲ್ಲಿದ್ದಾರೆ. ಇಲಾಖೆ ಈ ಬಗ್ಗೆ ಕ್ರಮ ವಹಿಸದಿದ್ದಾರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ಮುಖಂಡ ಜಯಂತ್ ಎಸ್. ಎಚ್ಚರಿಕೆ ನೀಡಿದ್ದಾರೆ.................
ಊರಿಗೆ ಶಾಪವಾದ ಮರವೂರು ಡ್ಯಾಂ!ಮರವೂರು ಕಿಂಡಿ ಅಣೆಕಟ್ಟು ಇಲ್ಲಿನ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ನೀರಿಗೆ ತ್ಯಾಜ್ಯ ನೀರು ಸೇರುವ ಸಮಸ್ಯೆ ಒಂದೆಡೆಯಾದರೆ, ಈ ಅಣೆಕಟ್ಟಿನ ಅವೈಜ್ಞಾನಿಕ ನಿರ್ಮಾಣದಿಂದ ಮಳೆಗಾಲದಲ್ಲಿ ಅದ್ಯಪಾಡಿಯ ಊರಿಗೂರೇ ಮುಳುಗಡೆಯಾಗುತ್ತಿದೆ. ಒಂದು ಕಾಲದಲ್ಲಿ ಸಮೃದ್ಧ ಕೃಷಿಯಿಂದ ಕಂಗೊಳಿಸುತ್ತಿದ್ದ ಡ್ಯಾಂ ಪಕ್ಕದ ಈ ಗ್ರಾಮದಲ್ಲಿ ವಾಸಿಸಲು ಜನರು ಹಿಂಜರಿಯುತ್ತಿದ್ದಾರೆ. ಮಳೆಗಾಲದಲ್ಲಿ ಡ್ಯಾಂನಿಂದ ಪ್ರವಾಹ ನೀರು ಸುಲಲಿತವಾಗಿ ಹೊರಹರಿಯದೆ ನೂರಾರು ಎಕರೆ ಜಾಗ ದಿನಗಟ್ಟಲೆ ಮುಳುಗಡೆಯಾಗುತ್ತಿದೆ. ಕೃಷಿ, ಜನ- ಜಾನುವಾರು ಜೀವನ ಕಡುಕಷ್ಟವಾಗಿದೆ. ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೆ ದೂರು ನೀಡಿದರೂ ಈ ಅವೈಜ್ಞಾನಿಕ ಡ್ಯಾಂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.
;Resize=(128,128))
;Resize=(128,128))
;Resize=(128,128))
;Resize=(128,128))