ಕಲಾವಿದ ನಾಗರಾಜ ಕುಂಚದಲ್ಲಿ ಅರಳಿದ ಸಂಡೂರಿನ ನಿಸರ್ಗ ಸೌಂದರ್ಯ

| Published : Sep 04 2024, 01:49 AM IST

ಸಾರಾಂಶ

ಸಂಡೂರಿನ ಅರಣ್ಯ ಇಲಾಖೆ ಕಾಂಪೌಂಡ್‌ ಮೇಲೆ ಚಿತ್ರದುರ್ಗದ ಚಿತ್ರ ಕಲಾವಿದರಾದ ನಾಗರಾಜ್ ಅವರ ಕುಂಚದಲ್ಲಿ ಅರಳಿದ ಸಂಡೂರಿನ ನಿಸರ್ಗ ಸೌಂದರ್ಯ, ಪ್ರಾಣಿ ಪಕ್ಷಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಇಲ್ಲಿ ಅವರು ನಾರಿಹಳ್ಳ ಜಲಾಶಯ, ಪ್ರಾಣಿಗಳು, ಭೀಮಗಂಡಿ ರೈಲ್ವೆ ಸುರಂಗ ಚಿತ್ರಿಸಿದ್ದಾರೆ.

ವಿ.ಎಂ. ನಾಗಭೂಷಣ

ಸಂಡೂರು: ಚಿತ್ರದುರ್ಗದ ಚಿತ್ರ ಕಲಾವಿದರಾದ ನಾಗರಾಜ್ ಅವರ ಕುಂಚದಲ್ಲಿ ಅರಳಿದ ಸಂಡೂರಿನ ನಿಸರ್ಗ ಸೌಂದರ್ಯ, ಪ್ರಾಣಿ ಪಕ್ಷಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಚಿತ್ರ ಕಲಾವಿದ, ಛಾಯಾಚಿತ್ರಗ್ರಾಹಕ ಹಾಗೂ ಚಾರಣದಲ್ಲಿ ಆಸಕ್ತಿ ಹೊಂದಿರುವ ನಾಗು ಆರ್ಟ್ಸ್ ಎಂಬ ಹೆಸರಿನಡಿ ರಾಜ್ಯದ ಉತ್ತರದ ಬೆಳಗಾವಿಯ ಭೀಮಘಡದಿಂದ ದಕ್ಷಿಣ ತುದಿಯಲ್ಲಿರುವ ಕೊಳ್ಳೆಗಾಲದ ಗೋಪಿನಾಥಂ ವರೆಗಿನ ಅರಣ್ಯ ಇಲಾಖೆಗೆ ಸಂಬಂಧಿಸಿದ ಬೋರ್ಡ್‌ಗಳಲ್ಲಿ, ಗೋಡೆಗಳಲ್ಲಿ ವನ್ಯಜೀವಿಗಳು, ಅಲ್ಲಿನ ನಿಸರ್ಗ ಸೌಂದರ್ಯವನ್ನು ಚಿತ್ರಿಸುವ ನಾಗರಾಜ್ ಅವರು ಇತ್ತೀಚೆಗೆ ಸಂಡೂರಿಗೆ ಆಗಮಿಸಿ, ಇಲ್ಲಿನ ಅರಣ್ಯ ಇಲಾಖೆಯ ಗೋಡೆಯ ಮೇಲೂ ಇಲ್ಲಿನ ನಿಸರ್ಗ ಸೌಂದರ್ಯದ ಚಿತ್ರಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ.

ಅವುಗಳಲ್ಲಿ ಪ್ರಮುಖವಾಗಿ ಸಂಡೂರು ಎಂದಾಕ್ಷಣ ಎಲ್ಲರ ಸ್ಮೃತಿಪಟಲದಲ್ಲಿ ಮೂಡಿಬರುವ ನಾರಿಹಳ್ಳ ಜಲಾಶಯದ ಸುಂದರ ಚಿತ್ರಣ, ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುವ ನವಿಲು, ಚಿರತೆ, ಕರಡಿಗಳು, ಕೊಂಡಗುರಿ, ಮರಕುಟಿಗ ಹಕ್ಕಿ, ಭೀಮಗಂಡಿ ರೈಲ್ವೆ ಸುರಂಗ ಮುಂತಾದವು ಪ್ರಮುಖವಾಗಿದ್ದು, ಇವು ನೋಡುಗರಿಗೆ ಸಂಡೂರಿನ ನಿಸರ್ಗ ಸೌಂದರ್ಯದ ಚಿತ್ರಣವನ್ನು ಕಟ್ಟಿಕೊಡುತ್ತಿವೆ.

ತಮ್ಮ ಚಿತ್ರಕಲೆಯ ಕುರಿತು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಚಿತ್ರಕಲಾವಿದ ನಾಗರಾಜ್, ನನಗೆ ಪ್ರಕೃತಿಯೇ ಪ್ರೇರಣೆ ಹಾಗೂ ಗುರು. ಬಾಲ್ಯದಿಂದ ಬೆಳೆಸಿಕೊಂಡು ಬಂದ ಚಿತ್ರಕಲೆಯ ಬಗೆಗಿನ ಆಸಕ್ತಿ, ಇಂದು ನಾಡಿನ ವಿವಿಧೆಡೆ ಪ್ರಕೃತಿ ಚಿತ್ರಗಳು, ಲ್ಯಾಂಡ್ ಸ್ಕೇಪ್, ವ್ಯಕ್ತಿಚಿತ್ರಗಳನ್ನು ರಚಿಸಲು ಸಾಧ್ಯವಾಗಿದೆ. ಬೆಂಗಳೂರಿನ ಚಿತ್ರಸಂತೆ ಸೇರಿದಂತೆ ಚಿತ್ರದುರ್ಗದಲ್ಲಿಯೂ ೬-೭ ಬಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದೇನೆ ಎಂದರು.

ಚಿತ್ರಕಲೆಯ ಜತೆಗೆ ಚಾರಣ, ಚಿತ್ರದುರ್ಗದ ಜೋಗಿಮಟ್ಟಿಯಲ್ಲಿನ ಹೂಳು ತುಂಬಿದ ನೀರಿನ ಗುಂಡಿಗಳನ್ನು ಪುನರುಜ್ಜೀವನಗೊಳಿಸುವುದು, ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಲೆಂದು ಚಿತ್ರದುರ್ಗದ ಜೋಗಿಮಟ್ಟಿಯಲ್ಲಿ ಹಣ್ಣಿನ ಗಿಡಮರಗಳನ್ನು ಬೆಳೆಸುವುದು, ಅವುಗಳಿಗೆ ಬೇಸಿಗೆಯಲ್ಲಿ ನೀರನ್ನು ಹಾಕುವ ಮುಂತಾದ ಸೇವಾ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಸಂಡೂರಿನ ನಿಸರ್ಗ ಸೌಂದರ್ಯ ನನಗೆ ತುಂಬಾ ಸಂತೋಷ ಹಾಗೂ ಪ್ರೇರಣೆ ನೀಡಿದೆ ಎಂದರು.

ಗಣಿನಾಡು ಸಂಡೂರು ಗಣಿಗಾರಿಕೆಯಂತೆ ನಿಸರ್ಗ ಸೌಂದರ್ಯಕ್ಕೂ ಹೆಸರಾಗಿದೆ. ಇಲ್ಲಿನ ಮಲೆನಾಡು ಸದೃಶ ನಿಸರ್ಗ ಸೌಂದರ್ಯ ಚಿತ್ರಕಲಾವಿದರು, ಛಾಯಾಚಿತ್ರಕಾರರು, ಚಾರಣಿಗರು ಮುಂತಾದವರಿಗೆ ಪ್ರೇರಕವಾಗಿರುವುದಲ್ಲದೆ, ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.