ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್ ರಾಜೀನಾಮೆಯಿಂದ ತೆರವಾದ ತಾಲೂಕು ಕಸಾಪಕ್ಕೆ ನೂತನ ಅಧ್ಯಕ್ಷರಾಗಿ ಎಂ.ಬಿ.ಕುಮಾರ್ ಪದಗ್ರಹಣ ಮಾಡಿದರು.ಪಟ್ಟಣದ ರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮವನ್ನು ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಪಸರಿಸುವ ಕೆಲಸವನ್ನು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡಬೇಕು. 30 ವರ್ಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯ ಕೇಂದ್ರ ಭಾಗದಲ್ಲಿ ಆಯೋಜಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸ್ವಯಂ ಸೇವಕರಾಗಿ ದುಡಿದು ನಾಡು, ನುಡಿಗೆ ಹೋರಾಡಿದ ಮಹನೀಯರನ್ನು, ಗರಿಷ್ಠ ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕನ್ನಡದ ಮೇರು ಕವಿಗಳ ಕೊಡುಗೆಯನ್ನು ಸ್ಮರಿಸೋಣ ಎಂದರು.
ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಗೆ ಸಂಬಂಧಪಟ್ಟಂಥ ಪುಸ್ತಕಗಳು ಕನ್ನಡದಲ್ಲಿ ಮುದ್ರಣವಾಗುವ ವಾತಾವರಣ ನಿರ್ಮಾಣವಾಗಬೇಕು. ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರಜ್ಞೆಯಿಂದ ವಿದ್ಯಾರ್ಥಿಗಳಿಗೆ ಕವಿ ಮತ್ತು ಕಾವ್ಯದ ಅಭಿರುಚಿ ಪರಿಚಯಿಸುವಂತೆ ತಿಳಿಸಿದರು.ನೂತನ ಅಧ್ಯಕ್ಷ ಎಂ.ಬಿ.ಕುಮಾರ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಪ್ರತಿ ಶಾಲೆಗೊಂದು ಕಾರ್ಯಕ್ರಮ ಆಯೋಜಿಸಿ, ಗ್ರಾಮೀಣ ಪ್ರದೇಶದ ಯುವ ಕವಿಗಳನ್ನು ಗುರುತಿಸಿ ಗೌರವಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಕಸಾಪ ಭವನ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಸಹಕರಿಸಬೇಕು. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ವಿ. ಹರ್ಷ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ ಶ್ರೀನಿವಾಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್ ಲೋಕೇಶ್, ಕಜಾಪ ಅಧ್ಯಕ್ಷ ಸಿದ್ದಲಿಂಗು ಮಾತನಾಡಿದರು.ಪುರಸಭಾ ಸದಸ್ಯ ಎಂ. ನಂದೀಶ್, ಆಶಾಲತಾ ಪುಟ್ಟೇಗೌಡ, ಗಾಮನಹಳ್ಳಿ ಮಹಾದೇವಸ್ವಾಮಿ, ಮಹಾದೇವಪುರ ಕಾಳೇಗೌಡ, ಸ್ವಾಮಿಗೌಡ, ಸುರೇಶ್, ಪುರುಷೋತ್ತಮ, ಕೋ.ನ.ಪುರುಷೋತ್ತಮ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಗಂಜಾಂ ಮಂಜುನಾಥ್, ನಂಜೇಗೌಡ, ಕೆ.ಜೆ ಲೋಕೇಶ್, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಉಮಾಶಂಕರ್ ಸೇರಿ ಇತರರು ಭಾಗವಹಿಸಿದ್ದರು.