ಮಳೆಯಬ್ಬರಕ್ಕೆ ಕಂಗಾಲಾದ ಜನತೆ, ನಗರಸಭೆ ಅವ್ಯವಸ್ಥೆ ಅನಾವರಣ

| Published : Oct 18 2024, 12:14 AM IST

ಸಾರಾಂಶ

ಹಾವೇರಿ ಜಿಲ್ಲಾದ್ಯಂತ ಗುರುವಾರ ಬೆಳಗಿನ ಜಾವ ಸುರಿದ ಭಾರೀ ಮಳೆಗೆ ಜನ ಕಂಗಾಲಾಗಿದ್ದು, ಬಾಲಕನೊಬ್ಬ ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲಾ ಕೇಂದ್ರದಲ್ಲಿ ಸಂಭವಿಸಿದೆ. ನಗರದ ಪ್ರಮುಖ ರಸ್ತೆಗಳು ಹಳ್ಳದಂತೆ ಹರಿದಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ನಿದ್ದೆಗೆಡುವಂತೆ ಮಾಡಿದೆ.

ಹಾವೇರಿ: ಜಿಲ್ಲಾದ್ಯಂತ ಗುರುವಾರ ಬೆಳಗಿನ ಜಾವ ಸುರಿದ ಭಾರೀ ಮಳೆಗೆ ಜನ ಕಂಗಾಲಾಗಿದ್ದು, ಬಾಲಕನೊಬ್ಬ ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲಾ ಕೇಂದ್ರದಲ್ಲಿ ಸಂಭವಿಸಿದೆ. ನಗರದ ಪ್ರಮುಖ ರಸ್ತೆಗಳು ಹಳ್ಳದಂತೆ ಹರಿದಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ನಿದ್ದೆಗೆಡುವಂತೆ ಮಾಡಿದೆ.

ಬುಧವಾರ ತಡರಾತ್ರಿ ಆರಂಭವಾದ ಮಳೆ ಗುರುವಾರ ಬೆಳಗ್ಗೆವರೆಗೂ ಸುರಿದಿದೆ. ಇದರಿಂದ ನಗರದ ಹಳೆ ಪಿಬಿ ರಸ್ತೆ, ಹಾನಗಲ್ಲ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲ ಹಳ್ಳದಂತಾಗಿದೆ. ಚರಂಡಿ, ರಾಜಕಾಲುವೆಗಳು ಹೊಳೆಯಂತೆ ಹರಿದವು. ಈ ವೇಳೆ ಶಿವಾಜಿನಗರದ ನಿವೇದನ್‌ ಗುಡಗೇರಿ (12) ಬಾಲಕ ಚರಂಡಿ ದಾಟಲು ಯತ್ನಿಸಿದಾಗ ಅದರಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದರೂ ಬಾಲಕ ಸಿಗಲಿಲ್ಲ. ಜೆಸಿಬಿಗಳಿಂದ ಚರಂಡಿ ಸ್ಲ್ಯಾಬ್‌ಗಳನ್ನು ತೆರವುಗೊಳಿಸಲಾಯಿತು. ಪೊಲೀಸ್‌, ಅಗ್ನಿಶಾಮಕ, ನಗರಸಭೆ ಸಿಬ್ಬಂದಿ ಸುಮಾರು 2 ಗಂಟೆ ಕಾಲ ಹುಡುಕಾಟ ನಡೆಸಿದ ಬಳಿಕ ಬಾಲಕ ಸಿಕ್ಕಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆಯಿಂದ ಹೆತ್ತವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನಗರಸಭೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ಳಂಬೆಳಗ್ಗೆ ನಗರದಲ್ಲಿ ರಣಚಂಡಿಯಂತಾದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ನಾಗೇಂದ್ರನಮಟ್ಟಿ ಭಾಗದಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ನಿದ್ದೆಗೆಡುವಂತೆ ಮಾಡಿತು.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಎಎಸ್ಪಿ ಎಲ್.ವೈ.ಶಿರಕೋಳ, ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಇತರರು ಆಗಮಿಸಿ ಪರಿಶೀಲಿಸಿದರು.

ಸ್ಥಳೀಯರ ಪ್ರತಿಭಟನೆ: ಬಾಲಕನ ಸಾವಿಗೆ ಹಾವೇರಿ ನಗರಸಭೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಸ್ಥಳೀಯ ನಿವಾಸಿಗಳು ಸುಮಾರು ಎರಡು ಗಂಟೆ ಪಿಬಿ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮುನ್ಸಿಪಲ್ ಮೈದಾನದಿಂದ ಮಳೆನೀರು ಹರಿದು ಎಸ್‌ಪಿ ಕಚೇರಿ ಕಡೆಗೆ ಬರುತ್ತದೆ. ಪಿಬಿ ರಸ್ತೆಯ ಅಕ್ಕಪಕ್ಕದ ಎರಡೂ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಮಳೆ ಬಂದಾಗ ನೀರು ಶಿವಾಜಿ ನಗರದ ಮನೆಗಳಿಗೆ ನುಗ್ಗುತ್ತದೆ. ಕಳೆದ ಹತ್ತಾರು ವರ್ಷಗಳಿಂದ ಶಿವಾಜಿ ನಗರದಲ್ಲಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲು ಒತ್ತಾಯಿಸಿದರೂ ಯಾರೂ ಗಮನಿಸುತ್ತಿಲ್ಲ. ಹೀಗಾಗಿ ದೊಡ್ಡ ಅನಾಹುತ ಸಂಭವಿಸಿದೆ. ಇನ್ನಾದರೂ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಬಾಲಕನ ಸಾವಿಗೆ ನ್ಯಾಯ ದೊರಕಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಬಾಲಕನ ಸಾವಿಗೆ ನೀವೇ ಹೊಣೆಗಾರರು ಎಂದು ಆಕ್ರೋಶ ಹೊರಹಾಕಿದರು. ಇಬ್ಬರ ಅಮಾನತು: ಯೂನಿಯನ್ ಬ್ಯಾಂಕ್ ಸಮೀಪದ ದೊಡ್ಡ ಆಲದಮರವನ್ನು ಕೊರೆಯಲು ಚರಂಡಿ ಮೇಲೆ ಹಾಕಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಲಾಗಿತ್ತು. ಬಳಿಕ ಚರಂಡಿ ಮೇಲೆ ಕಲ್ಲು ಮುಚ್ಚದೇ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶಿಸಿದ್ದಾರೆ.ಮುಗಿಲು ಮುಟ್ಟಿದ ಆಕ್ರಂದನ: ಆಟವಾಡಲು ತೆರಳಿದ್ದ ಮುದ್ದಾದ ಮಗನನ್ನು ಕಳೆದುಕೊಂಡ ಪಾಲಕರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಮೃತ ಬಾಲಕನ ತಂದೆ ಟ್ಯಾಕ್ಸಿ ಓಡಿಸುವ ಮೂಲಕ ಜೀವನ ನಡೆಸುತ್ತಿದ್ದರು. ಬಸವರಾಜ ಕಾರು ಬಾಡಿಗೆ ಬಂದಿದ್ದರಿಂದ ಶಿವಮೊಗ್ಗಕ್ಕೆ ತೆರಳಿದ್ದರು. ಮನೆಯಲ್ಲಿದ್ದ ತಾಯಿಗೆ ವಿಷಯ ತಿಳಿಯುತ್ತಿದ್ದಂತೆ ಕಣ್ಣೀರಿಡುತ್ತಾ, ನನ್ನ ಮಗನನ್ನು ಹೇಗಾದರೂ ಮಾಡಿ ರಕ್ಷಿಸಿ ಕೊಡಿ ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಜಿಲ್ಲಾದ್ಯಂತ ಮಳೆಯಬ್ಬರ: ಜಿಲ್ಲಾದ್ಯಂತ ಮಳೆ ಅಬ್ಬರಿಸಿದ್ದು ವರದಾ ನದಿ ತುಂಬಿ ಹರಿಯುತ್ತಿದೆ. ಕಟಾವಿಗೆ ಬಂದಿರುವ ಹಾಗೂ ಕಟಾವು ಮಾಡಿ ಒಣಗಲು ಹಾಕಿಟ್ಟಿರುವ ಮೆಕ್ಕೆಜೋಳ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಅನೇಕ ಶಾಲೆಗಳ ಆವರಣದಲ್ಲಿ ನೀರು ನುಗ್ಗಿದೆ. ಬೆಳೆಗಳು ಜಲಾವೃತಗೊಂಡಿವೆ. ಹಾನಗಲ್ಲ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.