ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಜಿಲ್ಲೆಯಲ್ಲಿ ೮೦ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದು, ಅದರಲ್ಲಿ ನಾಲ್ಕು ಮಾರ್ಗಗಳು ರದ್ದಾಗಿವೆ. ಅವನ್ನು ಮತ್ತೆ ಬಿಡುವಂತೆ ಸಂಬಂಧಿಸಿದ ಡಿಪೋ ವ್ಯವಸ್ಥಾಪಕರಲ್ಲಿ ಮನವಿ ಮಾಡಲಾಗುವುದು. ಶಕ್ತಿ ಯೋಜನೆಯಲ್ಲಿ ೭೫,೪೪,೬೪೬ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಅದರ ಬಾಬ್ತು ರು. ೨೯,೭೨,೧೫,೦೫೯ ಹಣವನ್ನು ಇಲಾಖೆಗೆ ರಾಜ್ಯ ಸರ್ಕಾರ ತುಂಬಿಸಿಕೊಟ್ಟಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.ಕೊಡಗು ಪತ್ರಕರ್ತರ ಸಂಘದ, ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾಭವನದಲ್ಲಿ ಬುಧವಾರ ಕೆಎಸ್‌ಆರ್‌ಟಿಸಿ ಮಾರ್ಗದ ಬಗ್ಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.ಇಂದಿಗೂ ತಾಲೂಕಿನ ಹಲವು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯಾಗದ ಬಗ್ಗೆ ಕೇಳಲಾದ ಪ್ರಶ್ನೆಗೆ, ಗ್ರಾಮೀಣ ಭಾಗದ ಜನರಿಗೆ ಸೂಕ್ತ ಸೇವೆ ನೀಡುವ ನಿಟ್ಟಿನಲ್ಲಿ ಮತ್ತು ರಾಜ್ಯ ಸರ್ಕಾರದ ಪ್ರಮುಖವಾದ ಶಕ್ತಿ ಯೋಜನೆಯನ್ನು ಎಲ್ಲ ಮಹಿಳೆಯರು ಪಡೆಯಬೇಕೆಂಬ ಉದ್ದೇಶದಿಂದ ನೂತನ ಬಸ್ ಮಾರ್ಗಗಳನ್ನು ಹಾಕಲಾಗುತ್ತಿದೆ. ಮಡಿಕೇರಿ ಮತ್ತು ವಿರಾಜಪೇಟೆಗೆ ವಿದ್ಯುತ್ ಚಾಲಿತ ಬಸ್ ಬರುತ್ತಿವೆ. ಅದರಂತೆ ಸೋಮವಾರಪೇಟೆ ಪಟ್ಟಣಕ್ಕೂ ಬಸ್ ತರುವ ಕನಸು ಇದೆ, ಅದಕ್ಕಾಗಿ ಅಧಿಕಾರಿಗಳು ಮಾರ್ಗದ ಸಮೀಕ್ಷೆ ನಡೆಸುತ್ತಿದ್ದಾರೆ ಎಂದರು.
ಇಲ್ಲಿಯವರೆಗೆ ಜಿಲ್ಲೆಯಲ್ಲೇ ನೋಂದಣಿಯಾದ ಇಲಾಖೆಯ ಬಸ್‌ಗಳ ಸಂಚಾರ ಇರಲಿಲ್ಲ. ಐದು ಅಶ್ವಮೇಧ ಬಸ್‌ಗಳನ್ನು ಜಿಲ್ಲಾ ನೋದಣಿ ಸಂಖ್ಯೆಯಲ್ಲಿ ನೊಂದಾಯಿಸಿ, ಅಂತರ್ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ಮಾರ್ಗಗಳಿಗೆ ಬಸ್ ಮಾರ್ಗಗಳನ್ನು ಹಾಕಲು ಚಿಂತಿಸಲಾಗಿದೆ. ಅದರಲ್ಲಿ ಒಂದು ಬಸ್ಸನ್ನು ಪಕ್ಕದ ಕೇರಳ ರಾಜ್ಯದ ತಲಚೇರಿಗೆ ಸಂಪರ್ಕಿಸಲು ಆರಂಭಿಸಲಾಗುವುದು ಎಂದು ಹೇಳಿದರು.ಪುಟ್ಟ ಜಿಲ್ಲೆ ಕೊಡಗಿನಲ್ಲಿ ಸೋಮವಾರಪೇಟೆಯಿಂದ ಮಡಿಕೇರಿ ಹೊರತು ಪಡಿಸಿದಂತೆ ಇತರೆಡೆಗಳಿಗೆ ಇಲಾಖೆಯಿಂದ ಬಸ್ ಸಂಚಾರ ಇಲ್ಲದಿರುವ ಬಗ್ಗೆ ಗಮನ ಸೆಳೆದಾಗ, ಕುಶಾಲನಗರದಲ್ಲಿ ಬಸ್ ಡಿಪೋ ಕಾಮಗಾರಿ ಪ್ರಾರಂಭವಾಗಿದ್ದು, ಡಿಪೋ ಪ್ರಾರಂಭವಾದಲ್ಲಿ ಜಿಲ್ಲೆಯ ನಗರ ಪ್ರದೇಶಗಳನ್ನು ಸಂಪರ್ಕಿಸುವ ಮಾರ್ಗಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಕೇಂದ್ರಕ್ಕೆ ತಾಲೂಕು ಕೇಂದ್ರದಿಂದ ಬೆಳಗ್ಗೆ 9.45ರ ನಂತರ ಬಸ್ ಸಂಚಾರ ಇಲ್ಲದಿರುವ ಬಗ್ಗೆ ಚರ್ಚಿಸಲಾಗಿ, ಗ್ರಾಮೀಣ ಸೇವೆಯನ್ನು ಕೊಡ್ಲಿಪೇಟೆಯಿಂದ ಮಡಿಕೇರಿ ಮತ್ತು ಕೋಡ್ಲಿಪೇಟೆಯಿಂದ ಕುಶಾಲನಗರಕ್ಕೆ ಪ್ರಾರಂಭಿಸಲು ಇಲಾಖೆಯೊಂದಿಗೆ ಮಾತನಾಡುವುದಾಗಿ ತಿಳಿಸಿದರು.ಕೆಲವು ಮಾರ್ಗಗಳು ನಷ್ಟದಲ್ಲಿ ಸಂಚರಿಸಿದರೂ, ಸಚಿವ ರಾಮಲಿಂಗ ರೆಡ್ಡಿ ಸೂಚನೆಯಂತೆ ಇಲಾಖಾಧಿಕಾರಿಗಳು ಮಾರ್ಗ ನಿಲ್ಲಿಸುವುದು ಬೇಡ. ಯಾವುದೇ ಯೋಜನೆಗಳು ಯಶಸ್ವಿಯಾಗಬೇಕಾದರೆ ಅದಕ್ಕೆ ಸ್ಥಳೀಯರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಆರ್. ಹರೀಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಜಾನ್‌ದಾಸ್ ಇದ್ದರು.