ಶಿಕ್ಷಕರಿಗೆ ಧನ್ಯತಾಭಾವ ಮಿಡಿದ ಹಂಪನೂರು ಜನತೆ

| Published : Dec 31 2024, 01:01 AM IST

ಸಾರಾಂಶ

ಸಿರಿಗೆರೆ ಸಮೀಪದ ಹಂಪನೂರು ಗ್ರಾಮದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ ಅವರ ಬದುಕಿನಲ್ಲಿ ಬಣ್ಣದ ಚಿತ್ತಾರ ಬರೆದ ಶಿಕ್ಷಕರಿಗೆ ಊರಿಗೂರೇ ಸೇರಿ ಧನ್ಯತೆ ಮೆರೆದು ಸಂಭ್ರಮಿಸಿದ ಕಾರ್ಯಕ್ರಮ ಸಿರಿಗೆರೆ ಸಮೀಪದ ಹಂಪನೂರು ಗ್ರಾಮದಲ್ಲಿ ಜರುಗಿದೆ.

ಹಂಪನೂರು ಗ್ರಾಮದ ಮಕ್ಕಳು ಮತ್ತು ನಾಗರೀಕರಲ್ಲದೆ ಸುತ್ತಲಿನ ನೀರ್ಥಡಿ, ಹಳುವುದರ, ಹೆಗ್ಗೆರೆ, ಎಮ್ಮೆಹಟ್ಟಿ ಗ್ರಾಮದ ಜನರೂ ಸೇರಿ ಈ ಕಾರ್ಯಕ್ರಮಕ್ಕೆ ವೈವಿಧ್ಯತೆಯ ಮೆರಗು ತಂದಿದ್ದಾರೆ.

1994 ರಿಂದ 2012ರ ವರೆಗೆ ಹಂಪನೂರು ಗ್ರಾಮದ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿದ 65ಕ್ಕೂ ಹೆಚ್ಚು ಶಿಕ್ಷಕರನ್ನು ಒಂದೇ ವೇದಿಕೆಗೆ ಕರೆತಂದು ಸತ್ಕರಿಸಿದ ಕೀರ್ತಿಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ಕಾರಣರಾಗಿದ್ದಾರೆ. ಈ ಅಪರೂಪದ ಗುರುವಂದನೆಯ ಸಡಗರದಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಹಿರಿಯ ವಿದ್ಯಾರ್ಥಿಗಳೂ, ಮೂರು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಸಂಭ್ರಮದಿಂದ ಭಾಗಿಯಾಗಿ ಕಾರ್ಯಕ್ರವನ್ನು ಯಶಸ್ವಿಗೊಳಿಸಿದ್ದಾರೆ.

ಇವರು ಕೇವಲ ಅಕ್ಷರಜ್ಞಾನ ದಾಸೋಹಿಗಳಲ್ಲದೆ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಿದ ತಂಡವಾಗಿತ್ತು ಎಂಬುದು ಗ್ರಾಮದ ಹಿರಿಯರ ಅಭಿಪ್ರಾಯ.

ಗ್ರಾಮದ ರಥಬೀದಿಯಲ್ಲಿ ಸಮಾರಂಭಕ್ಕೆ ದೊಡ್ಡದಾದ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಶಿಕ್ಷಕರನ್ನು ಊರಿನ ಮುಖ್ಯರಸ್ಥೆಯಲ್ಲಿ ಬರಮಾಡಿಕೊಂಡು ಟ್ರಾಕ್ಟರ್‌ನಲ್ಲಿ ಮೆರವಣಿಗೆ ಮಾಡಿದ್ದಾರೆ. ಡೊಳ್ಳು ಕುಣಿತ, ಸಮೇವು, ಡಿಜೆ ಜೊತೆಗೆ ಹಲವು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಶಿಕ್ಷಕರ ಹೃದಯ ಗೆದ್ದಿದ್ದಾರೆ. ಊರಿನ ಬೀದಿಗಳೆಲ್ಲವೂ ತಳಿರು ತೋರಣಗಳಿಂದ ಸಿಂಗಾರಗೊಂಡು ಶಿಕ್ಷಕರ ಸಾರ್ಥಕತೆಯನ್ನು ಬಣ್ಣಿಸಿವೆ.

ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕರು ದೀಪ ಬೆಳಗಿಸಿ, ಶಾರದಾದೇವಿ, ಸರ್ವಪಲ್ಲಿ ರಾಧಾಕೃಷ್ಣ, ಸಾವಿತ್ರಿಬಾಯಿ ಪುಲೆ ಇವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿದ್ದಾರೆ. ಸಮಾರಂಭದಲ್ಲಿ ಮಾತನಾಡಿದವರೆಲ್ಲ ಶಿಕ್ಷಕರ ಗುಣಗಾನ ಮಾಡಿ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. ಜೊತೆಗೆ ನೆನಪಿನ ಕಾಣಿಕೆ ನೀಡಿ, ಶಾಲು, ಮೈಸೂರು ಪೇಟ, ಫಲಪುಷ್ಪ ನೀಡಿ ಗೌರವಿಸಿದ್ದಾರೆ. ದಶಕಗಳ ಹಿಂದೆ ಬೇರೆ ಬೇರೆ ಕಡೆ ವರ್ಗಾವಣೆಗೊಂಡಿದ್ದ ಶಿಕ್ಷಕರನ್ನು ಒಂದೇಡೆ ಸೇರಿಸಿ ಅವರಿಗೆ ಗೌರವ ಸತ್ಕಾರ ನೀಡಿದ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಧನ್ಯತೆಯ ಭಾವದಲ್ಲಿ ಮಿಂದುಹೋಗಿದ್ದಾರೆ.