ರುದ್ರಭೂಮಿಗೆ ತೆರಳಲು ಕಾಲು ಸಂಕದ ದುಸ್ಥಿತಿ

| Published : Sep 15 2025, 01:00 AM IST

ರುದ್ರಭೂಮಿಗೆ ತೆರಳಲು ಕಾಲು ಸಂಕದ ದುಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ರುದ್ರಭೂಮಿಗೆ ಶವ ಸಾಗಿಸಲು ಕಾಲು ಸಂಕ ಆಶ್ರಯಿಸಿರುವ ತಾಲೂಕಿನ ಬರದವಳ್ಳಿ ಗ್ರಾಮಸ್ಥರಿಗೆ ಮೃತಪಟ್ಟವರ ಬಗೆಗಿನ ದುಃಖಕ್ಕಿಂತ ಚಿಂತೆಯೇ ಜಾಸ್ತಿಯಾಗುತ್ತದೆ. ಸುಮಾರು ೬೦ ವರ್ಷಗಳಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಲು ಸಂಕದ ಮೇಲಿನ ನಡುಗೆಯ ದುಸ್ಸಾಹಸಕ್ಕೆ ಕೊನೆ ಇಲ್ಲವಾಗಿದೆ....

- ಎಚ್.ಕೆ.ಬಿ. ಸ್ವಾಮಿಕನ್ನಡಪ್ರಭ ವಾರ್ತೆ ಸೊರಬ

ರುದ್ರಭೂಮಿಗೆ ಶವ ಸಾಗಿಸಲು ಕಾಲು ಸಂಕ ಆಶ್ರಯಿಸಿರುವ ತಾಲೂಕಿನ ಬರದವಳ್ಳಿ ಗ್ರಾಮಸ್ಥರಿಗೆ ಮೃತಪಟ್ಟವರ ಬಗೆಗಿನ ದುಃಖಕ್ಕಿಂತ ಚಿಂತೆಯೇ ಜಾಸ್ತಿಯಾಗುತ್ತದೆ. ಸುಮಾರು ೬೦ ವರ್ಷಗಳಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಲು ಸಂಕದ ಮೇಲಿನ ನಡುಗೆಯ ದುಸ್ಸಾಹಸಕ್ಕೆ ಕೊನೆ ಇಲ್ಲವಾಗಿದೆ....ತಾಲೂಕಿನ ನ್ಯಾರ್ಶಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಬರದವಳ್ಳಿ ಗ್ರಾಮದಲ್ಲಿ ಸುಮಾರು ೧೫೦ ಮನೆಗಳಿವೆ. ಸೊರಬ ಪಟ್ಟಣದಿಂದ ೨೫ ಕಿ.ಮೀ. ಮತ್ತು ಚಂದ್ರಗುತ್ತಿ ಗ್ರಾಮದಿಂದ ೫ ಕಿ.ಮೀ. ದೂರದಲ್ಲಿದೆ. ಗ್ರಾಮ ಅಸ್ತಿತ್ವಕ್ಕೆ ಬಂದು ಸುಮಾರು ೬೦ ವರ್ಷಗಳು ಸವೆದಿವೆ. ಇಲ್ಲಿಯವರೆಗೂ ಶವ ಸಂಸ್ಕಾರಕ್ಕೆ ರುದ್ರಭೂಮಿಗೆ ತೆರಳಲು ಅಡ್ಡಲಾಗಿ ಹರಿಯುವ ವರದಾ ನದಿಯ ಕವಲು ನೀರಾಗಿ ಹರಿಯುವ ಹಳ್ಳ ದಾಟಿ ಸಾಗಬೇಕು. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ ಬೇಸಿಗೆ ಕಾಲದಲ್ಲಿ ನಾಲ್ಕೈದು ಅಡಿಗಳಷ್ಟು ನೀರು ತುಂಬಿರುತ್ತದೆ. ಗ್ರಾಮಸ್ಥರು ಶವ ಸಂಸ್ಕಾರಕ್ಕೆಂದು ರುದ್ರಭೂಮಿಗೆ ತೆರಳಲು ನೀರಿನಲ್ಲಿ ಹರಸಾಹಸ ಪಡಬೇಕಿದೆ. ಕಾಲು ಸಂಕದಲ್ಲಿ ಸಾಗಲು ನಾಲ್ಕು ಜನ ಸರ್ಕಸ್ ಮಾಡಬೇಕಾಗುತ್ತದೆ. ಕಳೆದ ೧೫ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಒಡನಾಡಿ ಗ್ರಾಮದ ನಾರಾಯಣಪ್ಪ ಎಂಬುವವರ ಮೃತ ದೇಹವನ್ನು ಹಳ್ಳದಲ್ಲಿ ತೇಲಿಸಿ ಮತ್ತೊಂದು ದಡಕ್ಕೆ ಸಾಗಿಸಲಾಗಿತ್ತು. ಹೀಗಿದ್ದೂ ಕೂಡಾ ಜನಪ್ರತಿನಿಧಿಗಳು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮಸ್ಥರ ಆಕ್ರೋಶವ್ಯಕ್ತಪಡಿಸಿದ್ದಾರೆ.ಅಲ್ಲದೇ ರುದ್ರಭೂಮಿಯ ಅಜುಬಾಜಿನಲ್ಲಿ ಬರದವಳ್ಳಿ ಗ್ರಾಮದ ೮ ಕುಟುಂಬಗಳು ವಾಸಿಸುತ್ತವೆ. ಅವರಿಗೆ ಮೂಲಭೂತ ಸೌಲಭ್ಯಗಳು ದೊರೆಯಬೇಕೆಂದರೆ ಹಳ್ಳ ದಾಟಬೇಕು. ಕೃಷಿ ಭೂಮಿಗೆ ಗೊಬ್ಬರ, ಔಷಧಿ, ಬೆಳೆದ ಫಸಲನ್ನು ಮಾರಲು ಕಾಲು ಸಂಕವನ್ನೇ ಅವಲಂಭಿಸಿದ್ದಾರೆ. ಅಡುಗೆ ಅನಿಲದ ಸಿಲಿಂಡರ್‌ನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಹಗ್ಗ ಕಟ್ಟಿ ಸಾಗಿಸುವ ದುಸ್ಥಿತಿಯಲ್ಲಿದ್ದಾರೆ. ಮಳೆಗಾಲದಲ್ಲಿ ಹಳ್ಳಕ್ಕೆ ಅಡ್ಡಲಾಗಿ ಹಾಕಿದ ಸಂಕ ನೀರಿನ ರಭಸಕ್ಕೆ ಕೊಚ್ಚಿಹೋಗುತ್ತದೆ. ಇದರಿಂದ ಸಂಪರ್ಕ ಕಡಿತಗೊಳ್ಳುತ್ತದೆ. ವಿದ್ಯಾರ್ಥಿಗಳು ತುಂಬಿದ ಹಳ್ಳ ದಾಟಲು ಸಾಧ್ಯವಾಗದೇ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಅನಾರೋಗ್ಯದಿಂದ ನರಳುತ್ತಿದ್ದರೂ ಯಾರೂ ಸಹಾಯಕ್ಕೆ ಬರದ ಪರಿಸ್ಥಿತಿ ಗ್ರಾಮಸ್ಥರದ್ದು. ಫೋನ್ ಮಾಡಲು ನೆಟ್‌ವರ್ಕ್ ಸಹ ಇಲ್ಲ. ಹಾಗಾಗಿ ಹಳ್ಳಕ್ಕೆ ಅಡ್ಡಲಾಗಿ ಕಿರು ಸೇತುವೆ ಬೇಕಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಭೇಟಿ ಮಾಡಿ ಗ್ರಾಮದ ರುದ್ರಭೂಮಿಗೆ ತೆರಳಲು ಅಡ್ಡಲಾಗಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿತ್ತು. ನಂತರದ ದಿನಗಳಲ್ಲಿ ಶಾಸಕರಾಗಿದ್ದ ಕುಮಾರ ಬಂಗಾರಪ್ಪ, ಎಚ್.ಹಾಲಪ್ಪ, ಮಧು ಬಂಗಾರಪ್ಪ ಅವರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಸೇತುವೆ ಪ್ರಸ್ತಾಪಕ್ಕೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಇಲ್ಲ. ಗ್ರಾಮದಲ್ಲಿರುವ ಸ್ಥಳೀಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ನಿರ್ಲಿಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮುಂದಿನ ದಿನಗಳಲ್ಲಾದರೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಪಂದಿಸಿ ರುದ್ರಭೂಮಿಗೆ ತೆರಳಲು ಕಿರು ಸೇತುವೆ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಬರದವಳ್ಳಿ ಗ್ರಾಮದಲ್ಲಿ ಅಡ್ಡಲಾಗಿ ಹರಿಯುತ್ತಿರುವ ಹಳ್ಳದಿಂದ ಶವ ಸಂಸ್ಕಾರಕ್ಕೆ ಯಾತನೆ ಪಡುವಂತಾಗಿದೆ. ಎಲ್ಲದಕ್ಕೂ ಕಾಲು ಸಂಕವನ್ನೇ ಅವಲಂಭಿಸಿದ್ದೇವೆ. ಯಾರಿಗಾದರೂ ಹುಷಾರಿಲ್ಲ ಎಂದರೆ ತಕ್ಷಣ ಆಸ್ಪತ್ರೆಗೆ ತೆರಳಲು ಯಾವುದೇ ಸೌಲಭ್ಯವಿಲ್ಲ. ಹಳ್ಳ ದಾಟುವಷ್ಟರಲ್ಲಿ ವ್ಯಕ್ತಿ ಸಾವು ಕಂಡಿರುತ್ತಾನೆ. ಈ ಬಗ್ಗೆ ಎಸ್.ಬಂಗಾರಪ್ಪ ಅವರ ಕಾಲದಿಂದ ಈಗಿನವರೆಗೂ ಒಂದು ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದೇವೆ. ಪ್ರಯೋಜನವಾಗಿಲ್ಲ – ರುದ್ರಮ್ಮ (೮೦), ಹಿರಿಯ ಗ್ರಾಮಸ್ಥೆ, ಬರದವಳ್ಳಿ

ರುದ್ರಭೂಮಿಗೆ ತೆರಳಲು ಕಾಲು ಸಂಕ ಅವಲಂಭಿಸಬೇಕಿದೆ. ಬೇಸಿಗೆಯಲ್ಲಿ ಗ್ರಾಮಸ್ಥರು ಸುಮಾರು ೪೦ ಸಾವಿರ ರು.ಗಳಷ್ಟು ಹಣ ವಿನಿಯೋಗಿಸಿ ಹಳ್ಳದಲ್ಲಿರುವ ೩-೪ ಅಡಿ ನೀರಿಗೆ ಮಣ್ಣು ತುಂಬಿಸಲಾಗುತ್ತದೆ. ನೀರಿನ ಕೊರೆತದಿಂದ ಬಹಳ ದಿನ ಇರುವುದಿಲ್ಲ. ಕೊಚ್ಚಿಹೋಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಕನಿಷ್ಠ ೮*೨೫ ಅಡಿಯ ಕಿರು ಸೇತುವೆಯನ್ನಾದರೂ ನಿರ್ಮಿಸಬೇಕಿದೆ

- ಪ್ರವೀಣ್, ಬರದವಳ್ಳಿ ಗ್ರಾಮಸ್ಥ

ಉದ್ಯೋಗ ಖಾತರಿ ಯೋಜನೆಗೆ ಬರದವಳ್ಳಿ ಗ್ರಾಮವನ್ನು ಸೇರಿಸಿಕೊಳ್ಳುವ ಪ್ರಸ್ತಾಪವಿದೆ. ಹಾಗಾಗಿ ರುದ್ರಭೂಮಿಗೆ ತೆರಳಲು ಅಡ್ಡಲಾಗಿರುವ ಹಳ್ಳಕ್ಕೆ ೫ ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ಕಾಲು ಸಂಕ ನಿರ್ಮಿಸುವ ಯೋಜನೆ ಇದೆ. ಇದರಲ್ಲಿ ದ್ವಿಚಕ್ರ ವಾಹನ ಮಾತ್ರ ತೆರಳಲು ಸಾಧ್ಯವಾಗುತ್ತದೆ. ವಿಶಾಲವಾದ ಸೇತುವೆ ನಿರ್ಮಾಣ ಗ್ರಾಪಂ ವ್ಯಾಪ್ತಿಗೆ ಬರುವುದಿಲ್ಲ

- ಸುದರ್ಶನ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ನ್ಯಾರ್ಶಿ