ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಗುಬ್ಬಿ ತಾಲೂಕಿನ ಕುಗ್ರಾಮದ ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿ ಸ್ವ-ಪ್ರತಿಭೆಯಿಂದ ಕನ್ನಡದಲ್ಲಿ ಮಾಸ್ಟರ್ ಪದವಿಯನ್ನು ಪಡೆದು ಕನ್ನಡ ಸಾಹಿತ್ಯ ವಲಯದಲ್ಲಿ ಕವಿಯಾಗಿ ಬೆಳೆದ ನಾಗಪ್ಪ ಎನ್. ಅವರು ಗ್ರಾಮೀಣ ಪರಿಸರದಲ್ಲಿ ಬೆಳೆದು ಬೆಳಗಿದ ಅಪ್ಪಟ ಕನ್ನಡ ಪ್ರತಿಭೆ ಎಂದು ಸಂಸ್ಕೃತಿ ಚಿಂತಕರು, ಹೋರಾಟಗಾರರೂ ಆದ ದೊರೈರಾಜ್ ಬಣ್ಣಿಸಿದರು.ಅವರು ಜಿಲ್ಲಾ ಕಸಾಪ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಎನ್.ನಾಗಪ್ಪ ನುಡಿನಮನ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ಪಂಚಾಯತ್ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಕವಿ ನಾಗಪ್ಪನವರು ಮೌಢ್ಯದ ವಿರುದ್ಧ ಸಾರ್ವಜನಿಕ ಸಮಸ್ಯೆಗಳ ವಿರುದ್ಧ ಅಲ್ಲದೆ ಬಂಡಾಯ ಸಾಹಿತ್ಯ ಚಳುವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಸಾರ್ವಜನಿಕವಾಗಿ ಹೋರಾಟ ಮಾಡಿದ್ದರೂ ಅಂತಿಮವಾಗಿ ಅವರು ಕೌಟುಂಬಿಕ ಸಮಸ್ಯೆಗಳಿಗೆ ಸಿಲುಕಿ ಅವುಗಳನ್ನು ಎದುರಿಸಲಾಗದೆ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದು ದುರಾದೃಷ್ಟಕರ ಸಂಗತಿ. ಅವರ ನಿಧನ ಕನ್ನಡ ಕಾವ್ಯಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದರು.ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಮಾತನಾಡಿ, ಮೃದು ಸ್ವಭಾವದ ನಾಗಪ್ಪ ಸದಾ ಹಸನ್ಮುಖಿಯಾಗಿದ್ದರು. ಯಾರ ಮೇಲೂ ಕೋಪಗೊಂಡವರಲ್ಲ. ಸಮಕಾಲೀನ ಸಮಾಜದ ಸಂಗತಿಗಳನ್ನೆತ್ತಿಕೊಂಡು ಕಾವ್ಯ ರಚಿಸುತ್ತಿದ್ದ ನಾಗಪ್ಪನವರು ಕವಿ ಹೃದಯವಾಗಿತ್ತು. ನಿವೃತ್ತರಾದ ಮೇಲೂ ಬೋಧನಾ ವೃತ್ತಿಯನ್ನು ಬಿಡದೆ ಖಾಸಗಿ ಕಾಲೇಜುಗಳಿಗೆ ಹೋಗಿ ಬೋಧಿಸುತ್ತಿದ್ದರು. ಹಣಕಾಸಿನ ಸಮಸ್ಯೆ ಅವರನ್ನು ಧೃತಿಗೆಡಿಸಿತು. ಅದನ್ನು ಯಾರ ಬಳಿಯೂ ಹೇಳಿಕೊಳ್ಳದೆ ತನ್ನ ಕಷ್ಟವನ್ನು ತಾನೇ ಅನುಭವಿಸಿ ಸಾಹಿತ್ಯ ಲೋಕವನ್ನೇ ಬಿಟ್ಟುಹೋಗಿದ್ದುದು ವಿಷಾದನೀಯ ಸಂಗತಿ ಎಂದರು.ಕಲಾಶ್ರೀ ಲಕ್ಷ್ಮಣದಾಸ್ ಮಾತನಾಡಿ ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿದ್ದ ಎನ್.ನಾಗಪ್ಪನ ಕವಿತೆಗಳು ಅತ್ಯಂತ ಪ್ರಖರವಾದವುಗಳು. ಅವರು ನೂರಾರು ಕವಿತೆಗಳನ್ನು ಬರೆದಿದ್ದರೂ ಒಂದೇ ಒಂದು ಕವನ ಸಂಕಲನವನ್ನು ಪ್ರಕಟಿಸಿದರು. ಆ ಸಂಕಲನಕ್ಕೆ ಹರಿಹರ ಶ್ರೀ ರಾಜ್ಯಮಟ್ಟದ ಪ್ರಶಸ್ತಿ ಬಂದುದು ಅವರ ಕವಿತೆಗಳ ಮೌಲ್ಯವನ್ನು ತಿಳಿಸುತ್ತದೆ. ನಂತರ ಅವರು ರಂಗಭೂಮಿಯ ಶೋಕ ಗೀತೆಯೊಂದನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಬಾಂಧವ್ಯ ಹೊಂದಿದ್ದ ನಾಗಪ್ಪನವರು ಗುಬ್ಬಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರು ಅಲ್ಲಿ ಮಾಡಿದ
ಭಾಷಣ ಅವರ ಸಾಹಿತ್ಯಪರ ಚಿಂತನೆಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಪರಿಷತ್ತಿನ ಅನೇಕ ಕವಿಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿ ಉದಯೋನ್ಮುಖ ಕವಿಗಳಿಗೆ ತಮ್ಮ ಮಾತಿನ ಮೂಲಕ ಅವರನ್ನು ನೋಯಿಸದೆ ಪ್ರೇರಣೆ ನೀಡಿ ಮಾರ್ಗದರ್ಶನ ಮಾಡುತ್ತಿದ್ದರು. ಇಂತಹ ಪ್ರಸಿದ್ಧ ಕವಿಯ ಅಂತ್ಯ ದುರಂತಮಯವಾಗಿದ್ದುದು ದುರಾದೃಷ್ಟ ಎಂದರು.ನುಡಿನಮನ ಸಭೆಯಲ್ಲಿ ಮುರಳಿಕೃಷ್ಣಪ್ಪ, ನಾಗಪ್ಪನವರ ಹಲವಾರು ವರ್ಷಗಳ ಸಹೋದ್ಯೋಗಿ ಜನಾರ್ಧನಯ್ಯ, ಡಾ. ಶಿವಣ್ಣ ಬೆಳವಾಡಿ, ವೆಂಕಟೇಶ್, ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ, ಜಿ.ಹೆಚ್.ಮಹದೇವಪ್ಪ, ಕಾರ್ಯದರ್ಶಿ ಡಾ. ಸಣ್ಣಹೊನ್ನಯ್ಯ ಕಂಟಲಗೆರೆ, ಡಾ. ಟಿ.ಆರ್.ಲೀಲಾವತಿ, ಕೆಂಕೆರೆ ಮಲ್ಲಿಕಾರ್ಜುನ, ಅಬ್ಬಿನಹೊಳೆ ಸುರೇಶ್ ಇತರರು ಹಾಜರಿದ್ದು ಮಾತನಾಡಿದರು.